ಜಿಲ್ಲೆ

ಸಂಸತ್‌ನಲ್ಲಿ ಪ್ರಜ್ವಲ್‌ನನ್ನು ನೋಡೇ ಇಲ್ಲ: ದೆಹಲಿ ಸಂಸದ ಮನೋಜ್ ತಿವಾರಿ

     ಹಾಸನ : ಜಿಲ್ಲೆಯ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಸಂಸತ್‌ನಲ್ಲಿ ಇದುವರೆಗೂ ನೋಡೆ ಇಲ್ಲ. ಅವರು ಹಾಸನ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಸಂಸತ್‌ನಲ್ಲಿ ಗಮನ ಸೆಳೆಯುವಲ್ಲಿ ವಿಫಲರಾಗಿದ್ದಾರೆ ಎಂದು ದೆಹಲಿ ಸಂಸದ ಹಾಗೂ ಹಾಸನ ಕ್ಷೇತ್ರದ ಬಿಜೆಪಿ ವೀಕ್ಷಕ ಮನೋಜ್ ತಿವಾರಿ ಹೇಳಿದರು.

ನಾನು ಕೂಡ ಸಂಸದನಾಗಿ ಸಂಸತ್‌ನಲ್ಲಿ ನಮ್ಮ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವ ಮೂಲಕ ಅನೇಕ ಸಮಸ್ಯೆಗಳನ್ನು ಬಗೆ ಹರಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿದ್ದೇನೆ. ಆದರೆ ಹಾಸನ ಜಿಲ್ಲೆಯ ಸಂಸದ ಪ್ರಜ್ವಲ್ ರೇವಣ್ಣ ಸಂಸತ್‌ನಲ್ಲಿ ಶೂನ್ಯ ಹಾಜರಾತಿ ಹೊಂದಿದ್ದು, ಅವರು ಕಲಾಪಗಳಿಗೆ ಹಾಜರಾಗಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಗಮನ ಸೆಳೆಯದೆ ಇದ್ದರೆ ಸಮಸ್ಯೆ ಬಗೆಹರಿಸುವುದು ಹೇಗೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಪ್ರೀತಂ ಗೌಡ ಅವರ ಕೆಲಸ ಎಲ್ಲರ ಗಮನ ಸೆಳೆಯುವಂತೆ ಇದೆ. ಹಕ್ಕು ಪತ್ರ ವಿತರಣೆ, ಕುಡಿಯುವ ನೀರಿನ ವ್ಯವಸ್ಥೆ, ರಸ್ತೆ ಸೇರಿದಂತೆ ವಿವಿಧ ಕೆಲಸಗಳು ಹೊರ ರಾಜ್ಯದಲ್ಲಿಯೂ ಚರ್ಚೆಯಾಗಿದೆ. ಅವರಿಗೆ ಮತ್ತಷ್ಟು ಜನಸೇವೆಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಈ ಬಾರಿ ಪ್ರೀತಂ ಗೌಡ ಅವರಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.

ದಲಿತರು, ಮುಸಲ್ಮಾನರು, ಹಿಂದುಳಿದವರು ಸೇರಿದಂತೆ ಎಲ್ಲರಿಗೂ ಬಿಜೆಪಿ ಸರ್ಕಾರ ಸಮಾನ ಅವಕಾಶ ನೀಡುವ ಸದುದ್ದೇಶ ಹೊಂದಿದೆ. ಈ ನಿಟ್ಟಿನಲ್ಲಿ ಈ ಬಾರಿಯೂ ಬಿಜೆಪಿ ಸರ್ಕಾರಕ್ಕೆ ಮತ ನೀಡಿ ಎಂದು ಮನವಿ ಮಾಡಿದರು

ಬಿಜೆಪಿ ಸರ್ಕಾರದ ಮೇಲೆ ಬಂದಿರುವ 40 ಪಸೆರ್ಂಟ್ ಆರೋಪ ಸತ್ಯಕ್ಕೆ ದೂರವಾಗಿದ್ದು, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ದಾಖಲೆಗಳಿಲ್ಲದೆ ಗಾಳಿಯಲ್ಲಿ ಗುಂಡು ಹಾರಿಸುವ ಆರೋಪ ಮಾಡಿದ್ದಾರೆ. ಸರ್ಕಾರ ನಿಜವಾಗಿಯೂ ತಪ್ಪು ಮಾಡಿದ್ದರೆ ಅವರು ಲೋಕಾಯುಕ್ತಕ್ಕೆ ದೂರು ನೀಡಬೇಕಿತ್ತು. ಆದರೆ ಇದುವರೆಗೂ ಅವರು ದೂರು ನೀಡಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಅಪ್ಪಟ ಶಿಷ್ಯ ಆಗಿರುವ ಕೆಂಪಣ್ಣ, ಬಿಜೆಪಿ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದಾರೆ ಎಂದು ದೂರಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಅಭಯ್ ವರ್ಮಾ, ನೀಲ್ ಕಾಂತ್ ಬಕ್ಷಿದಿ, ಚಂದ್ರು, ವೇಣುಗೋಪಾಲ್ ಹಾಜರಿದ್ದರು.