ಜಿಲ್ಲೆ

ಸಂಸತ್ ಭವನಕ್ಕೆ ಅನುಭವ ಮಂಟಪ ಹೆಸರಿಡಿ

ಬೀದರ್: ನವದೆಹಲಿಯಲ್ಲಿ ನಿರ್ಮಿಸುತ್ತಿರುವ ನೂತನ ಸಂಸತ್ ಭವನಕ್ಕೆ ಅನುಭವ ಮಂಟಪ ಎಂದು ಹೆಸರಿಡಬೇಕು ಎಂದು ವಿವಿಧ ಸಂಘಟನೆಗಳು ಆಗ್ರಹಿಸಿವೆ.

ಬಸವ ಕೇಂದ್ರ ಭಾಲ್ಕಿ ತಾಲೂಕಾಧ್ಯಕ್ಷ ಕಿರಣಕುಮಾರ ಖಂಡ್ರೆ, ರಾಷ್ಟ್ರೀಯ ಬಸವ ದಳದ ಭಾಲ್ಕಿ ತಾಲೂಕಾಧ್ಯಕ್ಷ ಶ್ರೀಕಾಂತ ಭೋರಾಳೆ, ದತ್ತು ಕರಕಾಳೆ, ಜಯರಾಜ ಕೊಳ್ಳಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಕುರಿತು ಬಸವ ಕೇಂದ್ರ ಹಾಗೂ ರಾಷ್ಟ್ರೀಯ ಬಸವ ದಳ ಘಟಕದಿಂದ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆಯಲಾಗಿದೆ. ಜಗತ್ತಿನಲ್ಲಿ ಪ್ರಥಮ ಬಾರಿಗೆ ಪ್ರಜಾಪ್ರಭುತ್ವದ ಕಲ್ಪನೆ ನೀಡಿದ್ದು 12ನೇ ಶತಮಾನದಲ್ಲಿ ಶರಣರು. ಬಸವಣ್ಣ ಸೇರಿದಂತೆ ಎಲ್ಲ ಶರಣರು ಸಮಾನತೆ ಸಂದೇಶ ನೀಡಿದರು. ಅನುಭವ ಮಂಟಪ ಮೂಲಕ ಚರ್ಚೆ ನಡೆಸಿ, ಶರಣರು ಪ್ರಜಾಪ್ರಭುತ್ವ ಕಲ್ಪನೆ ಜಗತ್ತಿಗೆ ಮೊದಲು ನೀಡಿದರು. ಹೀಗಾಗಿ ನೂತನ ಸಂಸತ್ಗೆ ಅನುಭವ ಮಂಟಪ ಹೆಸರಿಡಬೇಕು ಎಂದು ಆಗ್ರಹಿಸಿದರು. ರಾಷ್ಟ್ರಪತಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಶೀಘ್ರದಲ್ಲಿ ನಿಯೋಗ ಕರೆದುಕೊಂಡು ಹೋಗಿ, ಅನುಭವ ಮಂಟಪ ಕುರಿತು ಗಮನ ಸೆಳೆಯಲಾಗುವುದು ಎಂದು ತಿಳಿಸಿದ್ದಾರೆ.

ಅಧಿಕಾರಿ ನೇಮಕ ಬೇಡ: ಚಿತ್ರದುರ್ಗದ ಮರುಘಾ ಮಠಕ್ಕೆ ಆಡಳಿತ ಅಧಿಕಾರಯನ್ನು ಸರ್ಕಾರ ನೇಮಕ ಮಾಡಬಾರದು. ಈಗಾಗಲೇ ಮಠದ ಪೂಜ್ಯರು ಹಾಗೂ ಆಡಳಿತ ಮಂಡಳಿ ಬಗ್ಗೆ ಆರೋಪ, ಪ್ರತ್ಯಾರೋಪ ನಡೆಯುತ್ತಿವೆ. ಕೇಸ್ ಸಹ ದಾಖಲೆ ಆಗಿ ಪೊಲೀಸ್ ತನಿಖೆ ನಡೆದಿದೆ ಹಾಗೂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಈ ಸಮಯದಲ್ಲಿ ಮಠಕ್ಕೆ ಸಂಬಂಧ ಪಡದ ಕೆಲವು ಜನರು ಮಠ ಹಾಗೂ ಮಠದ ಶಿಕ್ಷಣ ಸಂಸ್ಥೆಗಳ ಮೇಲೆ ನಿಯಂತ್ರಣ ಸಾಧಿಸಲು ಹೆಣಗುತ್ತಿವೆ. ಹೇಗಾದರೂ ಮಾಡಿ ನೂರಾರು ಕೋಟಿ ಆಸ್ತಿಯನ್ನು ನುಂಗುವ ಹುನ್ನಾರ ನಡೆಯುತ್ತಿದೆ. ಕೆಲವು ಮಠದ ವಿರೋಧಿಗಳು ಗುಂಪು ಕಟ್ಟಿಕೊಂಡು ಸರ್ಕಾರದ ಮೇಲೆ ಒತ್ತಡ ಹೇರಿ ಆಡಳಿತ ಅಧಿಕಾರಿ ನೇಮಿಸುವ ಕುತಂತ್ರ ಮಾಡುತ್ತಿವೆ ಎಂದು ದೂರಿದ್ದಾರೆ.

ಮಠದ ಸಂಸ್ಥೆಗಳನ್ನು ನಡೆಸಿಕೊಂಡು ಹೋಗಲು ಮಠದ ಶಿಷ್ಯರು ಕಾರ್ಯ ಯೋಜನೆ ರೂಪಿಸಿದ್ದು, ಮಠದಿಂದ ಹೊಸದಾಗಿ ಆಡಳಿತ ಅಧಿಕಾರಿ ನೇಮಕ ಮಾಡಲಾಗಿದೆ. ಮಠದ ಕೆಲಸ ಕಾರ್ಯ ನೋಡಿಕೊಂಡು ಹೋಗಲು, ಮಠದ ಶಾಖಾ ಮಠದ ಮಠಾಧೀಶರನ್ನು ನೇಮಿಸಲಾಗಿದೆ. ಮಠದಲ್ಲಿ ಸಂಸ್ಥೆ ಸುರಳಿತವಾಗಿ ನಡೆಯುತ್ತಿದೆ. ಒಂದು ವೇಳೆ ಸರ್ಕಾರ ಆಡಳಿತ ಅಧಿಕಾರಿ ನೇಮಕ ಮಾಡಿದರೆ ನೂರಾರು ವರ್ಷಗಳಿಂದ ನಡೆದುಕೊಂಡು ಬಂದ ಮಠ ಹಾಳು ಆಗುವುದರಲ್ಲಿ ಅನುಮಾನ ಇಲ್ಲ. ಹೀಗಾಗಿ ಮುರುಘಾ ಮಠದ ಆಡಳಿತ ಮಂಡಳಿ ಅಧಿಕಾರಿ ನೇಮಿಸಬಾರದು ಎಂದು ಸಿಎಂ ಅವರಿಗೆ ಬರೆದ ಪತ್ರದಲ್ಲಿ ಬಸವ ಕೇಂದ್ರ ಭಾಲ್ಕಿ ಅಧ್ಯಕ್ಷ ಕಿರಣಕುಮಾರ ಖಂಡ್ರೆ ಹಾಗೂ ರಾಷ್ಟ್ರೀಯ ಬಸವ ದಳದ ಭಾಲ್ಕಿ ಅಧ್ಯಕ್ಷ ಶ್ರೀಕಾಂತ ಬೋರಾಳೆ ಆಗ್ರಹಿಸಿದ್ದಾರೆ.