ಜಿಲ್ಲೆ

ಸಂಶೋಧನೆಗೆ ಮ್ಯೂಸಿಯಂಗಳು ಸಹಕಾರಿ

ಚಿತ್ರದುರ್ಗ: ಚರಿತ್ರೆಗೆ ದಾಖಲೆ ಮುಖ್ಯ. ದಾಖಲೆ ಇಲ್ಲದೆ ಚರಿತ್ರೆ ಬರೆಯುವುದು ಕಷ್ಟ ಎಂದು ಸರ್ಕಾರಿ ಕಲಾ ಕಾಲೇಜು ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಎಸ್.ರೇವಣಸಿದ್ದಪ್ಪ ಹೇಳಿದರು.
ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಸರ್ಕಾರಿ ಕಲಾ ಕಾಲೇಜು ಸಹಯೋಗದಲ್ಲಿ ನಗರದ ಸರ್ಕಾರಿ ವಸ್ತು ಸಂಗ್ರಹಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಿಎಚ್‌ಡಿಗೆ ಸಂಗ್ರಹಾಲಯಗಳು ನೆರವಾಗುತ್ತವೆ. ಶಾಸನ, ತಾಳೆಗರಿ, ಕಡತಗಳು ಸಿಗುತ್ತವೆ. ಪುರಾತತ್ವ ಇಲಾಖೆ ಚರಿತ್ರೆಗಾರರಿಗೆ ತವರುಮನೆ ಇದ್ದಂತೆ. ಯೂರೋಪಿಯನ್ನರು ಬರೆದಿರುವ ಚರಿತ್ರೆಯನ್ನೇ ಈವರೆಗೂ ಓದುತ್ತಿದ್ದೇವೆ. ಜಿಲ್ಲೆಯಲ್ಲಿ ಸಾಕಷ್ಟು ಐತಿಹಾಸಿಕ ನೆಲೆಗಳಿದ್ದು, ಅಧ್ಯಯನದಲ್ಲಿ ತೊಡಗಿಕೊಳ್ಳುವಂತೆ ಇತಿಹಾಸ ವಿಭಾಗದ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ನಿವೃತ್ತ ಪ್ರಾಚಾರ್ಯ ಕೆ.ಎಸ್.ರಾಜಪ್ಪ ಮಾತನಾಡಿ, ಸಂಶೋಧನೆಗೆ ಮ್ಯೂಸಿಯಂಗಳು ಸಾಕಷ್ಟು ಅವಕಾಶಗಳನ್ನು ಒದಗಿಸುತ್ತವೆ. ಮೊಬೈಲ್ ಗೀಳಿನಲ್ಲಿ ಯುವ ಜನರು ಹೊರ ಬರಬೇಕು. ಸಂಗ್ರಹಾಲಯಗಳನ್ನು ವೀಕ್ಷಿಸುವ ಮೂಲಕ ಜ್ಞಾನ ವೃದ್ಧಿಸಿಕೊಳ್ಳ ಬೇಕಿದೆ ಎಂದರು.
ಮದಕರಿನಾಯಕ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಡಿ.ಗೋಪಾಲಸ್ವಾಮಿನಾಯಕ ಮಾತನಾಡಿ, ವಸ್ತು ಸಂಗ್ರಹಾಲಯಗಳಲ್ಲಿ ಪೂರ್ವಜರ ಜೀವನ, ಪರಂಪರೆ, ಸ್ಮಾರಕಗಳು ಸಿಗುತ್ತವೆ ಎಂದು ಹೇಳಿದರು.
ಹೊಸದೆಹಲಿಯಲ್ಲಿ ಐದು ಸಾವಿರ ವರ್ಷಗಳ ಇತಿಹಾಸವಿರುವ ಮ್ಯೂಸಿಯಂ ಇದೆ. ಇತಿಹಾಸ, ಪರಂಪರೆ, ಸಂಸ್ಕೃತಿಯನ್ನು ಸಂಗ್ರಹಾಲಯಗಳು ತಿಳಿಸುತ್ತವೆ. ಚಿತ್ರದುರ್ಗ ಸಾಂಸ್ಕೃತಿಕ, ಜನಪದಕ್ಕೆ ತವರು ಮನೆಯಾಗಿದೆ. ಮುರುಘಾಮಠದಲ್ಲೂ ಅತ್ಯುತ್ತಮ ಸಂಗ್ರಹಾಲಯವಿದೆ ಎಂದರು.
ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಪ್ರಹ್ಲಾದ್ ಮಾತನಾಡಿ, ಸಂಗ್ರಹಾಲಯಗಳಿಂದ ರಾಜ ವಂಶಸ್ಥರು, ಸಂಸ್ಕೃತಿ, ಪರಂಪರೆ, ಇತಿಹಾಸಕ್ಕೆ ಸಂಬಂಧಿಸಿದ ಪ್ರಾಚೀನ ಕುರುಹುಗಳು ಸಿಗುತ್ತವೆ. ನಮ್ಮ ಜಿಲ್ಲೆಯಲ್ಲಿ ನಾಲ್ಕು ಮ್ಯೂಸಿಯಂಗಳಿವೆ. ಎಲ್ಲವನ್ನು ಇತಿಹಾಸ ವಿಭಾಗದ ವಿದ್ಯಾರ್ಥಿಗಳು ನೋಡಬೇಕು ಎಂದು ತಿಳಿಸಿದರು.