ಜಿಲ್ಲೆ

ಸಂಶೋಧನೆ ಒಂದು ವಿಷಯಕ್ಕೆ ಸೀಮಿತವಾಗಬಾರದು: ಡಾ.ಮಂಜಪ್ಪ ಡಿ. ಹೊಸಮನೆ ಸಲಹೆ

ಮೈಸೂರು: ಸಂಶೋಧನಾ ವಿಧಾನ ಯಾವುದೇ ಒಂದು ವಿಷಯಕ್ಕೆ ಮಾತ್ರ ಅನ್ವಯವಾಗುವುದಿಲ್ಲ. ಎಲ್ಲ ವಿಷಯಗಳಿಗೂ ಅಗತ್ಯ ಎಂದು ವಿಶ್ರಾಂತ ಕುಲಪತಿ ಡಾ.ಮಂಜಪ್ಪ ಡಿ.ಹೊಸಮನೆ ಅಭಿಪ್ರಾಯಪಟ್ಟರು.
ಮೈಸೂರು ವಿಶ್ವ ವಿದ್ಯಾನಿಲಯದ ಅರ್ಥಶಾಸ್ತ್ರ ಮತ್ತು ಸಹಕಾರ ವಿಭಾಗದಿಂದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಶನಿವಾರದಿಂದ ಮೂರು ದಿನಗಳ ಕಾಲ ಆಯೋಜಿಸಿರುವ ಸಮಾಜ ವಿಜ್ಞಾನಗಳ ಸಂಶೋಧನಾ ವಿಧಾನ ಎಂಬ ವಿಷಯದ ಕುರಿತ ರಾಷ್ಟ್ರೀಯ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಿರ್ದಿಷ್ಟವಾಗಿ ಡೇಟಾವನ್ನು ಸಂಗ್ರಹಿಸುವ, ವಿಶ್ಲೇಷಿಸುವ ಮತ್ತು ವ್ಯಾಖ್ಯಾನಿಸುವ ವಿಧಾನದೊಂದಿಗೆ ವ್ಯವಹರಿಸುವುದು ಸಂಶೋಧನಾ ವಿಧಾನವಾಗಿದೆ. ಸಂಶೋಧನಾ ವಿಧಾನ ಯಾವುದೇ ಒಂದು ವಿಷಯಕ್ಕೆ ಸೀಮಿತವಲ್ಲ. ಅದು ಎಲ್ಲ ವಿಷಯಗಳಿಗೂ ಅಗತ್ಯ. ಸಂಶೋಧನಾ ವಿಧಾನವನ್ನು ವಸ್ತು ವಿಷಯದ ಸ್ವಾಭಾವ ಮತ್ತು ವಸ್ತುವಿನ ತನಿಖೆಯಲ್ಲಿ ಬಳಸಲಾಗುವ ಉನ್ನತ ಬೌದ್ಧಿಕ ಮಾನವ ಟುವಟಿಕೆ ಎಂದು ವ್ಯಾಖ್ಯಾನಿಸಿದರು.
ಸಂಶೋಧನಾ ವಿಷಯವನ್ನು ಆಯ್ಕೆ ಮಾಡಿಕೊಳ್ಳುವಾಗ ಸಮಂಜಸವಾದ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕು. ಯಾವುದೇ ವಿಷಯದ ಸಂಶೋಧಾನ ಶಿಸ್ತಿಗೆ ವಿಧಾನ (ಮೆಥಡಾಲಜಿ) ಕಡ್ಡಾಯವಾಗಿರಬೇಕು. ಇದರ ವಿಶಾಲವಾದ ಶಿಸ್ತುಗಳನ್ನು ನೈಸರ್ಗಿಕ ವಿಧಾನ ಮತ್ತು ಸಾಮಾಜಿಕ ವಿಜ್ಞಾನ ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಸಾಮಾಜಿಕ ವಿಜ್ಞಾನ ವಿಭಾಗಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ನೈಸರ್ಗಿಕ ವಿಧಾನವನ್ನು ಬದಿಗಿರಿಸಿದ್ದೇವೆ ಎಂದು ವಿಷಾಧಿಸಿದರು.
ಅರ್ಥಶಾಸ್ತ್ರ ಮತ್ತು ಸಹಕಾರ ವಿಭಾಗದ ಅಧ್ಯಕ್ಷ ಡಾ.ಎಂ.ಮಹೇಶ್, ಪ್ರಾಧ್ಯಾಪಕರಾದ ಡಾ.ಎಂ.ದಿನೇಶ್, ಪ್ರೊ.ಗೋಪಾಲಪ್ಪ, ಪ್ರೊ.ತಿಮ್ಮಯ್ಯ, ಪ್ರೊ.ಇಂದಿರಾ, ಪ್ರೊ.ಪ್ರೇಮಕುಮಾರ್ ಇತರರು ಇದ್ದರು.