ಚಿತ್ರದುರ್ಗ: ಸಂಘಟಿತ ಸಮೂಹದಿಂದ ಅಸಂಘಟಿತ ವಲಯಕ್ಕೂ ಸಂಶೋಧನೆ ವಿಸ್ತರಿಸಬೇಕು. ಇದು ಹೊಸ ಸವಾಲು ಮಾತ್ರವಲ್ಲ. ನೂತನ ಸಾಧ್ಯತೆಯೂ ಹೌದು ಎಂದು ಸಂಸ್ಕೃತಿ ಚಿಂತಕ ಪ್ರೊ.ಬರಗೂರು ರಾಮಚಂದ್ರಪ್ಪ ಸಲಹೆ ನೀಡಿದರು.
ತಾಲೂಕಿನ ಜಿ.ಆರ್.ಹಳ್ಳಿ ಜ್ಞಾನಗಂಗೋತ್ರಿ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ದಾವಣಗೆರೆ ವಿವಿಯ ಕನ್ನಡ ಅಧ್ಯಯನ ವಿಭಾಗ, ಶಿವಗಂಗೋತ್ರಿ ಕನ್ನಡ ಅಧ್ಯಯನ ಮತ್ತು ಸ್ನಾತಕೋತ್ತರ ಕೇಂದ್ರದಿಂದ ಕನ್ನಡ ಸಾಹಿತ್ಯ ಸಂಶೋಧನೆಯ ಹೊಸ ಸಾಧ್ಯತೆಗಳು ಎಂಬ ವಿಷಯ ಕುರಿತು ಹಮ್ಮಿಕೊಂಡಿರುವ ಎರಡು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಎಸ್ಸಿ, ಎಸ್ಟಿ, ಅಲೆಮಾರಿ, ಬುಡಕಟ್ಟು ಸಂಸ್ಕೃತಿ, ಮಹಿಳಾ ಲೋಕ ಹೊರಬಂದಂತೆಲ್ಲ ದೇಶದಲ್ಲಿ ದೊಡ್ಡ ಬೆಳವಣಿಗೆಯೊಂದಿಗೆ ಬಹು ಸಂಸ್ಕೃತಿ ಅನಾವರಣವಾಯಿತು. ಇದರಿಂದಾಗಿ ಹೊಸ ಆಯಾಮ ಸೃಷ್ಟಿಯಾಯಿತು. ಅಲಕ್ಷಿತ ಸಮುದಾಯಗಳಿಗೆ ಶಿಕ್ಷಣ ಪ್ರವೇಶವೂ ಪಲ್ಲಟಕ್ಕೆ ಕಾರಣವಾಯಿತು. ಅವರ ಕುರಿತು ಸಂಶೋಧನೆ ತಡವಾಗಿ ಶುರುವಾಯಿತು. 10ಲಕ್ಷಕ್ಕೂ ಹೆಚ್ಚು ಮಂದಿಗೆ ತಮ್ಮ ಜಾತಿಯ ಅರಿವಿಲ್ಲ ಎಂಬ ಅಂಶವೂ ವರದಿಯಿಂದ ಬಹಿರಂಗವಾಯಿತು. ಮುಖ್ಯವಾಹಿನಿಗೆ ತರುವುದು ಕೂಡ ಸಂಶೋಧನೆಯಿಂದ ಮಾತ್ರ ಸಾಧ್ಯ ಎಂಬುದನ್ನು ಮರೆಯಬೇಡಿ ಎಂದರು.
ಸಂಶೋಧನೆ ಅಜ್ಞಾತಗಳ ಹುಡುಕಾಟ, ವಿಮರ್ಶೆ ವ್ಯಾಖ್ಯಾನಗಳ ಒಕ್ಕೂಟವಾಗಿದೆ. ಸಂಶೋಧಕ, ವಿಮರ್ಶಕರಲ್ಲಿ ಜಾತಿ, ಧರ್ಮ, ಪಕ್ಷ, ಪಂಥ ಇವೆಲ್ಲವನ್ನೂ ಮೀರಿದ ಮನಸ್ಥಿತಿ ಇರಬೇಕು. ಓದು ಪೂರ್ವಗ್ರಹ ಪೀಡಿತವಾಗಿರದೆ, ಪಕ್ಷಾತೀತವಾಗಿರಬೇಕು. ಕನ್ನಡ ಭಾಷೆಯ ಆಂತರ್ಯದಲ್ಲಿ ಜಾತ್ಯತೀತ ನಿಲುವಿದೆ. ಸಂಶೋಧಿಸುವವರಲ್ಲಿ ವಿಮರ್ಶಿಸುವ ಗುಣವಿರಬೇಕು ಎಂದು ಹೇಳಿದರು.
ಕಲೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸ ಯಾವುದೇ ಆಗಿರಲಿ. ಅಳಿಸಿ ಹೋಗಿದ್ದನ್ನು ಗುರುತಿಸಿ ಉಳಿಸುವುದೇ ಸಂಶೋಧನೆ. ಈ ಕೆಲಸ ಪರಿಣಾಮಕಾರಿಯಾಗಿ ಆಗಬೇಕು. ಅದಕ್ಕಾಗಿ ಆಳ ಅಧ್ಯಯನಗಳ ಮೂಲಕ ಸಂಶೋಧಿಸಿ ಕಂಡುಕೊಳ್ಳುವುದನ್ನು ಕಲಿಯಬೇಕೆ ಹೊರತು ಕೊಂಡುಕೊಳ್ಳುವುದು ಸಂಶೋಧನೆಯಲ್ಲ ಎಂದು ತಿಳಿಸಿದರು.
ಸಾಮಾಜಿಕ ಮತ್ತು ಆರ್ಥಿಕ ಸಂರಚನೆಗಳು ಸಂಶೋಧನೆ ಮೇಲೆ ಅವಲಂಬಿತವಾಗಿವೆ. ಸಂಶೋಧಿಸುವ ಮುನ್ನ ಅಂತರ್ ಶಿಸ್ತೀಯಾ ತಿಳಿವಳಿಕೆ ಗೊತ್ತಿರಬೇಕು. ಸಾಹಿತ್ಯ ವಿವಿಧ ಆಯಾಮಗಳಿಂದ ಅರ್ಥೈಸಿದರೆ, ಸಂಶೋಧನೆ ಫಲಪ್ರದವಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಅವಿದ್ಯಾವಂತರು ಜಾನಪದ ಲೋಕ ಕಟ್ಟಿಕೊಟ್ಟರು. ಶಿಕ್ಷಣ ಪಡೆದಂತೆಲ್ಲ ಸಾಹಿತ್ಯ, ಸಂಶೋಧನೆ, ವಿಮರ್ಶೆಗೆ ಮನಸ್ಸುಗಳು ತೆರೆದುಕೊಂಡವು. ಹಟ್ಟಿಯಿಂದ ಆತಂಕ-ಆಕ್ರೋಶ, ಮಣ್ಣಿನ ಮನೆಯಿಂದ ಮನದಾಳ ಹೀಗೆ ಶಿಕ್ಷಣದಿಂದ ಪ್ರಗತಿ ಸಾಧ್ಯವಾದಾಗ ಸಂಶೋಧನೆ ಹೆಚ್ಚಲು ಕಾರಣವಾಯಿತು. ಈ ಮೂಲಕ ಹೊಸ ಲೋಕ ಅನಾವರಣಗೊಂಡಿತು ಎಂದರು.
ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಎಚ್.ಜಿ.ವಿಜಯಕುಮಾರ್ ಮಾತನಾಡಿ, ಈ ವಿಚಾರ ಸಂಕಿರಣ ಸಂಬಂಧ 210 ಮಂದಿ ವಿದ್ವಾಂಸರು, ಸಂಶೋಧಕರು ಲೇಖನ ಕಳುಹಿಸಿದ್ದು, ಅವೆಲ್ಲವನ್ನೂ ‘ನವನೀತ’ ಎಂಬ ಶೀರ್ಷಿಕೆಯಡಿ ಬೃಹತ್ ಗ್ರಂಥವಾಗಿ ಪ್ರಕಟಿಸಿದ್ದು, ಕಾರ್ಯಕ್ರಮದಲ್ಲಿ ಬಿಡುಗಡೆಯಾಗಿದ್ದು, ಸಂಸತದ ಸಂಗತಿ ಎಂದರು.
ದಾವಣಗೆರೆ ವಿವಿ ಕುಲಪತಿ ಪ್ರೊ.ಬಿ.ಡಿ.ಕುಂಬಾರ, ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್, ಕುವೆಂಪು ವಿವಿ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ನೆಲ್ಲಿಕಟ್ಟೆ ಎಸ್ ಸಿದ್ದೇಶ್, ಜಿ.ಆರ್.ಹಳ್ಳಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಂಯೋಜನಾಧಿಕಾರಿ ಪ್ರೊ.ಎಂ.ಯು.ಲೋಕೇಶ್, ಕನ್ನಡ ಅಧ್ಯಯನ ವಿಭಾಗದ ಅಧ್ಯಕ್ಷ ಡಾ.ವಿ.ಜಯರಾಮಯ್ಯ, ಶಿಕಾರಿಪುರ ಸುವ್ವಿ ಪಬ್ಲಿಕೇಷನ್ ಪ್ರಕಾಶಕ ಬಿ.ಎನ್.ಸುನೀಲ್‌ಕುಮಾರ್, ತುಮಕೂರು ವಿವಿ ಪ್ರಾಧ್ಯಾಪಕಿ ಗೀತಾ ವಸಂತ ಇತರರಿದ್ದರು.