ಜಿಲ್ಲೆ

ಸಂಶೋಧನಾ ಮನೋಭಾವ ಬೆಳಸಿಕೊಳ್ಳಿ: ಶಿಕ್ಷಣ ತಜ್ಞ ಪ್ರೊ.ಎ.ಎಚ್. ಸಾಗರ್ ಸಲಹೆ

ಮೈಸೂರು: ವಿದ್ಯಾರ್ಥಿಗಳು ಸಂಶೋಧನಾ ಮನೋಭಾವ, ಕಲಿಕಾ ಕೌಶಲ ಹಾಗೂ ಆತ್ಮವಿಶ್ವಾಸ ವೃದ್ಧಿಸಿಕೊಂಡಾಗ ಮಾತ್ರ ಉದ್ಯೋಗಶೀಲರಾಗಲು, ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಅಂತಾರಾಷ್ಟ್ರೀಯ ಶಿಕ್ಷಣ ತಜ್ಞ ಪ್ರೊ.ಎ.ಎಚ್. ಸಾಗರ್ ಅಭಿಪ್ರಾಯಪಟ್ಟರು.
ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಐಕ್ಯುಎಸಿ ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ವಿದ್ಯಾರ್ಥಿಗಳ ಕೌಶಲಾಭಿವೃದ್ಧಿ ಮತ್ತು ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ನಾಯಕತ್ವ ಹಾಗೂ ಉದ್ಯಮಶೀಲ ಕೌಶಲ್ಯಗಳನ್ನು ವಿದ್ಯಾಲಯಗಳು ಕಲಿಸಬೇಕಾಗಿರುವುದು ಬಹಳ ಮುಖ್ಯ. ನೈತಿಕ ಸಿದ್ಧಾಂತಗಳು ಮತ್ತು ಪರಿಣಾಮಗಳ ಆಧಾರದ ಮೇಲೆ ನಿರ್ಣಯಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಶೋಧನೆ ಮತ್ತು ಆತ್ಮವಿಶ್ವಾಸ ಬೋಧನಾ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲು ಸಹಕರಿಸುತ್ತವೆ. ಆಲೋಚನಾ ಶಕ್ತಿ, ಪ್ರಾಯೋಗಿಕ ಚಟುವಟಿಕೆ, ಗುಂಪು ಚರ್ಚೆಗಳು, ಮಿದುಳಿನ ಕ್ರಿಯಾಶೀಲತೆ ಹೆಚ್ಚಿಸುತ್ತವೆ. ದೃಶ್ಯ ಮಾಧ್ಯಮ ಸೇರಿದಂತೆ ಇನ್ನಿತರ ಅತ್ಯಾಧುನೀಕ ಸಾಧನಗಳು ಉತ್ತಮ ಬೋಧನೆಗೆ ಮೆರುಗು ನೀಡುತ್ತವೆ. ಆದರೆ ಅವುಗಳ ವೈಫಲ್ಯಗಳು, ದುರಂತ, ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕಾಗಿರುವುದು ಅಧ್ಯಾಪಕರ ಗುರುತರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳ ತರಬೇತಿ ಕಾರ್ಯಕ್ರಮದಲ್ಲಿ ಕಾಲೇಜಿನ ವಿವಿಧ ಸ್ನಾತಕೋತ್ತರ ವಿಭಾಗಗಳ ಮುನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡರು. ಅಧ್ಯಾಪಕರ ತರಬೇತಿಯಲ್ಲಿ ಕಾಲೇಜಿನ ನೂರಕ್ಕೂ ಹೆಚ್ಚು ಅಧ್ಯಾಪಕರು ಭಾಗವಹಿಸಿದ್ದರು. ಅಧ್ಯಾಪಕರಿಗಾಗಿ ಬೋಧನೆ, ಕಲಿಕೆ, ಭಾಷಾಶಾಸ್ತ್ರ ಮತ್ತು ಅರಿವಿನ ವಿಜ್ಞಾನದಲ್ಲಿ ತೀಕ್ಷ್ಣ ಸಂಶೋಧನೆ ಎಂಬ ವಿಷಯದ ಬಗ್ಗೆ ತರಬೇತಿ ನೀಡಿದರು.
ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ. ಬಿ.ವಿ. ಸಾಂಬಶಿವಯ್ಯ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಪ್ರೊ. ಎಂ. ಪಿ. ವಿಜಯೇಂದ್ರಕುಮಾರ್ ಇತರರು ಇದ್ದರು.