ಜಿಲ್ಲೆ

ಸಂಶೋಧಕರು ಹೊಸ ಚಿಂತನೆಗೆ ಹೊಂದಿಕೊಳ್ಳಲಿ: ಡಾ.ನಾಗೇಂದ್ರ ಪರಾಶರ್

ಮೈಸೂರು: ಹೊಸ ಚಿಂತನೆ, ವಿಧಾನಗಳಿಗೆ ಸಂಶೋಧಕರು ಹೊಂದಿಕೊಳ್ಳಬೇಕು ಮತ್ತು ಪ್ರಗತಿದಾಯಕ ಚಿಂತನೆಗಳನ್ನು ಶೋಧಿಸಬೇಕು ಎಂದು ಆರ್.ವಿ. ವಿಶ್ವವಿದ್ಯಾಲಯದ ಮೈಸೂರು ಕ್ಯಾಂಪಸ್‌ನ ನಿರ್ದೇಶಕ ಡಾ.ನಾಗೇಂದ್ರ ಪರಾಶರ್ ಹೇಳಿದರು.

ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಸಂಶೋಧನಾ ವೈಜ್ಞಾನಿಕತೆ ಕುರಿತು ಇತ್ತೀಚಿಗೆ ಹಮ್ಮಿಕೊಂಡಿದ್ದ ಒಂದು ದಿನದ ರಾಷ್ಟ್ರಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಸಂಶೋಧನೆ ಎಂಬುದು ಇಂದು ಎಲ್ಲ ಕ್ಷೇತ್ರಗಳಲ್ಲಿ ಅನಿವಾರ್ಯವಾಗಿದೆ.

ಸಂಶೋಧನೆಯ ಸ್ವರೂಪಗಳು ಇದೀಗ ಬದಲಾಗುತ್ತಿವೆ. ಇದಕ್ಕೆ ಪೂರಕವಾಗಿ ಮಾರ್ಗದರ್ಶಕರು ಸಂಶೋಧಕರ ಚಿಂತನೆಗಳಿಗೆ ಸ್ವಾತಂತ್ರ್ಯ ನೀಡಬೇಕು. ಇದರಿಂದ ಶೋಧನೆಯಲ್ಲಿ ಹೊಸತು ಮೂಡುತ್ತದೆ ಎಂದರು.

ಸಂಶೋಧಕರು ಸಂಶೋಧನೆಯ ಮೂಲ ವಿಚಾರಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು. ಸಂಶೋಧನೆಯ ಮನಸ್ಥಿತಿ ಸದಾ ನಮ್ಮಲ್ಲಿ ಜಾಗೃತವಾಗಿರಬೇಕು. ಸಂಶೋಧಕರು ಸಂಶೋಧನೆಯಲ್ಲಿ ಹುಚ್ಚು ಹತ್ತಿದಂತೆ ತೊಡಗಿಸಿಕೊಳ್ಳಬೇಕು. ಇದರಿಂದ ಹೊಸ ಜ್ಞಾನ, ಸಿದ್ಧಾಂತ, ಸಮಾಜಗಳು ನಿರ್ಮಾಣಗೊಳ್ಳುತ್ತವೆ ಎಂದು ಹೇಳಿದರು.

ಕಾಲೇಜಿನ ಮುಖ್ಯ ಕಾರ್ಯ ನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ ಮಾತನಾಡಿ, ಸಂಶೋಧನೆಯು ಉನ್ನತ ಶಿಕ್ಷಣದಲ್ಲಿ ಜ್ಞಾನದ ಅಡಿಪಾಯವಾಗಿದ್ದು, ಶೈಕ್ಷಣಿಕ, ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಯನ್ನು ಪ್ರೇರೇಪಿಸಿದೆ. ಭಾರತೀಯ ಸಂಸ್ಥೆಗಳು ಇಂದು ಗುಣಮಟ್ಟದ ಸಂಶೋಧನೆ ಉಳಿಸಿಕೊಳ್ಳುವಲ್ಲಿ ಸವಾಲುಗಳನ್ನು ಎದುರಿಸುತ್ತಿವೆ ಎಂದರು.

ಸಂಶೋಧಕರಲ್ಲಿ ಬಲವಾದ ಸಂಶೋಧನಾ ಮನಸ್ಥಿತಿ ಅಗತ್ಯವಾಗಿದೆ. ಸಂಶೋಧನೆಯು ಪಠ್ಯಪುಸ್ತಕದ ಉತ್ತರಗಳಿಗಿಂತ ಭಿನ್ನವಾಗಿ, ಬಗೆಹರಿಯದ ಪ್ರಶ್ನೆಗಳಿಗೆ ಪರಿಹಾರಗಳನ್ನು ಹುಡುಕುತ್ತದೆ. ಒಬ್ಬ ಸಂಶೋಧಕನು ವ್ಯವಸ್ಥಿತವಾದ ಶೋಧನೆ, ಪ್ರಯೋಗ ಮತ್ತು ವಿಶ್ಲೇಷಣೆಯ ಮೂಲಕ ಹೊಸ ಜ್ಞಾನ ಪಡೆಯಲು ಪ್ರಯತ್ನಿಸುತ್ತಾನೆ. ಅವರು ನಾವೀನ್ಯತೆಗೆ ಕೊಡುಗೆ ನೀಡುತ್ತಾರೆ ಎಂದರು.

ಸಂಶೋಧಕರು ಸಂಶೋಧನಾ ಸಮಸ್ಯೆಗಳನ್ನು ರೂಪಿಸುವುದು, ಊಹೆಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಪರೀಕ್ಷಿಸುವುದು, ಪರಿಣಾಮಕಾರಿ ಸಾಹಿತ್ಯ ಪುನರ್ರಚನೆಯನ್ನು ನಡೆಸುವುದು ಮುಂತಾದ ಪ್ರಮುಖ ಪರಿಕಲ್ಪನಾ ಅಂಶಗಳಿಗೆ ಯುವ ಮನಸ್ಸುಗಳನ್ನು ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಾಗಾರ ರೂಪಿಸಲಾಗಿದೆ ಎಂದರು.

ಪ್ರಾಂಶುಪಾಲ ಡಾ.ಎಂ.ಪ್ರಭು, ಐಕ್ಯೂಎಸಿ ಸಂಯೋಜಕ ಡಾ.ಎನ್.ರಾಜೇಂದ್ರಪ್ರಸಾದ್, ಡಾ. ಜಿ.ಎಂ. ಸಿಂಧು ಇದ್ದರು.