ಜಿಲ್ಲೆ

ಸಂವಿಧಾನಬದ್ಧ ಆಡಳಿತಕ್ಕೆ ಮತದಾನ ಪ್ರಮುಖ

ಕೊಳ್ಳೇಗಾಲ: ಸಂವಿಧಾನಬದ್ಧವಾಗಿ ಆಡಳಿತ ನಡೆಯುವುದಕ್ಕೆ ಮತದಾನ ಪ್ರಮುಖ ಪಾತ್ರ ವಹಿಸಿದೆ ಎಂದು ಪಟ್ಟಣದ ಹಿರಿಯ ಸಿವಿಲ್ ನ್ಯಾಯಾಧೀಶ ಎಂ. ಆನಂದ್ ಹೇಳಿದರು.

ಪಟ್ಟಣದ ಗುರುಭವನದಲ್ಲಿ ಬುಧವಾರ ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ತಾಲೂಕು ಆಡಳಿತ ವತಿಯಿಂದ 13ನೇ ರಾಷ್ಟ್ರೀಯ ಮತದಾರರ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಭಾರತ ದೇಶ ಮುನ್ನಡೆಯುತ್ತಿದೆ.ಈ ಹಿನ್ನೆಲೆಯಲ್ಲಿ ಚುನಾವಣೆ ವೇಳೆ ಪ್ರತಿಯೊಬ್ಬರೂ ಮತದಾನ ಮಾಡಬೇಕು ಎಂದು ಕಿವಿಮಾತು ಹೇಳಿದರು.


18 ವರ್ಷಕ್ಕೂ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಮತದಾನ ಮಾಡುವ ಅವಕಾಶವನ್ನು ಸಂವಿಧಾನ ನೀಡಿದೆ. ಆದ್ದರಿಂದ ಪ್ರತಿಯೊಬ್ಬರೂ ಮತದಾನದ ಮಹತ್ವ ಅರಿತು ಪ್ರಜಾಪ್ರಭುತ್ವದ ಉಳಿವು ಹಾಗೂ ದೇಶದ ಅಭಿವೃದ್ಧಿಗೆ ಮುಂದಾಗಬೇಕು ಎಂದರು.


ವಕೀಲರ ಸಂಘದ ಅಧ್ಯಕ್ಷ ಡಿ.ಎಸ್.ಬಸವರಾಜು ಮಾತನಾಡಿ, ಪ್ರಜೆಗಳು ತಮ್ಮ ಅಮೂಲ್ಯ ಮತದಿಂದ ತಮಗೆ ಬೇಕಾದ ಅಭಿವೃದ್ಧಿ ಪರ ಸರ್ಕಾರವನ್ನು ಆಯ್ಕೆ ಮಾಡಬಹುದು. ಮತದಾನ ಮಾಡುವ ಮೂಲಕ ಸುಭದ್ರ ಸರ್ಕಾರ ಹಾಗೂ ಪ್ರಾಮಾಣಿಕರನ್ನು ಆಯ್ಕೆ ಮಾಡಬೇಕು ಎಂದು ತಿಳಿಸಿದರು. ಈ ವೇಳೆ ತಹಸೀಲ್ದಾರ್ ಮಂಜುಳಾ ಪ್ರತಿಜ್ಞಾವಿಧಿ ಬೋಧನೆ ಮಾಡಿದರು.

ಪ್ರಧಾನ ಸಿವಿಲ್ ನ್ಯಾಯಾಧೀಶೆ ಎಂ.ಎನ್.ನಂದಿನಿ, ಉಪ ವಿಭಾಗಾಧಿಕಾರಿ ಗೀತಾ ಹುಡೇದ್, ವಕೀಲ ಸಂಘದ ಅಧ್ಯಕ್ಷ ಡಿ.ಎಸ್.ಬಸವರಾಜು, ತಾಲೂಕು ಪಂಚಾಯಿತಿ ಮಹೇಶ್, ನಗರಸಭೆ ಪೌರಯುಕ್ತ ನಂಜುಂಡಸ್ವಾಮಿ, ವಕೀಲ ಮೋಹನ್ ಕುಮಾರ್ ಇತರರು ಇದ್ದರು.