ಮೈಸೂರು: ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಹಕ್ಕುಗಳನ್ನು ನೀಡಿದ್ದಾರೆ. ಆದ್ದರಿಂದ ಎಲ್ಲ ಜನಾಂಗದವರು ಸಂಘಟಿತರಾಗಿ ಹಕ್ಕುಗಳನ್ನು ಪ್ರತಿಪಾದನೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದರು.
ಮೈಸೂರು ತಾಲೂಕು ಸಿದ್ದಲಿಂಗಪುರದಲ್ಲಿ ಶ್ರೀ ಬೀರೇಶ್ವರ ಕುರುಬರ ಸಂಘದಿಂದ ನಿರ್ಮಿಸಿರುವ ಕನಕ ಭವನವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನನ್ನನ್ನು 5 ಬಾರಿ ಗೆಲ್ಲಿಸಿ 3 ಬಾರಿ ಸೋಲಿಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರಕ್ಕೆ ನಾನು ಮಾಡಿರುವಷ್ಟು ಕೆಲಸ ಬೇರೆ ಯಾರೂ ಮಾಡಿಲ್ಲ. ಕಳೆದ ಬಾರಿ ಚಾಮುಂಡೇಶ್ವರಿಯಲ್ಲಿ ಸೋಲುವ ಸುಳಿವು ಸಿಕ್ಕಿದ್ದರಿಂದ ಬಾದಾಮಿಯಲ್ಲಿ ನಿಲ್ಲಬೇಕಾಯಿತು ಎಂದರು.
ಈ ಸಮುದಾಯ ಭವನ ಕಟ್ಟಲು ಮುಖಂಡ ಮಾದೇಗೌಡ ಅವರು ಜಾಗವನ್ನು ದಾನ ಮಾಡಿದ್ದಾರೆ. ಅದು ಅವರ ದೊಡ್ಡಗುಣ. ಹಿಂದಿನ ಕಾಲದಲ್ಲಿ ಶಾಲೆ, ಆಸ್ಪತ್ರೆ, ಹಾಸ್ಟೆಲ್‌ಗಳನ್ನು ಕಟ್ಟಲು ಜಾಗವನ್ನು ದಾನ ಮಾಡುತ್ತಿದ್ದರು. ಇತ್ತೀಚೆಗೆ ದಾನ ಮಾಡುವವರು ಕಡಿಮೆಯಾಗಿದ್ದಾರೆ ಎಂದ ಹೇಳಿದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 5 ಗ್ಯಾರಂಟಿಗಳನ್ನು ಜಾರಿಗೆ ತಂದು ನುಡಿದಂತೆ ನಡೆದಿದ್ದೇವೆ. ಇಂದು ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡುವ ಮೂಲಕ 1.10 ಕೋಟಿ ಜನರಿಗೆ ತಲಾ 2 ಸಾವಿರ ರೂ. ಹಾಕಿದ್ದೇವೆ. ಇದಕ್ಕಾಗಿ ವರ್ಷಕ್ಕೆ 32 ಸಾವಿರ ಕೋಟಿ ರೂ. ಖರ್ಚಾಗುತ್ತದೆ. 5 ಗ್ಯಾರಂಟಿಗಳಿಂದ ವರ್ಷಕ್ಕೆ 56 ಸಾವಿರ ಕೋಟಿ ರೂ. ಖರ್ಚಾಗುತ್ತದೆ. ಪ್ರತಿ ದಿನ 50 ಲಕ್ಷ ಮಹಿಳೆಯರು ಉಚಿತವಾಗಿ ಬಸ್‌ಗಳಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಬಡವರಿಗೆ ಆರ್ಥಿಕವಾಗಿ ಶಕ್ತಿ ತುಂಬಲು, ನೆಮ್ಮದಿಯ ಜೀವನ ನಡೆಸಲು 5 ಗ್ಯಾರಂಟಿ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಅಡಗೂರು ವಿಶ್ವನಾಥ್ ಮಾತನಾಡಿ, ದೇಶದಲ್ಲೇ ಯಾವುದೇ ಸರ್ಕಾರ, ಯಾವ ಮುಖ್ಯಮಂತ್ರಿಯೂ ಮಾಡದಂತಹ 5 ಗ್ಯಾರಂಟಿಗಳನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದೆ. ಮಹಿಳೆಯರು, ಬಡ ಕುಟುಂಬದವರ ಆರ್ಥಿಕ ಸಬಲೀಕರಣಕ್ಕೆ ಕಾರ್ಯಕ್ರಮವನ್ನು ರೂಪಿಸಿದೆ ಎಂದರು.
ಕಾಗಿನೆಲೆ ಶಾಖಾ ಮಠದ ಶ್ರೀ ಶಿವಾನಂದಪುರಿ ಸ್ವಾಮೀಜಿ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಡಾ.ಯತೀಂದ್ರ ಸಿದ್ದರಾಮಯ್ಯ, ಜಿ.ಪಂ. ಮಾಜಿ ಅಧ್ಯಕ್ಷರಾದ ಕೆ. ಮರೀಗೌಡ, ಬಿ.ಎಂ. ರಾಮು, ರಾಜ್ಯ ಕುರುಬರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ, ಜಿ.ಪಂ. ಮಾಜಿ ಸದಸ್ಯರಾದ ರಾಕೇಶ್ ಪಾಪಣ್ಣ, ಲೇಖಾ ವೆಂಕಟೇಶ್, ಜವರೇಗೌಡ, ಮುಖಂಡರಾದ ಸೋಮಣ್ಣ, ಗೋಪಿ, ಶಿವಣ್ಣ, ನಾರಾಯಣ, ಕಾಡನಹಳ್ಳಿ ಸ್ವಾಮಿಗೌಡ, ನಗರಪಾಲಿಕೆ ಉಪ ಆಯುಕ್ತರಾದ ಜಿ.ಎಸ್. ಸೋಮಶೇಖರ್, ಸಂಘದ ಪದಾಧಿಕಾರಿಗಳು ಇದ್ದರು.