ಜಿಲ್ಲೆ

ಸಂವಿಧಾನದ ಬದಲಾವಣೆ ಯಾವುದೇ ಸರ್ಕಾರಕ್ಕೂ ಸಾಧ್ಯವಿಲ್ಲ

ಯಳಂದೂರು: ಸಂವಿಧಾನವನ್ನು ಬದಲಾಯಿಸಲು ಯಾವುದೇ ಸರ್ಕಾರಕ್ಕೂ ಅಸಾಧ್ಯವಾದ ಕೆಲಸವಾಗಿದ್ದು, ಈ ಬಗ್ಗೆ ಯಾವುದೇ ಊಹಾಪೋಹಗಳಿಗೆ ಯಾರೂ ಗಮನ ನೀಡಬಾರದು ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ. ನಾರಾಯಣಸ್ವಾಮಿ ತಿಳಿಸಿದರು.

ಅವರು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ಮುಂಭಾಗ ಶಾಸಕ ಎನ್.ಮಹೇಶ್ ಅವರ ವೈಯಕ್ತಿಕ ನೆರವಿನಲ್ಲಿ ನಿರ್ಮಿಸಿರುವ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಅನಾವರಣ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಬುಧವಾರ ಮಾತನಾಡಿ, ಈ ಕಾರ್ಯಕ್ರಮದಲ್ಲಿ ಪಕ್ಷಾತೀತವಾಗಿ ಎಲ್ಲ ನಾಯಕರೂ ಸೇರಿದ್ದಾರೆ. ಇದಕ್ಕೂ ರಾಜಕಾರಣಕ್ಕೂ ಸಂಬಂಧವಿಲ್ಲ. ಅಂಬೇಡ್ಕರ್ ವಿಚಾರ ಬಂದಾಗ ಇವರ ಬದುಕು, ತತ್ವಸಿದ್ಧಾಂತಗಳ ಪಾಲನೆ, ಜೀವನ ಪದ್ಧತಿಗಳನ್ನು ಅನುಸರಿಸಬೇಕಾದ್ದು ಎಲ್ಲರ ಕರ್ತವ್ಯವೂ ಆಗಿದೆ. ಹಾಗಾದರೆ, ಮಾತ್ರ ಇಂತಹ ಮಹಾನ್ ನಾಯಕರ ಪ್ರತಿಮೆಯ ಸ್ಥಾಪನೆ ಹಾಗೂ ಇದಕ್ಕೆ ಕಾರಣರಾದ ಶಾಸಕರ ಶ್ರಮ ಸಾರ್ಥಕವಾವಾಗುತ್ತದೆ ಎಂದರು.


ಅಂಬೇಡ್ಕರ್ ಆಧ್ಯಾತ್ಮಿಕ ನಾಯಕ: ಸಂಸದ ವಿ.ಶ್ರೀನಿವಾಸಪ್ರಸಾದ್ ಅಂಬೇಡ್ಕರ್ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿ, ಭಾರತದ ಯಾವ ಮಹಾನ್ ನಾಯಕರು ಅಂಬೇಡ್ಕರ್‌ರಷ್ಟು ಕಷ್ಟಗಳನ್ನು ಅನುಭವಿಸಲಿಲ್ಲ. ಇವರೊಬ್ಬರು ಅಧ್ಯಾತ್ಮಿಕ ನಾಯಕರಾಗಿದ್ದಾರೆ. ಇವರು ರಚಿಸಿದ ಸಂವಿಧಾನ ದೇಶದ ಶ್ರೇಷ್ಠ ಗ್ರಂಥವಾಗಿದೆ. ಆದರೆ ಇದನ್ನು ಸಂಪೂರ್ಣವಾಗಿ ಜಾರಿಗೊಳಿಸುವಲ್ಲಿ ಎಲ್ಲ ಸರ್ಕಾರಗಳೂ ಸೋತಿವೆ ಎಂದರು.
ದೇಶದ ಹಳ್ಳಿಗಳಲ್ಲಿ ಇನ್ನೂ ಅಲಿಖಿತ ಸಂವಿಧಾನವಿದ್ದು, ಅವರದ್ದೇ ಕಟ್ಟುಪಾಡುಗಳಿಗೆ ಜೋತು ಬಿದ್ದಿರುವ ಅನೇಕ ಉದಾಹರಣೆಗಳು ಇಂದಿಗೂ ಜೀವಂತವಾಗಿದೆ. ಇದು ನಮ್ಮ ದೇಶದ ದುರಂತವಾಗಿದೆ. ಜಗತ್ತಿನ ಶ್ರೇಷ್ಠ ಸಂವಿಧಾನ ನಮ್ಮದಾದರೂ ಇನ್ನೂ ಸಮಾನತೆ ಬಾರದಿರುವುದು ಈ ದೇಶದ ಜನರ ಮನಸ್ಥಿತಿ ತೋರಿಸುತ್ತದೆ. 1991ರಲ್ಲಿ ಸಂಸತ್ ನಿಧಿ ಸ್ಥಾಪನೆಯಾಯಿತು. ಅಲ್ಲಿಂದ ನಾನು ನನಗೆ ಬರುವ ಅನುದಾನದಲ್ಲಿ ಪ್ರತಿ ಗ್ರಾಮಗಳಲ್ಲೂ ಅಂಬೇಡ್ಕರ್ ಸಮುದಾಯ ಭವನಗಳನ್ನು ನಿರ್ಮಾಣ ಮಾಡಲು ಅನುದಾನ ನೀಡಲಾರಂಭಿಸಿದೆ. ಇಲ್ಲಿನ ಭವನಕ್ಕೂ ಅಡಿಗಲ್ಲು ಹಾಕಿದವನೂ ನಾನೇ. ಆದರೆ ಪ್ರಸ್ತುತ ಅಂಬೇಡ್ಕರ್ ಭವನ ನಿರ್ವಹಣೆ ಕೆಲವೆಡೆ ಸರಿಯಾಗಿ ಆಗುತ್ತಿಲ್ಲ. ಇದು ನಿಲ್ಲಬೇಕು. ಇದೊಂದು ಶಕ್ತಿ ಕೇಂದ್ರವಾಗಿ ಮಾರ್ಪಡಬೇಕು ಎಂದು ಆಭಿಪ್ರಾಯಪಟ್ಟರು.
ನಂಜನಗೂಡಿನಲ್ಲಿ 6.5 ಎಕರೆ ಜಾಗದಲ್ಲಿ ಸಮಾನತೆಯ ಸಮುಚ್ಚಯ ಭವನ ನಿರ್ಮಾಣದ ಹೊಸ ಪರಿಕಲ್ಪನೆಯಡಿ ಸಮುದಾಯ ಭವನಗಳ ನಿರ್ಮಾಣವಾಗಲಿದೆ. ಇದರಲ್ಲಿ 14 ಹಿಂದುಳಿದ ವರ್ಗಗಳ ಸಮುದಾಯದವರಿಗೂ ಅನುಕೂಲವಾಗುವ ಭವನವನ್ನು ನಿರ್ಮಾಣ ಮಾಡಲಿದ್ದು, ಜ.29ರಂದು ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅಡಿಗಲ್ಲು ಹಾಕಲಿದ್ದಾರೆ. ಒಂದು ವರ್ಷದ ನಂತರ ನನ್ನ 50 ವರ್ಷಗಳ ಸುದೀರ್ಘ ರಾಜಕೀಯಕ್ಕೆ ನಿವೃತ್ತಿ ಘೋಷಿಸಲಿದ್ದೇನೆ ಎಂದು ಳಿಸಿದರು.

ವಿಶಿಷ್ಟವಾದ ಪ್ರತಿಮೆ: ಶಾಸಕ ಎನ್. ಮಹೇಶ್ ಮಾತನಾಡಿ, ಅಂಬೇಡ್ಕರ್ ಭವನದ ಮುಂಭಾಗ ಪ್ರತಿಮೆ ನಿರ್ಮಾಣ ಮಾಡಬೇಕೆಂಬುದು ಹಲವರ ಒತ್ತಾಸೆಯಾಗಿತ್ತು. ತಾಲೂಕಿನ ಹೊನ್ನೂರು ಗ್ರಾಮದಲ್ಲಿ ಪ್ರತಿಮೆ ನಿರ್ಮಾಣ ಮಾಡಿದ ನಂತರ ಪಟ್ಟಣದ ಭವನದ ಮುಂಭಾಗ ಉದ್ಯಾನವನ ಮಾಡಿ ಪ್ರತಿಮೆ ನಿರ್ಮಾಣ ಮಾಡಬೇಕೆಂಬ ಬಯಕೆ ಚಿಗುರೊಡೆಯಿತು. ಇದು ಅತ್ಯಂತ ಆಕರ್ಷಕವಾಗಿ ಮೂಡಿ ಬಂದಿದ್ದು, ದಕ್ಷಿಣ ಭಾರತದಲ್ಲೇ ವಿಶಿಷ್ಟವಾದ ಪ್ರತಿಮೆಯಾಗಿದೆ. ನಾನು ಯಾವ ಪಕ್ಷದಲ್ಲೇ ಇದ್ದರೂ ಅಂಬೇಡ್ಕರ್‌ವಾದಿ ಎಂದು ನನ್ನ ಕೆಲಸದಿಂದ ಮಾಡಿ ತೋರಿಸಿದ್ದೇನೆ. ಈ ಸಮುದಾಯದ ಜನರನ್ನು ಮುಖ್ಯವಾಹಿನಿಗೆ ತರುವುದು ನನ್ನ ಮುಖ್ಯ ಉದ್ದೇಶವಾಗಿದೆ ಎಂದರು.


ಮಾಜಿ ಶಾಸಕ ಎಸ್. ಬಾಲರಾಜು, ಸಾಹಿತಿ ಮಹದೇವ ಶಂಕನಪುರ, ನಳಂದ ಬುದ್ಧ ವಿಹಾರದ ಬೋಧಿರತ್ನ ಬಂತೇಜಿ, ವಿಶ್ವಮೈತ್ರಿ ಬುದ್ಧ ವಿಹಾರ ಕೇಂದ್ರ ಕಲ್ಯಾಣಸಿರಿ ಬಂತೇಜಿ, ಚೇತವನದ ಸುಫತಪಾಲ ಬಂತೇಜಿ ಮಾತನಾಡಿದರು.

ಅದ್ದೂರಿಯಾಗಿ ಮೆರವಣಿಗೆ: ಇದಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೆಳ್ಳಿರಥದಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ವಿವಿಧ ಕಲಾತಂಡಗಳೊಂದಿಗೆ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು. ಕಾರ್ಯಕ್ರಮಕ್ಕೆ ನೆರವಾದ ಮಾಜಿ ಸಂಸದ ಶಿವಣ್ಣ, ಮಾಜಿ ಶಾಸಕರಾದ ಎಸ್. ಜಯಣ್ಣ, ಎಸ್. ಬಾಲರಾಜು, ಎ.ಆರ್.ಕೃಷ್ಣಮೂರ್ತಿ ಅವರನ್ನು ಸನ್ಮಾನಿಸಲಾಯಿತು.

ಪಪಂ ಉಪಾಧ್ಯಕ್ಷೆ ಲಕ್ಷ್ಮೀ ಮಲ್ಲು ಸದಸ್ಯರಾದ ಸವಿತಾ ಮಹೇಶ್, ವೈ.ಜಿ.ರಂಗನಾಥ, ಬಿ. ರವಿ, ಮಂಜು, ಮಹೇಶ್, ನಿಂಗರಾಜು, ರಘು, ಸೇವಾ ಸಮಿತಿ ಅಧ್ಯಕ್ಷ ರೇವಣ್ಣ, ಚಕ್ರವರ್ತಿ, ನಾಗೇಂದ್ರ, ಲಿಂಗರಾಜಮೂರ್ತಿ, ಮಾಂಬಳ್ಳಿ ನಂಜುಂಡಸ್ವಾಮಿ, ರಾಮಯ್ಯ, ಸಿದ್ದರಾಜು ಇತರರು ಇದ್ದರು.