ಜಿಲ್ಲೆ

ಸಂವಿಧಾನದ ನಿಯಮ ಪಾಲಿಸಿದರೆ ದೇಶ ಸುರಕ್ಷಿತ: ವಕೀಲೆ ಕೆ.ಎಂ. ಉಷಾ ಅಭಿಮತ

ಮೈಸೂರು: ಸಂವಿಧಾನದಲ್ಲಿ ನಮ್ಮ ರಕ್ಷಣೆಗೆ ರೂಪಿಸಿರುವ ನಿಯಮಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲನೆ ಮಾಡಿದಾಗ ದೇಶ ಸುರಕ್ಷಿತವಾಗಿರುತ್ತದೆ ಎಂದು ವಕೀಲೆ ಕೆ.ಎಂ. ಉಷಾ ತಿಳಿಸಿದರು.
ನಗರದ ಟಿಟಿಎಲ್ ಟ್ರಸ್ಟ್, ಟಿಟಿಎಲ್ ವಾಣಿಜ್ಯ ವ್ಯವಹಾರ ನಿರ್ವಹಣಾ ಕಾಲೇಜು, ಟಿಟಿಎಲ್ ಸ್ವತಂತ್ರ ಪದವಿ ಪೂರ್ವ ಕಾಲೇಜು ಮತ್ತು ಯುವ ರೆಡ್ ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನೆ ಘಟಕ, ಐಕ್ಯೂಎಸಿಯಿಂದ ಟಿಟಿಎಲ್ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ಸಂವಿಧಾನದ ಪೀಠಿಕೆ ಓದುವ, ಪ್ರತಿಜ್ಞೆ ಸ್ವೀಕಾರ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಬ್ರಹಾಂ ಲಿಂಕನ್ ಅವರು ಹೇಳಿರುವಂತೆ ಪ್ರಜಾಪ್ರಭುತ್ವ ಎಂದರೆ ಬೈ ದ ಪೀಪಲ್ ಫಾರ್ ದ ಪೀಪಲ್ ಫ್ರಂ ದ ಪೀಪಲ್ ಅಂದರೆ ಪ್ರಜೆಗಳಿಗೆ, ಪ್ರಜೆಗಳಿಗೋಸ್ಕರ ಪ್ರಜೆಗಳಿಗಾಗಿ ಮಾಡಿರುವಂತದ್ದಾಗಿದೆ. ಇದರ ಒಳ ಅರ್ಥ ಏನೆಂದರೆ, ಪ್ರಜೆಗಳು ಸಂವಿಧಾನ ಓದಿ ತಿಳಿದುಕೊಂಡು ಅದನ್ನು ಅಳವಡಿಸಿಕೊಳ್ಳಬೇಕು. ನಮ್ಮ ಮೂಲಭೂತ ಹಕ್ಕುಗಳನ್ನು ತಿಳಿದುಕೊಳ್ಳಬೇಕು ಎಂಬುದಾಗಿದೆ ಎಂದು ಹೇಳಿದರು.
ಪ್ರತಿ ಬಾರಿ ಚುನಾವಣೆ ವೇಳೆ ನಾವೆಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಇದು ರಕ್ತದಾನ ಮಹಾದಾನ ಎಂಬಂತೆ ಅದಕ್ಕಿಂತಲೂ ಶ್ರೇಷ್ಠವಾದದ್ದು. ನಮ್ಮ ಭಾರತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇರುವಂತಹ ಒಂದು ದೇಶ ಎಂದರು.
ಪ್ರಪಂಚದ ಇತರ ದೇಶಗಳು ಕೂಡ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತವನ್ನು ನಡೆಸುತ್ತಿವೆ. ಹಲವು ರಾಜ್ಯಗಳು ಸೇರಿ ಭಾರತದ ಒಕ್ಕೂಟ ವ್ಯವಸ್ಥೆ ನಿರ್ಮಾಣಗೊಂಡಿದೆ. ನಮ್ಮ ದೇಶ ಬೃಹತ್ ಲಿಖಿತ ಸಂವಿಧಾನ ಹೊಂದಿದ್ದು, ಅತ್ಯುತ್ತಮವಾದುದು ಎಂದು ತಿಳಿಸಿದರು.
ಭಿನ್ನತೆಯಲ್ಲಿ ಏಕತೆ ಕಾಣುವ, ಪಾವಿತ್ರೃದಿಂದ ಕೂಡಿದ ಜಾತ್ಯತೀತ ದೇಶ ನಮ್ಮದಾಗಿದೆ. ನಮ್ಮ ಸಂವಿಧಾನ ಬರೆದಂತಹ ವ್ಯಕ್ತಿಗಳು ದೇಶಕ್ಕೆ ಪೂರಕವಾದ, ಅವಶ್ಯಕತೆಗೆ ಅನುಕೂಲವಾಗುವಂತಹ ಸಂವಿಧಾನವನ್ನು ಬರೆದಿದ್ದಾರೆ. ನಮ್ಮ ದೇಶಕ್ಕೆ ಅವಶ್ಯಕವಾದಂತಹ ಕಾನೂನುಗಳನ್ನು ತಿಳಿಸಿಕೊಟ್ಟಿದ್ದಾರೆ ಎಂದು ವಿವರಿಸಿದರು.
ಟಿಟಿಎಲ್ ಪದವಿ ಕಾಲೇಜು ಪ್ರಾಂಶುಪಾಲರಾದ ಡಾ.ಬಿ.ವಿ.ಪ್ರಶಾಂತ್ ಅಧ್ಯಕ್ಷತೆ ವಹಿಸಿದ್ದರು. ಟಿಟಿಎಲ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಸ್.ಭ್ರಮರಾಂಭ, ಪದವಿ ಕಾಲೇಜಿನ ಉಪನ್ಯಾಸಕ ಪ್ರೊ.ಎನ್.ಎಂ.ರಾಮಚಂದ್ರಯ್ಯ, ಸಂಚಾಲಕ ಎಚ್.ಆರ್. ಗಿರೀಶ್, ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಇತರರು ಇದ್ದರು.