ಮೈಸೂರು: ದೇಶದಲ್ಲಿ ಕೃಷಿ ಕ್ಷೇತ್ರ, ರಕ್ಷಣಾ ಕ್ಷೇತ್ರವನ್ನು ಸಮರ್ಥವಾಗಿ ಬಲವರ್ಧನೆಗೆ ಹಲವಾರು ಸಂವಿಧಾನದ ತಿದ್ದುಪಡಿಗಳನ್ನು ತರಲು ಕಾಂಗ್ರೆಸ್ ಪಕ್ಷವೇ ಕಾರಣ ಎಂದು ಕೆಪಿಸಿಸಿ ರೈತ ವಿಭಾಗದ ಅಧ್ಯಕ್ಷ ಸಚಿನ್ ಮೀಗಾ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಕಿಸಾನ್ ಘಟಕದ ಜಿಲ್ಲಾ ಸಮ್ಮೇಳನ ಹಾಗೂ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ವಿಷಯವನ್ನು ಬೇರೆ ರಾಜಕೀಯ ಪಕ್ಷಗಳು ಮುಂದುವರಿಸಿಕೊಂಡು ಹೋಗುತ್ತಿವೆಯಷ್ಟೇ. ಭಾರತದ ಬಲಿಷ್ಠತೆಯನ್ನು ಮನಗಂಡ ನೆರೆಯ ರಾಷ್ಟ್ರಗಳು ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ತುಳಿಯುವ ಸತತ ಪ್ರಯತ್ನದಲ್ಲಿ ನಾವು ಎಲ್ಲರೂ ಒಟ್ಟಾಗಿರುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದರು.
ಸದ್ಯದ ಭಾರತದ ಪರಿಸ್ಥಿತಿ ಹಾಗೂ ವಿಶ್ವದ ಇತ್ತೀಚಿನ ಸಾಮಾಜಿಕ ಹಾಗೂ ರಾಜಕೀಯ ತಲ್ಲಣಗಳನ್ನು ನೋಡಿದರೆ ಭಾರತ ತುರ್ತಾಗಿ ರಕ್ಷಣಾ ಕ್ಷೇತ್ರ, ಕೃಷಿ ಕ್ಷೇತ್ರವನ್ನು ಮತ್ತಷ್ಟು ಸಮರ್ಥವಾಗಿ ಬಲವರ್ಧನೆಗೊಳಿಸುವ ಅನಿವಾರ್ಯತೆ ಸರ್ಕಾರದ ಮುಂದಿದೆ ಎಂದರು.
ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ, ಯಾರೇ ವೃತ್ತಿ ನಿಲ್ಲಿಸಿದರು ರೈತ ಮಾತ್ರ ತನ್ನ ಕಾಯಕವನ್ನು ಬಿಡಲು ಸಾಧ್ಯವಿಲ್ಲ. ರೈತರು ಈ ದೇಶದ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ರೈತಾಪಿ ವರ್ಗಕ್ಕೆ ಅವಿರತವಾದ ಕೊಡುಗೆ ನೀಡುತ್ತಾ ಬಂದಿದೆ. ಸ್ವಾತಂತ್ರೃ ನಂತರದಲ್ಲಿ 20 ಅಂಶದ ಕಾರ್ಯಕ್ರಮದಲ್ಲಿ ರೈತರಿಗೆ ಅತಿ ಹೆಚ್ಚು ಕೊಡುಗೆ ನೀಡಿದಂತಹ ಹೆಗ್ಗಳಿಕೆ ಕಾಂಗ್ರೆಸ್‌ಗೆ ಸಲ್ಲುತ್ತದೆ ಎಂದು ನುಡಿದರು.
ಜಿಲ್ಲಾ ಕಾಂಗ್ರೆಸ್ ರೈತ ಘಟಕದ ಅಧ್ಯಕ್ಷರಾಗಿ ನಿಯೋಜನೆಗೊಂಡಿರುವ ಜಿ.ಮಹದೇವ್ ಅವರಿಗೆ ಕಾಂಗ್ರೆಸ್ ಧ್ವಜ ನೀಡಿ ಅಧಿಕಾರ ಹಸ್ತಾಂತರಿಸಲಾಯಿತು. ವಿಧಾನ ಪರಿಷತ್ ಸದಸ್ಯ ಡಿ.ತಿಮ್ಮಯ್ಯ, ಪಕ್ಷದ ಜಿಲ್ಲಾಧ್ಯಕ್ಷ ಡಾ.ಬಿ. ಜೆ. ವಿಜಯ್‌ಕುಮಾರ್ ಮಾತನಾಡಿದರು.
ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್, ಮುಖಂಡರಾದ ಶಿವನಾಗಪ್ಪ ಎನ್ ಭಾಸ್ಕರ್, ಲೋಕೇಶ್ ರಾವ್, ಎಡತಲೆ ಮಂಜುನಾಥ್, ಉತ್ತನಳ್ಳಿ ಶಿವಣ್ಣ, ತಲಕಾಡು ಮಂಜುನಾಥ್, ತಿಮ್ಮಯ್ಯ, ಕಾಂತರಾಜ್, ನಾಗೇಶ್ , ಚರಣ್ ರಾಜ್, ಚಂದ್ರಶೇಖರ್, ಪ್ರೇಮ್ , ಮಹೇಶ್, ಸತೀಶ್, ಕೋಟೆ ಮಂಜು, ಮಲ್ಲೇಶ್ ಕೋಟೆ ಇನ್ನಿತರರಿದ್ದರು.