ದಿವ್ಯ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮಲ್ಲಿ ನ್ಯಾಯಾಧೀಶರಿಂದ ಸಂವಿಧಾನದ ಪ್ರಸ್ತಾವನೆ ಸ್ವೀಕರಿಸುತ್ತಿರುವ ವಿದ್ಯಾರ್ಥಿಗಳು 
ಜಿಲ್ಲೆ

ಸಂವಿಧಾನದ ಕಾನೂನನ್ನು ಗೌರವಿಸಿ

ಬೇಲೂರು: ದೇಶದ ಪ್ರತಿಯೊಬ್ಬ ಪ್ರಜೆಯೂ ಶಾಂತಿ, ನೆಮ್ಮದಿಯಿಂದ ಜೀವನ ನಡೆಸಬೇಕೆಂದರೆ ನಮ್ಮ ಸಂವಿಧಾನದ ಕಾನೂನುಗಳನ್ನು ಗೌರವಿಸಿ ನಡೆಯಬೇಕು ಎಂದು ನ್ಯಾಯಾಧೀಶ ಪ್ರಕಾಶ್ ನಾಯಕ್ ಹೇಳಿದರು.

ತಾಲೂಕು ಕಾನೂನುಗಳ ಸೇವಾ ಸಮಿತಿ, ವಕೀಲರ ಸಂಘ, ಶಿಕ್ಷಣ ಇಲಾಖೆಯಿಂದ ಬೇಲೂರು ಪಟ್ಟಣದ ದಿವ್ಯ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಭಾರತದ ಸಂವಿಧಾನ ದಿನದ ಆಚರಣೆ, ಮೂಲಭೂತ ವಿಷಯಗಳ ಕುರಿತ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭಾರತದ ಸಂವಿಧಾನ ವಿಶ್ವದಲ್ಲೇ ಶ್ರೇಷ್ಠ ಸಂವಿಧಾನವಾಗಿದೆ. ಇದರ ರಚನೆಗೆ ಸಮಿತಿ ರಚಿಸಿ ಬೇರೆ ಬೇರೆ ದೇಶಗಳ ಸಂವಿಧಾನ ಪರಿಶೀಲಿಸಿ ನಮ್ಮದೇ ಆದ ಸಂವಿಧಾನವನ್ನು ಡಾ.ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಯಿತು ಮತ್ತು ಕಾಲ ಕಾಲಕ್ಕೆ ತಕ್ಕಂತೆ ತಿದ್ದುಪಡಿ ಮಾಡಲಾಗಿದೆ ಎಂದರು.

ಸಂವಿಧಾನದ ಆಶಯದಂತೆ ದೇಶದ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕುಗಳು ಆತನ ಅಸ್ಥಿತ್ವದಲ್ಲಿ ಇರುತ್ತದೆ. ಒಬ್ಬ ವ್ಯಕ್ತಿಯನ್ನು ಬಂಧಿಸಿದಾಗ ಆತನ ಆರೋಪ ಸಾಬೀತಾಗುವವರೆಗೂ ಎಲ್ಲ ಹಕ್ಕುಗಳನ್ನು ನೀಡಬೇಕು. ಭಾರತ ದೇಶದಲ್ಲಿ ನಮ್ಮ ಹಕ್ಕುಗಳಿಗಾಗಿ ಹೋರಾಡುತ್ತೇವೆ ಹೊರತು ನಮ್ಮ ಕರ್ತವ್ಯ ಪಾಲಿಸುವುದಿಲ್ಲ. ಆದ್ದರಿಂದ ದೇಶದ ಪ್ರತಿಯೊಬ್ಬರು ಸಂವಿಧಾನದ ಹಕ್ಕು ಕರ್ತವ್ಯಗಳನ್ನು ಪಾಲಿಸಿ, ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಪ್ರಕಾಶ್ ಕುಮಾರ್ ಮಾತನಾಡಿ, ನವೆಂಬರ್ 14 ಭಾರತದ ಸಂವಿಧಾನ ಸಮರ್ಪಿಸಿದ ದಿನವಾಗಿದೆ. ಜನವರಿ 26 ರಂದು ಗಣರಾಜ್ಯೋತ್ಸವವನ್ನಾಗಿ ಆಚರಿಸುತ್ತೇವೆ. ವಿದ್ಯಾರ್ಥಿಗಳು ಭಾರತದ ಮುಂದಿನ ಪ್ರಜೆಗಳು. ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಸಂವಿಧಾನದ ಆಶಯಗಳು ಈಡೇರಿಲ್ಲ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಸಿಗಬೇಕಾದ ಹಕ್ಕು ಬಾಧ್ಯತೆಗಳನ್ನು ತಲುಪುವಂತೆ ಮಾಡಬೇಕು. ನ್ಯಾಯಾಲಯದಲ್ಲಿ ದುರ್ಬಲ ವ್ಯಕ್ತಿಗೆ ಕಾನೂನಿನಲ್ಲಿ ಉಚಿತವಾದ ಎಲ್ಲ ಸೌಲಭ್ಯ ಕೊಡಿಸಲು ಅವಕಾಶವಿದೆ. ಇದರಿಂದ ಆ ವ್ಯಕ್ತಿಗೆ ಕಾನೂನಿನ ರಕ್ಷಣೆ ಸಿಗುತ್ತದೆ. ಇದನ್ನು ಪ್ರತಿಯೊಬ್ಬರು ಅರಿಯಬೇಕು ಎಂದರು.

ವಕೀಲರ ಸಂಘದ ಉಪಾಧ್ಯಕ್ಷ ಬಿ.ಆರ್.ರವಿ, ಕಾರ್ಯದರ್ಶಿ ಜಿ.ಟಿ.ಪ್ರಕಾಶ್, ದಿವ್ಯ ಪ್ರೌಢಶಾಲೆ ಸಂಸ್ಥಾಪಕ ಅಧ್ಯಕ್ಷ ಗೌಡೇಗೌಡ, ಇಸಿಒ ರವಿಕುಮಾರ್, ಮಂಜುನಾಥ್, ಮುಖ್ಯ ಶಿಕ್ಷಕರಾದ ಚೇತನ್, ಉಮೇಶ್ ಇದ್ದರು.