ಹುಮನಾಬಾದ್: ದೇಶದ ಪ್ರತಿಯೊಬ್ಬ ಪ್ರಜೆಗೂ ರಾಜಕೀಯ, ಸಾಮಾಜಿಕ ಆರ್ಥಿಕ ಸಮಾನತೆಯನ್ನು ದೊರಕಿಸಿ ಕೊಟ್ಟು ಸಹೋದರತ್ವ ಮತ್ತು ಸ್ವತಂತ್ರವಾಗಿ ಬದುಕಬೇಕೆಂಬ ಆಶಯದೊಂದಿಗೆ ರೂಪಗೊಂಡ ಭಾರತದ ಸಂವಿಧಾನದ ಘನತೆ ಮತ್ತು ಅದರಿಂದ ಸ್ಪೂರ್ತಿ ಪಡೆಯುವ ಬಗ್ಗೆ ಭವಿಷ್ಯದ ಪೀಳಿಗೆಯನ್ನು ಪ್ರೇರಪಿಸೋಣ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಹೇಳಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ದಾದಾ ಸಾಹೇಬ ಡಾ.ಎನ್.ಮೂರ್ತಿ ಸ್ಥಾಪಿತ) ಜಿಲ್ಲಾ ಮತ್ತು ತಾಲೂಕು ಶಾಖೆಯಿಂದ ಮಂಗಳವಾರ ಆಯೋಜಿಸಿದ್ದ ಭಾರತೀಯ ಸಂವಿಧಾನ ಅಂಗೀಕಾರದ ೭೫ನೇ ಅಮೃತ ಮಹೋತ್ಸವದ ವರ್ಷಾಚರಣೆ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ನಾವೆಲ್ಲರೂ ಸಂವಿಧಾನದಿಂದಾಗಿ ಸ್ಥಾನಮಾನ ಹೊಂದಲು ಸಾಧ್ಯವಾಗಿದೆ. ಈ ದಿನ ಅತ್ಯಂತ ಪವಿತ್ರ ದಿನವಾಗಿದೆ ಎಂದರು.
ಸಮ್ಮುಖ ವಹಿಸಿದ್ದ ಮಾಜಿ ಸಚಿವ ರಾಜಶೇಖರ ಪಾಟೀಲ್ ಮಾತನಾಡಿ, ಭಾರತ ಸಂವಿಧಾನ ಅಂಗೀಕಾರಗೊಂಡು ೭೫ನೇ ಅಮೃತ ಮಹೋತ್ಸವ ಆಚರಿಸುತ್ತಿರುವುದು ಸಂತಸ ತಂದಿದೆ. ಡಾ.ಅಂಬೇಡ್ಕರ್ ನೀಡಿರುವ ಸಂವಿಧಾನ ಅತ್ಯಮೂಲ್ಯವಾಗಿದೆ. ಕೇವಲ ದೇಶವಲ್ಲ ಇಡೀ ಜಗತ್ತು ಡಾ.ಅಂಬೇಡ್ಕರ್ ಅವರಿಗೆ ಗೌರವಿಸುತ್ತಿದೆ ಎಂದು ಹೇಳಿದರು.
ಮಾಜಿ ಶಾಸಕ ಸುಭಾಷ ಕಲ್ಲೂರ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಬಸವರಾಜ ಆರ್ಯ ಮಾತನಾಡಿದರು.
ದಲಿತ ಮುಖಂಡ ಶಿವಪುತ್ರ ಮಾಳಗೆ ಸಂವಿಧಾನ ಪೀಠಿಕೆ ವಾಚನ ಮಾಡಿದರು. ಸಮಿತಿಯ ಜಿಲ್ಲಾಧ್ಯಕ್ಷ ಲಕ್ಷ್ಮೀಪುತ್ರ ಮಾಳಗೆ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ್, ಪುರಸಭೆ ಅಧ್ಯಕ್ಷೆ ಪಾರ್ವತಿಬಾಯಿ ಶೇರಿಕಾರ, ಉಪಾಧ್ಯಕ್ಷ ಮುಕ್ರಂಜಾ, ಪ್ರಮುಖರಾದ ಲಕ್ಷ್ಮಣರಾವ ಬುಳ್ಳಾ, ಅಫ್ಸರಮಿಯಾ, ಕೆ.ಎಂ.ಗಜೇಂದ್ರ, ಸಂತೋಷ ಪಾಟೀಲ್, ಮಲ್ಲಿಕಾರ್ಜುನ ಮಹೇಂದ್ರಕರ, ಅನಿಲ ಪಸರ್ಗಿ, ಸುರೇಶ ಘಾಂಗ್ರೆ, ರವಿ ಹೊಸಳ್ಳಿ, ಬಸವರಾಜ ಮಾಳಗೆ, ಮಾಣಿಕ ಪವಾರ್, ನಾರಾಯಣ ರಾಂಪುರೆ, ಈಶ್ವರ ಕಾಂತ್ರಿ, ವಿಜಯಕುಮಾರ ಬಾಸಪಳ್ಳಿ, ಮಲ್ಲಿಕಾರ್ಜುನ ಶರ್ಮಾ ಇತರರಿದ್ದರು.
ವಿವಿಧ ಸಾಧಕರಿಗೆ ಸನ್ಮಾನ: ಭಾರತೀಯ ಸಂವಿಧಾನ ಅಂಗೀಕಾರದ ೭೫ ನೇ ಅಮೃತ ಮಹೋತ್ಸವದ ವರ್ಷಾಚರಣೆಯ ಸವಿ ನೆನಪಿಗಾಗಿ ತಾಲೂಕಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು. ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್ (ರಾಜಕೀಯ) ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಮಲ್ಲಿಕಾರ್ಜುನ ಮಾಶೆಟ್ಟಿ (ಸಹಕಾರ), ವಿಜಯವಾಣಿ ವರದಿಗಾರ ಸಂಜೀವಕುಮಾರ ಜುನ್ನಾ (ಮಾಧ್ಯಮ), ರೈತ ಸಂಘದ ಅಧ್ಯಕ್ಷ ಸತೀಶ ನನ್ನೂರೆ (ಕೃಷಿ), ಜಯ ಕರ್ನಾಟಕ ಜನಪರ ವೇದಿಕೆ ರಾಜ್ಯ ಕಾರ್ಯದರ್ಶಿ ನವೀನ ಬತಲಿ(ಸಮಾಜ ಸೇವೆ), ಪೊಲೀಸ್ ಪೇದೆ ಐ.ಎಸ್. ಶಕೀಲ್ (ಸಾಹಿತ್ಯ), ಜೆಡಿಎಸ್ ತಾಲೂಕು ಅಧ್ಯಕ್ಷ ಗೌತಮ ಸಾಗರ (ಬುದ್ಧ ಮೂರ್ತಿ ದಾನಿ), ಮಹಾದೇವಿ ಎನ್. ಕಟ್ಟಿಮನಿ (ಬುದ್ಧ ಮೂರ್ತಿದಾನಿ), ರವಿ ಸಾಗರ (ಅಂಬೇಡ್ಕರ್ ಮೂರ್ತಿದಾನಿ), ಗೌಸೋದ್ದಿನ್ (ಕಾರ್ಮಿಕ) ಸನ್ಮಾನಿತರು.