ಜಿಲ್ಲೆ

ಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬರು ಪಾಲಿಸೋಣ

ಚಾಮರಾಜನಗರ: ಡಾ.ಬಿ.ಆರ್.ಅಂಬೇಡ್ಕರ್ ಅವರು ಇಡೀ ವಿಶ್ವವೇ ಮೆಚ್ಚುವ ಸಂವಿಧಾನ ಬರೆದು ದೇಶದ ಜನತೆಗೆ ಲೋಕಾರ್ಪಣೆ ಮಾಡಿದ್ದಾರೆ. ದೇಶದ ಪ್ರತಿಯೊಬ್ಬ ನಾಗರೀಕರು ಸಂವಿಧಾನದ ಮೂಲಆಶಯಗಳನ್ನು ಪಾಲನೆ ಮಾಡಬೇಕು ಎಂದು ಸಂತೇಮರಹಳ್ಳಿ ಪೋಲಿಸ್ ಠಾಣೆ ಉಪನಿರೀಕ್ಷಕ ಬಿ.ತಾಜುದ್ದೀನ್ ಹೇಳಿದರು.

ತಾಲೂಕಿನ ಸಂತೇಮರಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜನಹಿತಾಶಕ್ತಿ ಹೋರಾಟವೇದಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶುಕ್ರವಾರ ನಡೆದ ಸಂವಿಧಾನ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅಂಬೇಡ್ಕರ್ ಅವರು ಪ್ರಪಂಚದ ನಾನಾದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ, ಭಾರತ ದೇಶದ ಅಭಿವೃದ್ದಿಗೆ ಪೂರಕವಾದ ಸುಭದ್ರ ಸಂವಿಧಾನ ರಚನೆಮಾಡಿದ್ದಾರೆ. ಶಾಲಾಕಾಲೇಜಿನ ವಿದ್ಯಾರ್ಥಿಗಳು ವಿದ್ಯಾರ್ಥಿದೆಸೆಯಲ್ಲೇ ಅಂಬೇಡ್ಕರ್ ರಚಿಸಿರುವ ಸಂವಿಧಾನವನ್ನು ಅಧ್ಯಯನ ಮಾಡಬೇಕು. ಸಂವಿಧಾನದಲ್ಲಿ ಉಲ್ಲೇಖಿಸಲಾಗಿರುವ ಮೂಲಭೂತ ಹಕ್ಕುಗಳ ಜತೆ ಕರ್ತವ್ಯಗಳನ್ನು ಪಾಲನೆ ಮಾಡುವುದಕ್ಕೆ ಮೊದಲ ಆಧ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಸಿದ್ದಾರ್ಥ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಸಿ.ರಂಗಸ್ವಾಮಿ ಮಾತನಾಡಿ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಧಾರ್ಮಿಕ ಆಚರಣೆ, ವಿವಿಧ ಜಾತಿ, ಧರ್ಮ ಒಳಗೊಂಡಿರುವ ಭಾರತಕ್ಕೆ ಸುಂದರ ಸಂವಿಧಾನವನ್ನು ಅಂಬೇಡ್ಕರ್ ಬರೆದುಕೊಟ್ಟಿದ್ದಾರೆ. ದೀನದಲಿತರು ಬಡವರಿಗೂ ಒಂದೇಮತ ಎಂಬುದನ್ನು ಸಾರಿಹೇಳಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಜನಹಿತಾಶಕ್ತಿ ಹೋರಾಟವೇದಿಕೆ ಜಿಲ್ಲಾಧ್ಯಕ್ಷ ರಾಮಸಮುದ್ರ ಸುರೇಶ್, ಗ್ರಾಪಂ ಸದಸ್ಯ ಶಿವಕುಮಾರ್, ಮಾಜಿಸದಸ್ಯ ಡಿ.ಪಿ.ರಾಜು, ಮುಖಂಡರಾದ ಉಮ್ಮತ್ತೂರು ಸೋಮಣ್ಣ, ಗ್ರಾಪಂ ಪಿಡಿಇ ಮಮತಾ, ಪ್ರಾಂಶುಪಾಲ ಪಿ. ಪ್ರಿಯಾಶಂಕರ್, ಉಪನ್ಯಾಸಕ ಪ್ರಸಾದಸ್ವಾಮಿ, ಪುಟ್ಟಲಕ್ಷ್ಮಮ್ಮ, ಶಾಂತಾ, ಮಹದೇವಪ್ರಭು, ಸುದನ್ಯ, ಶೋಭಾ, ನಾಗಲಾಂಬಿಕಾ, ರೇಖಾ, ಅನಿತಾಕುಮಾರಿ, ಸೋನಿಯಾ, ಬಿ.ಚಿದಾನಂದಸ್ವಾಮಿ ಇತರರು ಹಾಜರಿದ್ದರು.