ಜಿಲ್ಲೆ

ಸಂವಿಧಾನದ ಆಶಯ ಭಗ್ನಗೊಂಡರೆ ಅನಾಗರಿಕ ಸಮಾಜ: ದಿನೇಶ್ ಅಮೀನ್ ಮಟ್ಟು ಕಳವಳ

 ಮೈಸೂರು: 

ಸಂವಿಧಾನ ಜಾರಿಗೊಂಡಾಗ ವಿರೋಧಿಸಿದವರು ಇಂದು ಎದೆಗಪ್ಪಿಕೊಂಡು ಮೆರೆಯುತ್ತಿದ್ದಾರೆ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಹೇಳಿದರು.

ನಗರದ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಠದ ಶ್ರೀಗಳು ನಮ್ಮನ್ನು ಗೌರವಿಸುವ ಸಂವಿಧಾನ ಬೇಕು.

ಸ್ವಾತಂತ್ರೃ ಪೂರ್ವದಲ್ಲಿದ್ದ ಸಂವಿಧಾನ ಬೇಕು ಎನ್ನುತ್ತಿದ್ದಾರೆ. ಅವರ ಮನಸ್ಸಿನಲ್ಲಿ ಅಲಿಖಿತ ಸಂವಿಧಾನ ಬರಬೇಕೆಂಬ ಆಸೆ ಇರುವಂತಿದೆ. ಈಗಿನ ಸಂದರ್ಭವನ್ನು ಯಾವ ರೀತಿ ಎದುರಿಸಬೇಕು. ಸಂವಿಧಾನ ರಕ್ಷಕರಾದ ರಾಜ್ಯಪಾಲರು ಸ್ವಾಮೀಜಿ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ.

ದೊಡ್ಡ ಮಟ್ಟದಲ್ಲಿ ಪ್ರತಿಕ್ರಿಯೆ ಬರಲಿಲ್ಲ. ರಾಹುಲ್ ಗಾಂಧಿ ಅವರು ತಮ್ಮ ಮೊಬೈಲ್, ಪರ್ಸ್ ಮರೆತರು ಸಂವಿಧಾನದ ಪ್ರತಿಯನ್ನು ಮರೆತಿಲ್ಲ. ಪ್ರಿಯಾಂಕಾ ಗಾಂಧಿ ಅವರು ಪ್ರಮಾಣ ವಚನ ಸ್ವೀಕರಿಸುವಾಗ ಸಂವಿಧಾನ ಪ್ರತಿ ಹಿಡಿದಿದ್ದರು. ಆದರೆ, ಕಾಂಗ್ರೆಸ್ ನಾಯಕರಿಂದ ದೊಡ್ಡ ಮಟ್ಟದ ಪ್ರತಿಕ್ರಿಯೆ ಬರಲಿಲ್ಲ ಎಂದರು.

ಅಂಬೇಡ್ಕರ್ ಎಂದರೆ ಸಂವಿಧಾನವೇ. ಈ ಸಂವಿಧಾನದಿಂದ ಕಾಡಿನಂತ ಪ್ರದೇಶವನ್ನು ನಾಡನ್ನಾಗಿಸಿತು. ಈ ಸಂವಿಧಾನ ಹೋದರೆ ಎಲ್ಲರೂ ನಾಶವಾಗುತ್ತಾರೆ.

ಅನಾಗರಿಕ ಸಮಾಜ ನಿರ್ಮಾಣವಾಗುತ್ತದೆ. ಸಂವಿಧಾನದ ಆಶಯ ಭಗ್ನಗೊಂಡರೆ ಅನಾಗರಿಕ ಸಮಾಜದ ಕಡೆ ಹೋಗುತ್ತೇವೆ. ಸಂವಿಧಾನ ಜಾರಿಗೊಂಡ 74 ವರ್ಷಗಳ ನಂತರವೂ ದೇಶದಲ್ಲಿ ಸಂವಿಧಾನ ಉಳಿವಿನ ಅಭಿಯಾನ ಏಕೆ ನಡೆಯುತ್ತಿದೆ. ನಮ್ಮ ಸಂವಿಧಾನ ಬಹಳ ಸುರಕ್ಷಿತವಾಗಿದೆಯೇ? ಎಂದು ಪ್ರಶ್ನಿಸಿದರು.

ಸಂಸತ್‌ನಲ್ಲಿ ಗಂಭೀರ ಸ್ವರೂಪದ ಆರೋಪಗಳಿರುವ 243 ಸಂಸದರಿದ್ದಾರೆ. ಯಾವುದೇ ಚರ್ಚೆಯಾಗದೆ ಸರ್ವಾಧಿಕಾರಿಯಂತೆ ಮಸೂದೆಗಳು ಅಂಗೀಕಾರವಾಗುತ್ತಿವೆ.

ನ್ಯಾಯಾಂಗದ ತೀರ್ಪುಗಳು ಭರವಸೆ ಕಳೆದುಕೊಳ್ಳುವಂತೆ ಮಾಡಿದೆ. ಜಾಮೀನು ನೀಡದಿರುವ ಫೋಕ್ಸೊ ಪ್ರಕರಣದಲ್ಲಿ ಜಾಮೀನು ನೀಡಲಾಗಿದೆ. ಒಳಗಿಂದಲೇ ಸಂವಿಧಾನವನ್ನು ದುರ್ಬಲಗೊಳಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಅಂಬೇಡ್ಕರ್ ಹಿಂದು ಧರ್ಮದ ಸುಧಾರಣೆಗೆ ಪ್ರಯತ್ನಿಸಿ ಸುಧಾರಣೆ ಸಾಧ್ಯವಿಲ್ಲ ಎಂಬುದನ್ನು ಅರಿತು ಕೊನೆಯದಾಗಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡರು. ವರ್ಣಾಶ್ರಮ ವ್ಯವಸ್ಥೆ ವಿರುದ್ಧ ದೀರ್ಘಕಾಲ ಹೋರಾಟ ಮಾಡಿದರು. ಚಿಕ್ಕಮಗಳೂರಿನ ದೇವಸ್ಥಾನದಲ್ಲಿ ದಲಿತರಿಗೆ ಪ್ರವೇಶ ನಿರಾಕರಿಸಲಾಗಿದೆ.

16 ನಿಮಿಷಕ್ಕೆ ಒಂದು ದಲಿತರ ಮೇಲೆ ದೌರ್ಜನ್ಯವಾಗುತ್ತಿದೆ. ನಾಲ್ವರು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಕಾಂಗ್ರೆಸ್ ಅಂಬೇಡ್ಕರ್ ವಿರೋಧಿಸಿತು ಎಂಬುದರಲ್ಲಿ ಹುರುಳಿಲ್ಲ. ಭಾರತ ರತ್ನ ಕೊಡದಿದ್ದು, ದೆಹಲಿಯಲ್ಲಿ ಅಂತ್ಯಕ್ರಿಯೆಗೆ ಜಾಗ ಕೊಡಬೇಕಿತ್ತು. ಅಂಬೇಡ್ಕರ್ ಅವರ ಚುನಾವಣೆ ಸೋಲಿಗೆ ಕಾಂಗ್ರೆಸ್ ಮಾತ್ರವಲ್ಲ, ಜನಸಂಘ, ಕಮ್ಯುನಿಸ್ಟ್ ಪಕ್ಷಗಳು ಕಾರಣವಾಗಿವೆ.

ಆದರೆ, ಕಾಂಗ್ರೆಸ್ ನಡುವೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇರಲಿಲ್ಲ. ಭಿನ್ನಾಭಿಪ್ರಾಯ ಇದ್ದಿದ್ದರೆ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸುತ್ತಿರಲಿಲ್ಲ. ಅವರು ಬರೆದ ಸಂವಿಧಾನವನ್ನು ಅಕ್ಷರಶಃ ಒಪ್ಪಿ ಅನುಷ್ಠಾನ ಮಾಡಿದ್ದು ಕಾಂಗ್ರೆಸ್ ಎಂದರು.