ಗುಂಡ್ಲುಪೇಟೆ: ಮೈಸೂರು ಸಂಸ್ಥಾನ ಸಂವಿಧಾನಕ್ಕಿಂತಲೂ ಮೊದಲು ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಿತ್ತು ಎಂದು ರಾಜ್ಯದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ತಮ್ಮ 75ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ತಾಲೂಕಿನ ಬೆಂಡರವಾಡಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮೈಸೂರು ಸಂಸ್ಥಾನ ಜನಪರ ಕೆಲಸಗಳನ್ನು ಜಾರಿಗೆ ತರುವ ಮೂಲಕ ಇತರರಿಗೆ ಮಾದರಿಯಾಗಿದೆ.
ದೇಶವನ್ನು ಸಾವಿರಾರು ಅರಸರು ಆಳ್ವಿಕೆ ಮಾಡಿದ್ದರೂ ಮೈಸೂರು ಸಂಸ್ಥಾನ ತನ್ನದೇ ಆದ ಹಿರಿಮೆ ಹೊಂದಿದೆ. ದೇಶಕ್ಕೆ ಸ್ವಾತಂತ್ರೃ ಬಂದ ನಂತರ ಸಂವಿಧಾನದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ಮೊದಲೇ 1921ರಲ್ಲಿ ಮೈಸೂರು ಅರಸರು ಬಡ ಹಿಂದುಳಿದ ವರ್ಗಗಳನ್ನು ಮೇಲೆತ್ತಲು ಮೀಸಲಾತಿ ತಂದಿತ್ತು. ಪರಿಶಿಷ್ಟ ಜಾತಿ ಹಾಗೂ ಜನಾಂಗದ ಜನರ ಸ್ವಾಭಿಮಾನದ ಬದುಕಿಗೆ ನೆರವಾಗಲು ಎಚ್.ಸಿ.ಮಿಲ್ಲರ್ ಕಮಿಷನ್ ನೇಮಿಸಿ ಅದರ ಶಿಫಾರಸ್ಸಿನಂತೆ ಮೀಸಲಾತಿ ಸೌಲಭ್ಯ ಒದಗಿಸಿ ಜನಸಾಮಾನ್ಯರ ಪರವಾಗಿದ್ದರು. ಇದರಿಂದಲೇ ಈ ಭಾಗದ ಹಿಂದುಳಿದ ವರ್ಗಗಳ ಜನರು ಮೈಸೂರು ಸಂಸ್ಥಾನವನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದಾರೆ ಎಂದು ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ದೇಶಕ್ಕೆ ಸಂವಿಧಾನವನ್ನು ನೀಡದಿದ್ದರೆ ಕೋಟ್ಯಂತರ ಜನರು ಇನ್ನೂ ಬಡತನ ಹಾಗೂ ಶೋಷಣೆಯಲ್ಲಿ ನರಳಬೇಕಾಗಿತ್ತು. ಶಿಕ್ಷಣ ಎಲ್ಲವನ್ನೂ ಬದಲಾಯಿಸುತ್ತದೆ ಎಂದು ಪ್ರತಿಪಾದಿಸಿದರು. ಇದರಿಂದ ಸಂವಿಧಾನ ಜಾರಿಗೆ ಬಂದ ನಂತರ ಎಲ್ಲರಿಗೂ ಸಮಾನ ಶಿಕ್ಷಣ ದೊರಕುವಂತೆ ಮಾಡಿದ್ದರಿಂದ ಕೆಳವರ್ಗದ ಜನರ ಬದುಕು ಬದಲಾಗಲು ಸಾಧ್ಯವಾಗಿದೆ. ಸ್ವತಂತ್ರ ಪೂರ್ವದಲ್ಲಿ ಶೇ.18ರಷ್ಟಿದ್ದ ಶಿಕ್ಷಣ ಇಂದು ಎಲ್ಲರಿಗೂ ದೊರಕುವಂತಾಗಿದೆ. ಎಲ್ಲ ಸರ್ಕಾರಗಳು ಎಲ್ಲರಿಗೂ ಶಿಕ್ಷಣಕ್ಕೆ ಆದ್ಯತೆ ನೀಡಿದ್ದರಿಂದ ದೇಶವು ಶೈಕ್ಷಣಿಕವಾಗಿ ಮುಂದುವರಿಯಲು ಸಾಧ್ಯವಾಗಿದೆ. ಶ್ರೀಸಾಮಾನ್ಯರ ಜೀವನಮಟ್ಟ ಹೆಚ್ಚಲು ಕಾರಣವಾಗಿದೆ. ಆಧುನಿಕ ಭಾರತದಲ್ಲಿ ಶಿಕ್ಷಣ ಪಡೆದ ವಿದ್ಯಾವಂತರು ದೇಶ ಮಾತ್ರವಲ್ಲ ವಿದೇಶಗಳಲ್ಲಿಯೂ ಉತ್ತಮ ಸೇವೆ ನೀಡುತ್ತಿದ್ದಾರೆ. ದೇಶದಲ್ಲಿ ನಾನಾ ಭಾಷೆಗಳು, ಆಹಾರ ಪದ್ಧತಿ, ಆಚಾರ ವಿಚಾರಗಳು ಬೇರೆಯಾಗಿದ್ದರೂ ಸಂಸ್ಕೃತಿ, ಸಾಹಿತ್ಯ ಮತ್ತು ಪರಂಪರೆಗಳು ಇನ್ನೂ ಉಳಿಯಲು ಸಂವಿಧಾನ ಕಾರಣವಾಗಿದೆ ಎಂದು ಹೆಳಿದರು.
ಮೈಸೂರು-ಕೊಡಗು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಬಂಡೀಪುರ ಸುತ್ತಮುತ್ತಲಿನ ಎಲ್ಲ ಊರುಗಳಿಗೂ ಮೈಸೂರು ಅರಮನೆಗೆ ಅವಿನಾಭಾವ ಸಂಬಂಧವಿದೆ. ಮೈಸೂರು ಅರಸರು ಡಾ.ರಾಜಕುಮಾರ್ ಅವರಿಗೆ ರಣಧೀರ ಕಂಠೀರವ ಚಲನ ಚಿತ್ರ ನಿರ್ಮಿಸಲು ಅವಕಾಶ ನೀಡಿದ್ದರು. ಚಿಕ್ಕದೇವರಾಜ ಒಡೆಯರ್ ಅವರ ಅವಧಿಯಲ್ಲಿ ಗುಂಡ್ಲುಪೇಟೆಯ ಅಭಿವೃದ್ಧಿಗೆ ಹೆಚ್ಚಿನ ನೆರವು ನೀಡಿದ್ದರು. ಅರಸರು ಗುಂಡ್ಲುಪೇಟೆ ಮಾರ್ಗವಾಗಿ ತಮಿಳುನಾಡಿಗೆ ಹೋಗುತ್ತಿದ್ದರು. ಇದರಿಂದ ಇತರ ಭಾಗಗಳಿಗಿಂತ ಗುಂಡ್ಲುಪೇಟೆ ಹೆಚ್ಚಿನ ಬೆಳವಣಿಗೆ ಹೊಂದಿದೆ. ಅರಸರ ಮನೆತನವನ್ನು ಬೆಟ್ಟದ ಕೋಟೆ ಮನೆತನ ಎಂದು ಕರೆಯಲಾಗುತ್ತಿದ್ದು, ಹಿಮವದ್ ಗೋಪಾಲಸ್ವಾಮಿಬೆಟ್ಟ ಮತ್ತು ಹಂಗಳಕ್ಕೂ ಹತ್ತಿರದ ಸಂಬಂಧವಿದೆ. ಡಾ.ಜಿ.ಪರಮೇಶ್ವರ್ ಅವರ ಹುಟ್ಟುಹಬ್ಬದ ಅಂಗವಾಗಿ ಕುಗ್ರಾಮದ ಅಭಿವೃದ್ಧಿಗೆ ಪೂರಕವಾಗಿ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಡಾ.ರಾಜು ಮಾತನಾಡಿ, ಮೈಸೂರು ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ 1914ರಲ್ಲಿ ವಿದ್ಯೆ ಪಡೆಯುವುದು ಸಾರ್ವಜನಿಕರ ಹಕ್ಕು ಎಂದು ರಾಜಾಜ್ಞೆ ಹೊರಡಿಸಿದ್ದ ವಿರುದ್ಧ ಕೆಲವರು ಪ್ರತಿಭಟನೆ ನಡೆಸಿದ್ದರು. ದಲಿತ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಅನುಕೂಲಕ್ಕೆ ನರಸಿಂಹರಾಜ ಕಂಠೀರವ ಶಾಲೆ ಮತ್ತು ಹಾಸ್ಟೆಲ್ ತೆರೆದಿದ್ದರು. ಇದರಿಂದಲೇ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಸರ್ಕಾರಿ ಸೇವೆಗೆ ಸೇರಲು ಸಾಧ್ಯವಾಯಿತು. ತಾವು ಬಂಡೀಪುರದ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದಾಗ ಅರಣ್ಯ ರಸ್ತೆಯಲ್ಲಿ ರಾತ್ರಿ ವೇಳೆ ವಾಹನಗಳ ಸಂಚಾರ ನಿಷೇಧ ಮಾಡಿದ್ದು ಈಗಲೂ ಜಾರಿಯಲ್ಲಿದೆ. ಆಗಾಗ ಇದನ್ನು ತೆರವುಗೊಳಿಸುವ ಮಾತುಗಳು ಕೇಳಿಬರುತ್ತಿದ್ದು ಅರಣ್ಯ ಮತ್ತು ವನ್ಯಜೀವಿಗಳ ಹಿತಾಸಕ್ತಿಯಿಂದ ಮುಂದೆ ಯಾವುದೇ ಕಾರಣಕ್ಕೂ ಇದನ್ನು ತೆರವುಗೊಳಿಸಬಾರದು ಎಂದು ಹೇಳಿದರು.
ನಮ್ಮ ಮುತ್ತಾತನೂ ಅರಮನೆ ಸೈನಿಕ: ನಮ್ಮ ಮುತ್ತಾತ ಮೈಸೂರು ಸಂಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಅರಮನೆಗೆ ಬೆಂಕಿ ಬಿದ್ದಿತ್ತು. ಅರಸೊತ್ತಿಗೆ ಸುಟ್ಟುಹೋಗದಂತೆ ಜೀವವನ್ನೂ ಲೆಕ್ಕಿಸದೆ ಪ್ರಮುಖ ವಸ್ತುಗಳನ್ನು ರಕ್ಷಿಸಿದ ಐವರು ಸೈನಿಕರಲ್ಲಿ ಅವರೂ ಒಬ್ಬರಾಗಿದ್ದರು. ನಾನು ಮತ್ತು ಯದುವೀರರು ಬೇರೆ ಬೇರೆ ಪಕ್ಷದಲ್ಲಿದ್ದರೂ ಅವರನ್ನು ಗೌರವದಿಂದ ಕಾಣುತ್ತಿದ್ದೇನೆ ಎಂದು ಡಾ.ಪರಮೇಶ್ವರ್ ಹೇಳಿದರು.
ಶೂಲದ ಮಾರಮ್ಮನ ದೇವಾಲಯ ಉದ್ಘಾಟನೆ: ಇದೇ ಸಂದರ್ಭದಲ್ಲಿ ಗ್ರಾಮದಲ್ಲಿ ನಿರ್ಮಿಸಿದ ಶೂಲದ ಮಾರಮ್ಮನ ದೇವಾಲಯ ಉದ್ಘಾಟನೆ, ಧ್ವನಿ ಸುರುಳಿ ಬಿಡುಗಡೆ, ನಾನಾ ಕವಿಗಳ ಪುಸ್ತಕಗಳ ಬಿಡುಗಡೆ, ಸವ್ಯಸಾಚಿ ಗೃಹ ಕೈಗಾರಿಕೆ ನೂತನ ಕಟ್ಟಡ ಉದ್ಘಾಟನೆ, 1000 ಸಸಿ ನೆಡುವ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಬುದ್ಧ ವಿಹಾರದ ಬಂತೇಜಿ, ಗುಲ್ಬರ್ಗಾ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ನಿರ್ದೇಶಕ ಡಾ.ಬೋಪೆ, ಸಿದ್ದಾರ್ಥ ವಿದ್ಯಾಸಂಸ್ಥೆ ಮೌಲ್ಯಮಾಪನ ವಿಭಾಗದ ಡಾ.ಗುಣಶೇಖರ್, ಜಯದೇವ ಆಸ್ಪತ್ರೆಯ ಡಾ.ಶಿವಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ, ಜಾರಿ ನಿರ್ದೇಶನಾಲಯದ ಡಾ.ಆನಂದಕುಮಾರ್, ಗಣಿ ಇಲಾಖೆಯ ಜಂಟಿ ನಿರ್ದೇಶಕಿ ಡಾ.ಲಕ್ಷ್ಮಮ್ಮ, ಜನಪದ ಕಲಾವಿದ ಮಳವಳ್ಳಿ ಮಹದೇವಸ್ವಾಮಿ ಮತ್ತಿತರರು ಹಾಜರಿದ್ದರು.