ಮೈಸೂರು: ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಅಪಪ್ರಚಾರ ಮಾಡಲಾಗುತ್ತಿದೆ. ಇದಕ್ಕೆ ವಿದ್ಯಾವಂತ ಯುವಜನರು ತಕ್ಕ ಉತ್ತರ ಕೊಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮಾನಸಗಂಗೋತ್ರಿಯ ವಿಶ್ವಜ್ಞಾನಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಮೈಸೂರು ವಿಶ್ವವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನ ಮತ್ತು ವಿಸ್ತರಣೆ ಕೇಂದ್ರದ ರಜತ ಮಹೋತ್ಸವ, 3 ಕೋಟಿ ರೂ. ವೆಚ್ಚದ ‘ಜ್ಞಾನದರ್ಶನ’ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಂಬೇಡ್ಕರ್ ಹೆಸರಲ್ಲಿ ಬಿಜೆಪಿಯವರು, ಸಂಘ ಪರಿವಾರದವರು ಸುಳ್ಳು ಸುದ್ದಿ ಹರಡುತ್ತಿದ್ದಾರೆ. ‘ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಕಾಂಗ್ರೆಸ್’ ಎಂದು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಆದರೆ ನನ್ನನ್ನು ಚುನಾವಣೆಯಲ್ಲಿ ಸೋಲಿಸಿದ್ದು ಸಾವರ್ಕರ್ ಮತ್ತು ಡಾಂಗೆ ಎಂದು ಸ್ವತಃ ಅಂಬೇಡ್ಕರ್ ಅವರೇ ತಮ್ಮದೇ ಹಸ್ತಾಕ್ಷರದಲ್ಲಿ ಬರೆದಿದ್ದಾರೆ. ತನ್ನ ಸ್ನೇಹಿತನಿಗೆ ಬರೆದ ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಇಂತಹ ಸತ್ಯಗಳನ್ನು ಸಮಾಜದ ಮುಂದಿಟ್ಟು ಸಂಘ ಪರಿವಾರದ ಸುಳ್ಳುಗಳಿಗೆ ಉತ್ತರ ಕೊಡಬೇಕು ಎಂದರು.
ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಅಂದೇ ವಿರೋಧಿಸಿದವರು ಸಂಘಪರಿಹಾರ, ಆರ್‌ಎಸ್‌ಎಸ್‌ನವರು. ಈಗಲೂ ವಿರೋಧಿಸುತ್ತಿದ್ದಾರೆ. ಆದ್ದರಿಂದ ಇವರ ಬಗ್ಗೆ ಎಚ್ಚರಿಕೆಯಿಂದ ಇರಬೇಕಾಗಿದೆ ಎಂದರು.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರ ಮೇಲೆ ಸನಾತನಿಯೊಬ್ಬ ಶೂ ಎಸೆದಿರುವುದು ಈಗಲೂ ಜಾತಿ ವ್ಯವಸ್ಥೆ ಇದೆ ಎಂಬುದಕ್ಕೆ ಜ್ವಲಂತ ಸಾಕ್ಷಿ. ಇದಕ್ಕೆ ನೀರೆರೆಯುವ ಕೆಲಸವನ್ನು ಸನಾತನಿಗಳು, ಪಟ್ಟಭದ್ರರು ಮಾಡುತ್ತಿದ್ದಾರೆ. ಇದನ್ನು ದಲಿತರಷ್ಟೇ ಅಲ್ಲ, ಪ್ರತಿಯೊಬ್ಬರೂ ವಿರೋಧಿಸಬೇಕು. ಹೀಗಾದಾಗ ಮಾತ್ರ ಸಮಾಜ ಬದಲಾವಣೆಯ ಹಾದಿಯಲ್ಲಿದೆ ಎಂದು ಸಮಾಧಾನ ಪಟ್ಟುಕೊಳ್ಳಬಹುದು ಎಂದರು.
ಸಮಾಜದ ಬದಲಾವಣೆ ಪರ ಇರುವವರೊಂದಿಗೆ ಜನರು ನಿಲ್ಲಬೇಕು. ಯಾರು ವಿರುದ್ಧವಾಗಿದ್ದಾರೋ ಅವರ ವಿರುದ್ಧ ಎಚ್ಚರಿಕೆ ವಹಿಸಬೇಕು. ಸಮಾಜ ಬದಲಾವಣೆಯ ವಿರೋಧಿಗಳ, ಸನಾತನಿಗಳ ಸಹವಾಸ ಬೇಡ ಎಂದೂ ಹೇಳಿದರು.
ಎಲ್ಲರಿಗೂ ಸಮಾನ ಅವಕಾಶಗಳು ಸಿಗದೇ ಇದ್ದುದ್ದರಿಂದ ಅಸಮಾನತೆ ಸೃಷ್ಟಿಯಾಗಿದೆ. ವಿದ್ಯೆ ಯಾರಪ್ಪನ ಮನೆ ಆಸ್ತಿ ಅಲ್ಲ. ಅವಕಾಶಗಳು ಸಿಗಬೇಕು ಅಷ್ಟೇ. ಅವಕಾಶ ಸಿಕ್ಕಾಗ ವಿದ್ವಾಂಸ, ಜ್ಞಾನಿ ಆಗುತ್ತಾರೆ. ಅಂಬೇಡ್ಕರ್ ಅವರು ತಮ್ಮ ಜ್ಞಾನವನ್ನು ಸಮಾಜದ ಬದಲಾವಣೆಗೆ ಬಳಸಿದ ಮಹಾನ್ ಚೇತನ. ಅವರು ಸಮಾಜವನ್ನು ಅರ್ಥ ಮಾಡಿಕೊಳ್ಳಲು ಜ್ಞಾನ ಸಂಪಾದನೆ ಮಾಡಿದರು, ಅದನ್ನು ಸಮಾಜದ ಪರಿವರ್ತನೆಗೆ ವಿನಿಯೋಗಿಸಿದರು ಎಂದರು.
ಅಂಬೇಡ್ಕರ್ ಅವರಿಗೆ ಅಂಬೇಡ್ಕರ್ ಅವರೇ ಸಾಟಿ. ವಿಶ್ವದ ಎಲ್ಲ ಸಂವಿಧಾನಗಳನ್ನು ಓದಿ, ಜೀರ್ಣಿಸಿಕೊಂಡು ಭಾರತೀಯ ಸಮಾಜಕ್ಕೆ ಅನ್ವಯ ಆಗುವ ವಿಶ್ವ ಶ್ರೇಷ್ಠ ಸಂವಿಧಾನವನ್ನು ಅಂಬೇಡ್ಕರ್ ಭಾರತಕ್ಕೆ ಕೊಟ್ಟರು ಎಂದು ವಿವರಿಸಿದರು.
ನಾನು ಬುದ್ಧ, ಬಸವ, ಅಂಬೇಡ್ಕರ್ ವಿಚಾರದಲ್ಲಿ ನಂಬಿಕೆ ಇಟ್ಟುಕೊಂಡಿದ್ದೀನಿ. ಈ ಕಾರಣಕ್ಕೆ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯಬೇಕೆಂದು ಆಶಿಸುತ್ತೇನೆ. ವಿಜ್ಞಾನ ಓದಿಯೂ ಮೂಢನಂಬಿಕೆ ಆಚರಿಸುವವರಾಗಬೇಡಿ ಎಂದರು.