ಅರಕಲಗೂಡಿನಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಬಿಜೆಪಿ ಎಸ್ಸಿ, ಎಸ್ಟಿ ಸಮಾವೇಶವನ್ನು ಬಿಜೆಪಿ ಮುಖಂಡ ಕೆ. ಶಿವರಾಂ ಉದ್ಘಾಟಿಸಿದರು. ನೆ.ಲ. ನರೇಂದ್ರ ಬಾಬು, ಯೋಗಾರಮೇಶ್ ಇತರರಿದ್ದರು. 
ಜಿಲ್ಲೆ

ಸಂವಿಧಾನ ಬದಲಿಸುವ ಶಕ್ತಿ ಯಾರಿಗೂ ಇಲ್ಲ

ಅರಕಲಗೂಡು: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಸಾಮಾಜಿಕ ನ್ಯಾಯ ಎಲ್ಲವನ್ನು ಕ್ರೋಡೀಕರಿಸಿ ಬೃಹತ್ ಸಂವಿಧಾನ ನೀಡಿದ್ದು, ಇದನ್ನು ಬದಲಾವಣೆ ಮಾಡುವ ಶಕ್ತಿ ಯಾರಿಗೂ ಇಲ್ಲ ಎಂದು ಬಿಜೆಪಿ ಮುಖಂಡ ಕೆ. ಶಿವರಾಂ ಹೇಳಿದರು.

ಪಟ್ಟಣದ ಶ್ರೀ ಗುರು ವಿಜಯಸಿದ್ದ ಶಿವದೇವ ಮಂಗಳ ಮಂದಿರ ಚಿಲುಮೆ ಮಠ ಕಲ್ಯಾಣ ಮಂದಿರ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಬಿಜೆಪಿ ಎಸ್ಸಿ, ಎಸ್ಟಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಚುನಾವಣೆಯಲ್ಲಿ ಅಂಬೇಡ್ಕರ್ ಅವರನ್ನು ಸೋಲಿಸಿ ಅಪಮಾನ ಮಾಡಿದ ಕಾಂಗ್ರೆಸ್ ಪಕ್ಷಕ್ಕೆ ಸಂವಿಧಾನ ಬದಲಾವಣೆ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವ ನೈತಿಕತೆ ಇಲ್ಲ, ದಲಿತ ನಾಯಕರನ್ನು ಮುಖ್ಯಮಂತ್ರಿ ಮಾಡದ ರಾಜ್ಯ ಕಾಂಗ್ರೆಸ್‌ಗೆ ಸಮುದಾಯದವರ ಮತ ಕೇಳುವ ಹಕ್ಕು ಕೂಡ ಇಲ್ಲ ಎಂದು ತಿರುಗೇಟು ನೀಡಿದರು.

ಮೋದಿ ಅವರು ನಾನು ಚಾಯ್ ವಾಲಾ. ನಾನು ಪ್ರಧಾನಿಯಾಗುವಂತೆ ಮಾಡಿದ್ದೇ ಸಂವಿಧಾನ ಅಂದಿದ್ದಾರೆ. ಕಾಂಗ್ರೆಸ್ ನಿಂತಿರುವುದೇ ಮುಸಲ್ಮಾನರು, ದಲಿತರು ಹಿಂದುಳಿದ ವರ್ಗದವರಿಂದ. ಅವರೆಲ್ಲ ಮೋದಿ ಅವರ ಆಡಳಿತ ಮೆಚ್ಚಿ ಬಿಜೆಪಿಗೆ ಬರುತ್ತಿದ್ದಾರೆ. ಕಾಂಗ್ರೆಸ್ ಖಾಲಿ ಮನೆಯಾಗಿದೆ. ಹಾಗಾಗಿ ಸಂವಿಧಾನ ಬದಲಾವಣೆ ಮಾಡುತ್ತಾರೆಂದು ಸುಳ್ಳು ಕಥೆಕಟ್ಟಿ ನಿಮ್ಮನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಇವರ ಮಾತಿಗೆ ಮರುಳಾಗಬೇಡಿ ಎಂದು ಮನವಿ ಮಾಡಿದರು.

ಅಂಬೇಡ್ಕರ್ ಸತ್ತಾಗ ಅವರನ್ನು ಹೂಳಲು ಕಾಂಗ್ರೆಸ್ ಜಾಗ ಕೊಟ್ಟಿಲ್ಲ, ಅಂತಹ ಮಹಾನ್ ಪುರುಷನಿಗೆ ಜಾಗ ಕೊಡದವರು ನಮ್ಮನ್ನು ಮುಖ್ಯಮಂತ್ರಿ ಮಾಡುತ್ತಾರಾ? ಕಾಂಗ್ರೆಸ್‌ನಲ್ಲಿ ಖರ್ಗೆ, ಜಿ.ಪರಮೇಶ್ವರ, ಮುನಿಯಪ್ಪ ಅವರು ಮುಖ್ಯಮಂತ್ರಿ ಆಗಬೇಕಾಗಿತ್ತು ಎಂದು ಅಭಿಪ್ರಾಯಪಟ್ಟರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಜನರ ಕಲ್ಯಾಣಕ್ಕಾಗಿ ಹಲವಾರು ಯೋಜನೆ ಜಾರಿಗೆ ತಂದು ಎಸ್‌ಸಿ ಶೇ.17, ಎಸ್‌ಟಿಗೆ ಶೇ.7ರಷ್ಟು ಮೀಸಲಾತಿ ಹೆಚ್ಚಿಸಿದ್ದಾರೆ. ಗುತ್ತಿಗೆ ಆಧಾರದ ಮೇಲೆ ನಡೆಯುವ ನೇಮಕಾತಿಯಲ್ಲಿ ಅನ್ಯಾಯವಾಗುತ್ತಿತ್ತು. ಇದನ್ನು ಗಮನಿಸಿ ಅದರಲ್ಲೂ ಮೀಸಲಾತಿ ನೀಡಲು ಯೋಜನೆ ರೂಪಿಸಿದ್ದಾರೆ ಎಂದರು.

ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ನೆ.ಲ.ನರೇಂದ್ರಬಾಬು ಮಾತನಾಡಿ, ಸ್ವತಂತ್ರವಾಗಿ ಸರ್ಕಾರ ರಚನೆ ಆಗಬೇಕೇಂಬುದೇ ಪಕ್ಷದ ಗುರಿಯಾಗಿದೆ. ಮೋದಿ ಅವರು ಎಲ್ಲ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದು, ಈ ಬಾರಿ ಚುನಾವಣೆಯಲ್ಲಿ ಹಾಸನದಲ್ಲಿ ಕುಟುಂಬ ರಾಜಕಾರಣವನ್ನು ಕೊನೆಗಾಣಿಸಬೇಕು ಎಂದರು.

ಮುಖಂಡ ಎಚ್. ಯೋಗಾರಮೇಶ್ ಮಾತನಾಡಿ, ಹಿಂದುಳಿದ ವರ್ಗದ ವಿರೋಧಿ ನೀತಿ ಧೋರಣೆಯನ್ನು ಕಾಂಗ್ರೆಸ್, ಜೆಡಿಎಸ್ ಮಾಡಿದೆ. ಎರಡೂ ಪಕ್ಷಗಳಿಗೆ ಅಧಿಕಾರ ಸಿಕ್ಕಿದರೂ ರಾಜ್ಯದ, ಕ್ಷೇತ್ರದ ಅಭಿವೃದ್ಧಿಯಾಗಿಲ್ಲ. ದಲಿತ ವರ್ಗವನ್ನು ಕಡೆಗಣಿಸಿದ್ದಾರೆ. ಹಲವು ವರ್ಷಗಳಿಂದ ಅರಕಲಗೂಡಿನಲ್ಲಿನ ಅಂಬೇಡ್ಕರ್ ಭವನ ಪೂರ್ಣವಾಗದೆ ನನೆಗುದಿಗೆ ಬಿದ್ದಿದೆ. ಎ.ಮಂಜುಗೆ ಕ್ಷೇತ್ರದ ಬಗ್ಗೆ ಕಾಳಜಿ ಇಲ್ಲ. ಅಧಿಕಾರಕ್ಕಾಗಿ ಕಾಂಗ್ರೆಸ್, ಬಿಜೆಪಿಗೆ ಮೋಸ ಮಾಡಿದ್ದಾರೆ. ಎ.ಟಿ.ರಾಮಸ್ವಾಮಿ ಅವರು ಅಭಿವೃದ್ಧಿ ಮಾಡಿಲ್ಲ ಎಂದು ಟೀಕಿಸಿದರು.

ದಲಿತ ಮುಖಂಡ ಪರ್ವತಯ್ಯ ಮಾತನಾಡಿದರು. ಮುಖಂಡರಾದ ಪರಮಾನಂದ, ಸುರೇಶ್ ಬಾಬು, ಮುಖಂಡರಾದ ಸೋಮಶೇಖರ್, ಚಂದ್ರ, ಮಂಜುನಾಥ ನಾಯಕ, ಭಾಗ್ಯ, ಶಂಕರ್, ಪ್ರಸನ್ನ ಕುಮಾರ್, ವೆಂಕಟೇಶ್, ಜಯಶಂಕರ್ ಇತರರಿದ್ದರು.