ಜಿಲ್ಲೆ

ಸಂವಿಧಾನ ಬದಲಾವಣೆ ಮಾಡಲು ಮಗ್ಗಿ ಪುಸ್ತಕವೇ ?

ಬಳ್ಳಾರಿ : ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸಂವಿಧಾನ ಬದಲಾವಣೆ ಮಾಡಲು ಅದು ಏನು ಮಗ್ಗಿ ಪುಸ್ತಕವೇ ಎಂದು ಮಾಜಿ ಸಚಿವ ಎನ್. ಮಹೇಶ ಪ್ರಶ್ನಿಸಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ್ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಎಸ್ ಸಿ ಸಮುದಾಯವರ ಬ್ರೈನ್ ವಾಷ್ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಈ ಲೋಕಸಭಾ ಚುನಾವಣೆಯಲ್ಲಿ ಎರಡು ಸುಳ್ಳುಗಳನ್ನು ಇಟ್ಟುಕೊಂಡು ಪ್ರಚಾರ ನಡೆಸುತ್ತಿದೆ. ಒಂದು ಸಂವಿಧಾನ ಬದಲಾವಣೆ ಮಾಡುತ್ತಾರೆ, ಇನ್ನೊಂದು ಮೀಸಲಾತಿ ತೆಗೆಯುತ್ತೇವೆ ಎಂದು ಸುಳ್ಳು ಪ್ರಚಾರ ಮಾಡುತ್ತಿದೆ. ಸಂಸದ ಅನಂತಕುಮಾರ ಹೆಗಡೆ 2015 ರಲ್ಲಿ ಸಂವಿಧಾನ ಬದಲಾವಣೆ ಮಾಡಲಾಗುವುದು ಎಂದು ಹೇಳಿಕೆ ನೀಡಿದ್ದರು. ಆದ್ದರಿಂದ, ಅವರ ಮೇಲೆ ಪಕ್ಷ ನಿರ್ದಾಕ್ಷಿಣ್ಯ ಕ್ರಮ ವಹಿಸಿ, ಕ್ಷಮಾಪಣಾ ಪತ್ರ ಬರೆಸಿಕೊಳ್ಳಲಾಗಿದೆ. ಆ ಹೇಳಿಕೆ ನೀಡಿದ್ದಕ್ಕೆ ಈ ಬಾರಿ ಲೋಕಸಭಾ ಟಿಕೆಟ್ ನೀಡಲಿಲ್ಲ. ನನ್ನ ಪ್ರಾಣ ಇರುವವರೆಗೂ ಸಂವಿಧಾನ ಬದಲಾವಣೆ ಮಾಡಲು ಬಿಡಲ್ಲ ಹಾಗೂ ಇನ್ನು ಮೀಸಲಾತಿ ತೆಗೆದುಹಾಕುವ ಪ್ರಶ್ನೆಯೇ ಇಲ್ಲ. ಈ ದೇಶದಲ್ಲಿ ಜಾತಿ ವ್ಯವಸ್ಥೆ ಎಲ್ಲಿಯವರೆಗೆ ಇರುತ್ತದೆ ಅಲ್ಲಿಯವರೆಗೂ ಮೀಸಲಾತಿ ಇರುತ್ತೆ ಎಂದು ಮಹಾರಾಷ್ಟ್ರದಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ. ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡ ಹಿನ್ನಲೆ ಮೈಸೂರು ಭಾಗದಲ್ಲಿ ಹೆಚ್ಚಿನ ಬಲ ಬಂದಿದೆ. ಹಳೆ ಮೈಸೂರು ಭಾಗದಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಮೋದಿ ರವರು ಮೂರನೇ ಬಾರಿಗೆ ಪ್ರಧಾನಿಯಾಗುವುದು ಜನರ ನಿರ್ಧಾರ. ಕಳೆದ ಹತ್ತು ವರ್ಷದಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲದ ಹಾಗೆ ಆಡಳಿತ ನೀಡಿದ್ದಾರೆ. ಅದರ ಜತೆಯಲ್ಲಿ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿಯಾಗಿದೆ. ಈ ಹಿಂದೆ ಭಾರತ ಬಡತನ ಇರುವ ದೇಶಗಳ ಪಟ್ಟಿಯಲ್ಲಿ ದೇಶ ಇತ್ತು. ಆದರೆ, ಈಗ ದೇಶ ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿದೆ. ಬಿಜೆಪಿ ಹಾಗೂ ಪ್ರಧಾನಿ ಮೋದಿ ಅವರು ಒಂದು ರೋಡ್ ಮ್ಯಾಪ್ ಹಾಕಿದ್ದಾರೆ. 2047 ಕ್ಕೆ ದೇಶಕ್ಕೆ ಸ್ವಾತಂತ್ರ್ಯ ಬಂದು ನೂರು ವರ್ಷ ಕಳೆಯಲಿದೆ. ಆಗ ದೇಶ ವಿಶ್ವದ ನಂಬರ್ ಒನ್ ಸ್ಥಾನದಲ್ಲಿ ಇರಲಿದೆ. ಆಗ ನಾನಂತು ಬದುಕಿರಲ್ಲಾ, ಮೋದಿ ಅವರು ಬದುಕಿರಲಿ ಅಂಥಾ ನಾ ದೇವರಲ್ಲಿ ಕೇಳುವೆ ಎಂದರು. ಮಾಜಿ ಶಾಸಕ ಜಿ. ಸೋಮಶೇಖರರೆಡ್ಡಿ, ಜಿಲ್ಲಾಧ್ಯಕ್ಷ ಅನಿಲ ಕುಮಾರ ಮೋಕಾ, ಮುಖಂಡರಾದ ಹನುಮಂತಪ್ಪ, ರಾಜೀವ ತೊಗರಿ, ಮುರಾರಿ ಗೌಡ ಇದ್ದರು.