ಜಿಲ್ಲೆ

ಸಂವಿಧಾನ ಪ್ರತಿಯೊಬ್ಬರಿಗೂ ಮಾತೃ ಸ್ವರೂಪಿ

ಚಿತ್ರದುರ್ಗ: ದೇಶದ ಸಂವಿಧಾನ ಪ್ರತಿಯೊಬ್ಬ ಪ್ರಜೆಗೂ ಮಾತೃ ಸ್ವರೂಪಿಯಾಗಿದ್ದು, ಹೆತ್ತ ತಾಯಿಯಂತೆಯೇ ಪ್ರೀತಿಸಿ, ಗೌರವಿಸಬೇಕು. ಅದರ ಮಹತ್ವ, ಮೌಲ್ಯ ಅರಿತುಕೊಳ್ಳಬೇಕು ಎಂದು ಜಿಲ್ಲಾ ಮುಖ್ಯ ನ್ಯಾಯಾಧೀಶ ಕೆಂಪರಾಜು ಹೇಳಿದರು.

ಜಿಲ್ಲಾ ವಕೀಲರ ಭವನದಲ್ಲಿ ರಾಜ್ಯ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಸರಸ್ವತಿ ಕಾನೂನು ಕಾಲೇಜಿನಿಂದ ಸೋಮವಾರ ಸಂವಿಧಾನ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭಾರತದ ಸಂವಿಧಾನ ಶ್ರೇಷ್ಠ, ಪ್ರಬುದ್ಧವಾಗಿದ್ದು, ವಿಶ್ವದ ಎಲ್ಲಾ ರಾಷ್ಟ್ರಗಳು ಮೆಚ್ಚಿಕೊಂಡಿವೆ. ಪ್ರತಿಯೊಬ್ಬ ಪ್ರಜೆಗೂ ಮೂಲಭೂತ ಹಕ್ಕುಗಳನ್ನು ನೀಡಿದೆ. ಇದನ್ನು ಅರಿತವರ ಬದುಕು ಸುಗಮವಾಗಿ ಸಾಗಲಿದೆ. ಯಾವುದೇ ಜ್ವಲಂತ ಸಮಸ್ಯೆಗಳಿಗೂ ಉತ್ತರ ಕಂಡುಕೊಳ್ಳಬಹುದು. ಹೀಗಾಗಿ ಇದರ ಮಹತ್ವ ಮುಂದಿನ ಪೀಳಿಗೆಗೆ ತಿಳಿಸಬೇಕು ಎಂದು ಸಲಹೆ ನೀಡಿದರು.

ಸರಸ್ವತಿ ಕಾನೂನು ಕಾಲೇಜಿನ ಪ್ರಾಚಾರ್ಯೆ ಪ್ರೊ.ಡಾ.ಎಂ.ಎಸ್. ಸುಧಾದೇವಿ ಮಾತನಾಡಿ, ಸಂವಿಧಾನದಿಂದ ಸಮಾಜದ ಎಲ್ಲಾ ವರ್ಗದವರಿಗೂ ನ್ಯಾಯ ಸಿಕ್ಕಿದೆ. ಪ್ರತಿಯೊಬ್ಬ ಪ್ರಜೆಗೂ ಅದರ ಆಶಯಗಳ ಮಹತ್ವ ತಲುಪಿಸಬೇಕು ಎಂದರು.

ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್, ನ್ಯಾಯಾಧೀಶರಾದ ಉಜ್ವಲ, ವೀರಣ್ಣ, ಚೈತ್ರಾ, ಅನಿತಾ ಕುಮಾರಿ, ನೇಮಿಚಂದ್, ಸಹನಾ, ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ, ಉಪಾಧ್ಯಕ್ಷ ಬಿ.ಎಂ.ಅನಿಲ್‌ಕುಮಾರ್, ವಕೀಲರಾದ ಎಂ.ಮೂರ್ತಿ, ಹನುಮಂತಪ್ಪ, ಗಿರೀಶ್ ಇತರರಿದ್ದರು.