ಭಾಲ್ಕಿ ಪುರಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಂವಿಧಾನ ಸಮರ್ಪಣಾ ದಿನಾಚರಣೆಯನ್ನು ಹಿರಿಯ ಶ್ರೇಣಿ ನ್ಯಾಯಾಧೀಶ ರಾಘವೇಂದ್ರ ವೈಜಿನಾಥ ಉದ್ಘಾಟಿಸಿದರು. ತಹಸೀಲ್ದಾರ್ ಮಲ್ಲಿಕಾರ್ಜುನ ವಡ್ಡನಕೇರಿ, ಮಮ್ತಾಜ್ ಬೇಗಂ, ಸಿದ್ದು ಪಾಟೀಲ್, ಶಿವಶಂಕರ ಲದ್ದೆ, ಪ್ರಭಾಕರ ಹಾಳೆ, ಚನ್ನಪ್ಪ ಹಳ್ಳದ ಇತರರಿದ್ದರು. 
ಜಿಲ್ಲೆ

ಸಂವಿಧಾನ ನಮ್ಮೆಲ್ಲರಿಗೂ ದಾರಿದೀಪ

ರಾಜು ಯಮಕನಮರಡಿ

ಭಾಲ್ಕಿ: ಡಾ.ಬಿ.ಆರ್.ಅಂಬೇಡ್ಕರ್ ರಚಿಸಿರುವ ಸಂವಿಧಾನ ನಮ್ಮೆಲ್ಲರಿಗೂ ದಾರಿದೀಪವಾಗಿದೆ. ಹಕ್ಕು ಮತ್ತು ಕರ್ತವ್ಯಗಳು ತಿಳಿದುಕೊಳ್ಳಲು ಸಂವಿಧಾನ ಅತ್ಯಂತ ಸಹಕಾರಿಯಾಗಿದೆ ಎಂದು ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಶ್ರೇಣಿಯ ನ್ಯಾಯಾಧೀಶ ರಾಘವೇಂದ್ರ ವೈಜಿನಾಥ ಹೇಳಿದರು.

ಪಟ್ಟಣದ ಪುರಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಭಾಲ್ಕಿ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಭಾರತ ಸಂವಿಧಾನ ಸಮರ್ಪಣಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಅಭಿವೃದ್ಧಿ ಮತ್ತು ಜನರ ಒಳಿತಿಗಾಗಿ ಅಂಬೇಡ್ಕರ್ ಅವರು ವಿಶ್ವದಾದ್ಯಂತ ಸುತ್ತಾಟ ನಡೆಸಿ ಸಾಕಷ್ಟು ಅಧ್ಯಯನ ನಡೆಸಿ ತಮ್ಮ ಜ್ಞಾನ, ಅನುಭವದ ಮೂಲಕ ದೇಶಕ್ಕೆ ಕೊಡುಗೆಯಾಗಿ ಉತ್ತಮ ಸಂವಿಧಾನ ನೀಡಿದ್ದಾರೆ. ಕಾನೂನಿನ ಚೌಕಟ್ಟಿನಲ್ಲಿ ನಡೆದುಕೊಳ್ಳಲು ಸಂವಿಧಾನ ಪೂರಕವಾಗಿದೆ. ಪ್ರತಿಯೊಬ್ಬರೂ ಸಂವಿಧಾನ ಅಧ್ಯಯನ ಮಾಡಿ ಅದರಂತೆ ನಡೆದುಕೊಂಡರೇ ಜೀವನದಲ್ಲಿ ಯಾವುದೇ ರೀತಿ ಸಮಸ್ಯೆಗಳು ಎದುರಾಗುವುದಿಲ್ಲ ಎಂದು ಹೇಳಿದರು.

ನ್ಯಾಯಾವಾದಿ ಅನಿಮೇಶ ಆನಂದವಾಡೆ, ಉಪನ್ಯಾಸಕಿ ಆರತಿ ಪಾತ್ರೆ ಉಪನ್ಯಾಸ ನೀಡಿದರು.

ತಹಸೀಲ್ದಾರ ಮಲ್ಲಿಕಾರ್ಜುನ ವಡ್ಡನಕೇರಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಕಾಂತ ಬಿರಾದಾರ್, ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಮಮ್ತಾಜ್ ಬೇಗಂ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಸಿದ್ದು ಪಾಟೀಲ್, ಉಪಾಧ್ಯಕ್ಷ ಶಿವಶಂಕರ ಲದ್ದೆ, ಕಾರ್ಯದರ್ಶಿ ಪ್ರಭಾಕರ ಹಾಳೆ ಇದ್ದರು. ಬಿಇಒ ಚನ್ನಪ್ಪ ಹಳ್ಳದ ಸ್ವಾಗತಿಸಿದರು. ಕುಪೇಂದ್ರ ಜಗಶೆಟ್ಟೆ ನಿರೂಪಣೆ ಮಾಡಿ ವಂದಿಸಿದರು.