ಆಲಮೇಲದಲ್ಲಿ ತಾಲೂಕಾಡಳಿತದ ವತಿಯಿಂದ ಏರ್ಪಡಿಸಿದ್ದ ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮಕ್ಕೆ ತಹಸೀಲ್ದಾರ್ ಸುರೇಶ ಚಾವಲರ್ ಚಾಲನೆ ನೀಡಿದರು. ಪ್ರೊ. ಈಶ್ವರ ಕರಿಗೂಳೇಶ್ವರ, ಕುಮಾರ ಹಾಡಕಾರ, ಸುರೇಶ ನಾಯಕ ಇತರರಿದ್ದರು. 
ಜಿಲ್ಲೆ

ಸಂವಿಧಾನ ಓದುವುದು ಎಲ್ಲರ ಕರ್ತವ್ಯ

ಆಲಮೇಲ: ಭಾರತವನ್ನು ಒಂದು ಸಾರ್ವಭೌಮ ಸಮಾಜವಾದಿ, ಸರ್ವಧರ್ಮ ಸಮಭಾವದ ಪ್ರಜಾಸತ್ತಾತ್ಮಕ ದೇಶವಾಗಲು ಡಾ. ಅಂಬೇಡ್ಕರ್ ಸಿದ್ಧಪಡಿಸಿರುವ ಸಂವಿಧಾನದ ಪೂರ್ವ ಪೀಠಿಕೆಯನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ ಎಂದು ಜೇವರ್ಗಿ ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಪ್ರೊ. ಈಶ್ವರ ಕರಿಗೂಳೇಶ್ವರ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ತಾಲೂಕು ಆಡಳಿತದ ವತಿಯಿಂದ ಸರ್ಕಾರಿ ಗಂಡು ಮಕ್ಕಳ ಶಾಲೆಯ ಆವರಣದಲ್ಲಿ ಏರ್ಪಡಿಸಿದ್ದ ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮ ಉಪನ್ಯಾಸ ನೀಡಿದರು.

7ಸಾವಿರ ಕ್ಕೂ ಹೆಚ್ಚು ಜಾತಿಗಳನ್ನು ಹೊಂದಿರುವ ನಮ್ಮ ದೇಶ. ಈ ಹಿಂದೆ ಸುಮಾರು 200 ವರ್ಷಗಳ ಕಾಲ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿತ್ತು. ಸ್ವಾತಂತ್ರೃ ನಂತರ ದೇಶದಲ್ಲಿ ವಿಭಿನ್ನ ಆಚರಣೆ, ಸಂಪ್ರದಾಯಗಳನ್ನು ಜನರು ಹೊಂದಿದ್ದರು. ಅವರನ್ನೆಲ್ಲಾ ಒಂದುಗೂಡಿಸಲು ಸಂವಿಧಾನವು ಪ್ರಮುಖ ಪಾತ್ರ ವಹಿಸಿದೆ ಎಂದರು.

ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತಹಸೀಲ್ದಾರ್ ಸುರೇಶ ಚಾವಲರ್ ಮಾತನಾಡಿ, ಡಾ. ಅಂಬೇಡ್ಕರ್ ಬರೆದ ಶ್ರೇಷ್ಠವಾದ ನಮ್ಮ ಸಂವಿಧಾನವನ್ನು ಗೌರವಿಸೋಣ ಎಂದರು.

ಪಿಎಸ್‌ಐ ಕುಮಾರ ಹಾಡಕಾರ ಸಂವಿಧಾನ ಪೀಠಿಕೆ ಬೋಧಿಸಿದರು. ಅಪರಾಧ ವಿಭಾಗದ ಪಿಎಸ್‌ಐ ಎನ್.ಜಿ. ಅಪನಾಯ್ಕರ, ಪಪಂ ಮುಖ್ಯಾಧಿಕಾರಿ ಸುರೇಶ ನಾಯಕ, ಶಿರಸ್ತೇದಾರ ಎಂ.ಎ. ಅತ್ತಾರ, ಉಪತಹಸೀಲ್ದಾರ್ ಪಿ.ಎಸ್. ಮೂಕಿಹಾಳ, ಜಿ.ಟಿ. ನಾಯಕ, ಅರ್ಬನ್ ಬ್ಯಾಂಕ್ ಅಧ್ಯಕ್ಷ ಶಿವಕುಮಾರ ಗುಂದಗಿ, ಇಂಜಿನಿಯರ ಶ್ರೀಶೈಲ ಮಠಪತಿ, ಅಪ್ಪು ಶೆಟ್ಟಿ ಹಾಗೂ ವಿವಿಧ ದಲಿತ ಸಂಘಟನೆಗಳ ಪದಾಧಿಕಾರಿಗಳು, ಪಪಂ ಸದಸ್ಯರು, ಮುಖಂಡರು, ವಿವಿಧ ಶಾಲಾ ಶಿಕ್ಷಕರು ಹಾಗೂ ಮಕ್ಕಳು ಇದ್ದರು. ಖ್ಯಾತ ಚಿತ್ರಕಾರ ಚಂದ್ರಕಾಂತ ಕೆಳಗಿನಮನಿಯರು ಕಟ್ಟಿಗೆಯಲ್ಲಿ ಸಿದ್ಧಪಡಿಸಿದ ಅಂಬೇಡ್ಕರರ ಭಾವಚಿತ್ರವನ್ನು ತಾಲೂಕ ಆಡಳಿತಕ್ಕೆ ಸಮರ್ಪಸಿದರು.