ಜಿಲ್ಲೆ

ಸಂವಹನ ಪ್ರಕ್ರಿಯೆ ಇಲ್ಲದೆ ಭಾವನೆಗಳು ಸಾಯುತ್ತದೆ

ಚಾಮರಾಜನಗರ: ಪ್ರಸ್ತುತ ಸಂದರ್ಭದಲ್ಲಿ ಮೊಬೈಲ್ ಹಾವಳಿಯಿಂದ ಸಂವಹನ ಮತ್ತು ಬರವಣಿಗೆ ಪ್ರಕ್ರಿಯೆ ಕುಂಠಿತವಾಗುತ್ತಿದ್ದು, ಪರಿಣಾಮವಾಗಿ ಮನುಷ್ಯನ ಭಾವನೆಗಳು ಸಾಯುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಜೆಎಸ್‌ಎಸ್ ಮಹಿಳಾ ಕಾಲೇಜು ಆವರಣದಲ್ಲಿ ಜೆಎಸ್‌ಎಸ್ ಮಹಿಳಾ ಕಾಲೇಜು ಕನ್ನಡ ವಿಭಾಗ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಕ್ರಿಯಾಶೀಲ ಬರವಣಿಗೆ ಮತ್ತು ಮಾಧ್ಯಮ ಸಮನ್ವಯ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ನಾವಾಡುವ ಭಾಷೆ, ಧ್ವನಿ ಮತ್ತು ಮಾತುಗಳಿಂದ ಜಗತ್ತು ಅನಾವರಣವಾಗುತ್ತದೆ. ಮನುಷ್ಯರು ಪರಸ್ಪರ ಅರ್ಥೈಸಿಕೊಳ್ಳಲು, ಮಾರ್ಗದರ್ಶನ ಮಾಡಲು, ಜೀವನ ರೂಪಿಸಿಕೊಳ್ಳಲು ಸಂವಹನ ಬಹು ಮುಖ್ಯವಾಗುತ್ತದೆ. ನಾವು ಸ್ಪಷ್ಟವಾಗಿ ಗುರಿ ತಲುಪಲು, ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸಲು ಬರವಣಿಗೆ ಮತ್ತು ಸಂವಹನ ಜೀವಾಳವಾಗಿದೆ ಎಂದು ತಿಳಿಸಿದರು.

ಇತ್ತೀಚೆಗೆ ಮೊಬೈಲ್ ಹಾವಳಿಯಿಂದ ಸಂವಹನ ಪ್ರಕ್ರಿಯೆ ಕಡಿಮೆಯಾಗುತ್ತಿದೆ. ಅದರಲ್ಲೂ ನಗರ ಪ್ರದೇಶದಲ್ಲಿ ಸಂವಹನ ಪ್ರಕ್ರಿಯೆ ಇಲ್ಲದೇ ಭಾವನೆಗಳು ಸಾಯುತ್ತಿದೆ. ಉತ್ತಮ ಸಂವಹನ ಪ್ರಕ್ರಿಯೆ ಮತ್ತು ಬರವಣಿಗೆಯಿಂದ ಉನ್ನತ ಅವಕಾಶಗಳನ್ನು ಪಡೆದುಕೊಂಡವರು ಇದ್ದಾರೆ. ವಿದ್ಯಾರ್ಥಿಗಳಿಗೆ ಅಂಕೆಗಳಿಗಿಂತಲೂ ಸಂವಹನ ಕಲೆ ಬಹುಮುಖ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜೆಎಸ್‌ಎಸ್ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಮಹದೇವಸ್ವಾಮಿ, ಕನ್ನಡ ವಿಭಾಗದ ಮುಖ್ಯಸ್ಥ ಬಿ.ಬಿ.ವರಪ್ರಸಾದ್, ಸಹಾಯಕ ಪ್ರಾಧ್ಯಾಪಕಿ ಜಮುನ, ಸಿ.ರೂಪಶ್ರೀ, ಬಿ.ಎಸ್.ಮಹದೇವಪ್ರಸಾದ್ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.