ಜಿಲ್ಲೆ

ಸಂಭ್ರಮಾಚರಣೆಗೆ ಪಾಲ್ಗೊಳ್ಳಲು ಸಿಗದ ಅವಕಾಶ

ಚಿತ್ರದುರ್ಗ: ದೇಶಕ್ಕಾಗಿ ಸಾವಿರಾರು ಮಹನೀಯರು ಜೀವದ ಹಂಗು ತೊರೆದು ಹೋರಾಡಿದರು. ಹಲವರು ಇದರಲ್ಲಿ ವೀರ ಮರಣವನ್ನಪ್ಪಿದರು. ಸುದೀರ್ಘ ಚಳವಳಿಯ ಪರಿಣಾಮ ದೇಶಕ್ಕೆ ಸ್ವಾತಂತ್ರ್ಯವೂ ಲಭಿಸಿತು. ಆದರೆ, ಸಂಭ್ರಮಾಚರಣೆಗೆ ಪಾಲ್ಗೊಳ್ಳಲು ಸೆರೆಮನೆಯಲ್ಲಿದ್ದ ಕಾರಣ ನನಗೆ ಅವಕಾಶ ಸಿಗಲಿಲ್ಲ.

ಆಗಷ್ಟೇ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ ವಿಷಯ ತಿಳಿಯಿತು. ಅನೇಕರು ತಮ್ಮ-ತಮ್ಮ ಊರುಗಳಲ್ಲಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಅದನ್ನು ಕಣ್ತುಂಬಿಕೊಳ್ಳುವ ಭಾಗ್ಯ ಸಿಗದಿದ್ದರೂ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ತೃಪ್ತಿ ಇದೆ ಎಂದು ಜಿಲ್ಲೆಯ ಕೂನಬೇವು ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ ಎನ್.ಭೀಮಪ್ಪ ‘ವಿಜಯವಾಣಿ’ ಜೊತೆ ಅನುಭವ ಹಂಚಿಕೊಂಡಿದ್ದಾರೆ.

ಚಿತ್ರದುರ್ಗದಲ್ಲಿ ಧ್ವಜ ಸತ್ಯಾಗ್ರಹ ನಡೆಯುವಾಗ ಗೋಲಿಬಾರ್‌ಗೆ ಪೊಲೀಸರು ಮುಂದಾದರು. ಆಗ ಹೋರಾಟಗಾರರೊಬ್ಬರು ಹುತಾತ್ಮರಾದರು. ಈ ವೇಳೆ ನಮ್ಮನ್ನು ಬಂಧಿಸಿ ಪಾವಗಡಕ್ಕೆ ಗಡಿಪಾರು ಮಾಡಲಾಯಿತು. ಪರಶುರಾಂಪುರ ಠಾಣೆಗೂ ಮುತ್ತಿಗೆ ಹಾಕಿ ತೀವ್ರ ಪ್ರತಿಭಟನೆಗೆ ಮುಂದಾದೆವು. ಆ ಮಾರ್ಗವಾಗಿ ಊರಿಗೆ ಹಿಂದಿರುಗುವಾಗ ಜನರಲ್ಲೂ ಸ್ವಾತಂತ್ರ್ಯದ ಕಿಡಿ ಹೊತ್ತಿಸಿದೆವು.

ಚಳ್ಳಕೆರೆ ತಾಲೂಕು ಕಚೇರಿ ಮೇಲೆ ತ್ರಿವರ್ಣ ಧ್ವಜ ಹಾರಿಸಿ ಮತ್ತೆ ಪೊಲೀಸರಿಗೆ ಸೆರೆಯಾಗಬೇಕಾಯಿತು ಎನ್ನುವಾಗ 96 ವರ್ಷದ ಅವರ ಕಣ್ಣುಗಳಲ್ಲಿ ಸ್ವಾತಂತ್ರ್ಯ ತುಡಿತ, ಕಿಚ್ಚು ಪ್ರತಿಬಿಂಬಿಸಿತು.

ಹೋರಾಟಕ್ಕಿಳಿಯಲು ಕಾರಣರು ಯಾರು?
ಈಚಲು ಮರದ ವಿರುದ್ಧ ತುರುವನೂರು ಸುತ್ತಮುತ್ತ ವ್ಯಾಪಕವಾದ ಚಳವಳಿ ಭುಗಿಲೆದ್ದಿತು. ಹೆಂಡದ ವಿರುದ್ಧದ ಈ ಚಳವಳಿಯ ನೇತೃತ್ವ ವಹಿಸಿದವರಲ್ಲಿ ರಾಷ್ಟ್ರನಾಯಕ ಎಸ್.ನಿಜಲಿಂಗಪ್ಪ ಪ್ರಮುಖರು. ಅವರ ಹೋರಾಟದ ನುಡಿ, ಬದ್ಧತೆಗೆ ಆಕರ್ಷಿತನಾದೆ. ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದಾಗ 17 ವರ್ಷದ ಬಾಲಕ. ಇಂಟರ್ ಮೀಡಿಯೆಟ್ ಶಿಕ್ಷಣ ಪಡೆಯುತ್ತಿದ್ದಾಗ ನಿಜಲಿಂಗಪ್ಪ ಅವರು ತುರುವನೂರಿಗೆ ಭೇಟಿ ನೀಡಿದ್ದರು. ಆ ವೇಳೆ ದೇಶದ ವಿದ್ಯಮಾನಗಳ ಅರಿವಿಲ್ಲದ ನನಗೆ ಅವರ ಭಾಷಣ ಬ್ರಿಟಿಷರ ವಿರುದ್ಧ ಹೋರಾಡಲು ಪ್ರೇರೇಪಿಸಿತು.

ಹೋರಾಟದ ಹಾದಿ ಹೇಗಿತ್ತು?
ಕ್ವಿಟ್ ಇಂಡಿಯಾ ಚಳವಳಿಗೆ ಧುಮುಕುವಂತೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಕರೆ ನೀಡುತ್ತಿದ್ದಂತೆ ದೇಶದೆಲ್ಲೆಡೆ ಬ್ರಿಟಿಷರ ವಿರುದ್ಧ ಆಕ್ರೋಶದ ಕಟ್ಟೆಯೊಡೆಯಿತು. ಅಲ್ಲಲ್ಲಿ ಹೋರಾಟದ ಧಂಗೆ ಭುಗಿಲೆದ್ದವು. ಅರಣ್ಯ ಸತ್ಯಾಗ್ರಹದ ಕರೆಯ ವೇಳೆ ದೊಡ್ಡಘಟ್ಟದ ಬಳಿ ಈಚಲು ಮರಗಳನ್ನು ಕಡಿದು ಹಾಕಿದೆವು. ಪೊಲೀಸರು ಧಾವಿಸಿ ಮುಂಚೂಣಿಯಲ್ಲಿದ್ದ ಹೋರಾಟಗಾರರನ್ನು ಬಂಧಿಸಿದರು. ಅದರಲ್ಲಿ ಅಪ್ರಾಪ್ತರಾಗಿದ್ದ ನನ್ನನ್ನೂ ಸೇರಿ ಹಲವರನ್ನು ವಶಕ್ಕೆ ಪಡೆದರು. ಲಾಕಪ್‌ನಿಂದ ಬಿಡುಗಡೆಗಾಗಿ ಉಪವಾಸ ಸತ್ಯಾಗ್ರಹ ಮಾಡಿದೆ. ಲಾಠಿ ಏಟಿನ ಪೆಟ್ಟು ತಿಂದರೂ ಚಳವಳಿಯಲ್ಲಿದ್ದ ಬದ್ಧತೆ ನಿಲ್ಲಲ್ಲಿಲ್ಲ.

ಸಂಭ್ರಮಿಸಲು ಅವಕಾಶ ಸಿಗಲಿಲ್ಲವೇ?
ಚಿತ್ರದುರ್ಗದ ಕಾರಾಗೃಹದಲ್ಲಿ ಸ್ಥಳಾವಕಾಶ ಇರದ ಕಾರಣಕ್ಕೆ 8 ದಿನ ಠಾಣೆಯ ಲಾಕಪ್‌ನಲ್ಲೇ ಇಟ್ಟಿದ್ದರು. ಒಂದು ವಾರದ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಅಪ್ರಾಪ್ತನಾಗಿದ್ದ ನನ್ನನ್ನು ಕಂಡು ನ್ಯಾಯಾಧೀಶರು ಬಿಡುಗಡೆಗೊಳಿಸಿ, ಮನೆಗೆ ತೆರಳುವಂತೆ ಸೂಚಿಸಿದರು. ಆದರೆ, ಉಳಿದವರನ್ನು ಜೈಲಿಗೆ ಕಳುಹಿಸುವುದಾಗಿ ತೀರ್ಪು ನೀಡಿದರು. ಹೀಗಾಗಿ ಮನೆಗೆ ಮರಳಲು ಸಾಧ್ಯವಿಲ್ಲವೆಂದು ಹೇಳಿದ್ದಕ್ಕೆ ಜೈಲಿಗೆ ಹಾಕಿದರು. ಸೆರೆಮನೆ ಸೇರಿದ 3 ತಿಂಗಳ ಬಳಿಕ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿತು. ಆದರೆ, ಅಂದು ಬಿಡುಗಡೆಯಾಗದ ಕಾರಣ ಸಂಭ್ರಮಿಸಲು ಸಾಧ್ಯವಾಗಲಿಲ್ಲ ಎಂದು ಭಾವೋದ್ವೇಗಕ್ಕೆ ಒಳಗಾದರು.