ಅರಕಲಗೂಡು: ಪಟ್ಟಣದಲ್ಲಿ ಮುಸಲ್ಮಾನರು ಶನಿವಾರ ಪವಿತ್ರ ಈದ್‌ಉಲ್ ಫಿತ್ರ್ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು.
ಪೇಟೆ ಮತ್ತು ಕೋಟೆ ಭಾಗದ ಮುಸಲ್ಮಾನರ ಬೀದಿಗಳಲ್ಲಿ ಹಬ್ಬದ ಸಡಗರ ಕಳೆಗಟ್ಟಿತ್ತು. ಶುಕ್ರವಾರ ಸಂಜೆಯೇ ಆಗಸದಲ್ಲಿ ಚಂದ್ರ ಗೋಚರಿಸಿದ ತರುವಾಯ ಕಳೆದೊಂದು ತಿಂಗಳಿನಿಂದ ಕೈಗೊಂಡಿದ್ದ ಉಪವಾಸ ವ್ರತವನ್ನು ಅಂತ್ಯಗೊಳಿಸಿದರು.
ಶನಿವಾರ ಬೆಳಗ್ಗೆ ಹೊಸ ಬಟ್ಟೆಗಳನ್ನು ತೊಟ್ಟು ಮಸೀದಿಗಳ ಬಳಿ ಜಮಾಯಿಸಿ ಶುಭಾಶಯ ವಿನಿಮಯ ಮಾಡಿಕೊಂಡರು, ಕೋಟೆ, ಪೇಟೆ ಬೀದಿಯಿಂದ ಮೆರವಣಿಗೆಯಲ್ಲಿ ಈದ್ಗಾ ಮೈದಾನದಲ್ಲಿ ಒಂದೆಡೆ ಕಲೆತು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಭಕ್ತಿ ಭಾವೈಕ್ಯತೆ ಮೆರೆದರು.
ಮುಸ್ಲಿಂ ಧರ್ಮಗುರು ಹಾಫಿಜ್ ನಯಾಜ್ ಇಸ್ಲಾಂ ಧಾರ್ಮಿಕ ಉಪದೇಶ ನೀಡಿದರು. ಜಾಮೀಯಾ ಮಸೀದಿ ಅಧ್ಯಕ್ಷ ಸಲೀಂ ಅಹಮದ್, ಉಪಾಧ್ಯಕ್ಷ ಹಾಜಿ ಅಸ್ಲಾಂ ಪಾಷಾ ಇತರರಿದ್ದರು.
ವಿವಿಧೆಡೆ ಪ್ರಾರ್ಥನೆ:
ತಾಲೂಕಿನ ಕೊಣನೂರು, ಎ.ಬಿ.ಹಳ್ಳಿ, ಹೊಳಲಗೋಡು, ಹಂಡ್ರಂಗಿ, ಸಿದ್ದಾಪುರ, ಕಟ್ಟೇಪುರ, ರುದ್ರಪಟ್ಟಣ, ಬಸವಾಪಟ್ಟಣ, ರಾಮನಾಥಪುರದಲ್ಲಿ ಮುಸಲ್ಮಾನರು ವಿಶೇಷ ಪ್ರಾರ್ಥನೆ ಸಲ್ಲಿಸಿ ಈದ್ ಉಲ್ ಫಿತ್ರ್ ಹಬ್ಬ ಆಚರಿಸಿದರು.