ತಾಳಿಕೋಟೆ ಪಟ್ಟಣದಲ್ಲಿ ಬಂಡಿಬಸವೇಶ್ವರ ಜಾತ್ರೆ ನಿಮಿತ್ತ ನಡೆದ ರಥೋತ್ಸವದಲ್ಲಿ ಪಾಲ್ಗೊಂಡಿರುವ ಭಕ್ತರು. 
ಜಿಲ್ಲೆ

ಸಂಭ್ರಮದಿಂದ ನಡೆದ ಬಂಡಿಬಸವೇಶ್ವರ ರಥೋತ್ಸವ

ತಾಳಿಕೋಟೆ : ಪಟ್ಟಣದ ಪುರಾತನ ಮಂದಿರ ಶ್ರೀ ಬಂಡಿಬಸವೇಶ್ವರ ದೇವಸ್ಥಾನದ 236ನೇ ಜಾತ್ರೆ ಮಂಗಳವಾರ ಸಂಭ್ರಮ, ಸಡಗರದಿಂದ ಜರುಗಿತು.

ನಸುಕಿನ ಜಾವ ಬಾಪುಗೌಡರ ಮನೆಯಿಂದ ಪುರವಂತರ ಸೇವೆ, ಪಲ್ಲಕ್ಕಿ ಉತ್ಸವ, ಕಂಬಿ ಮೆರವಣಿಗೆ ಪ್ರಾರಂಭಗೊಂಡು ಕತ್ರಿ ಬಜಾರ್​, ಶ್ರೀ ವಿಠ್ಠಲ ಮಂದಿರ ರಸ್ತೆ, ಶಿವಾಜಿ ಮಹಾರಾಜರ ವೃತ್ತ್ತದ ಮೂಲಕ ದೇವಸ್ಥಾನ ತಲುಪಿತು.

ನಂತರ ದೇವಸ್ಥಾನದ ಆವರಣದಲ್ಲಿ ಅಗ್ಗಿ ತುಳಿಯುವ ಕಾರ್ಯಕ್ರಮ ಜರುಗಿತು. ಬೆಳಗ್ಗೆ 9ಕ್ಕೆ ಕಳಸ ಕನ್ನಡಿ ಮತ್ತು ಪಲ್ಲಕ್ಕಿ ಉತ್ಸವದೊಂದಿಗೆ ರಾಜವಾಡೆಯ ಭೀಮನಬಾವಿಯಲ್ಲಿ ಗಂಗಸ್ಥಳ ಕಾರ್ಯಕ್ರಮದೊಂದಿಗೆ ನಾಗರಕಲ್ಲ ಬಡಾವಣೆ, ಶಿವಾಜಿ ಮಹಾರಾಜರ ವೃತ್ತ, ಕತ್ರಿ ಬಜಾರ್​ ಮಾರ್ಗವಾಗಿ ಬಾಪುಗೌಡರ ಮನೆಗೆ ಮೆರವಣಿಗೆ ತಲುಪಿತು.

ಸಂಜೆ 4ಕ್ಕೆ ಕಳಸ ಮತ್ತು ಪಲ್ಲಕ್ಕಿ ಉತ್ಸವದ ಮೆರವಣಿಗೆ ನಡೆಯಿತು. ಸಂಜೆ 6ಕ್ಕೆ ಬಂಡಿಬಸವೇಶ್ವರ ರಥೋತ್ಸವವು ಅಪಾರ ಭಕ್ತರ ಸಮ್ಮುಖದಲ್ಲಿ ಜರುಗಿತು.

ದೇವಸ್ಥಾನದ ಉಸ್ತುವಾರಿ ಬಾಪುಗೌಡ ಪಾಟೀಲ, ಶರಣಗೌಡ ಪಾಟೀಲ, ಅಶೋಕಗೌಡ ಪಾಟೀಲ, ರಾಜುಗೌಡ ಪಾಟೀಲ, ಸಿದ್ದನಗೌಡ ಪಾಟೀಲ ಹಾಗೂ ಭಕ್ತರು ಪಾಲ್ಗೊಂಡಿದ್ದರು.