ಜಿಲ್ಲೆ

ಸಂಭ್ರಮದಿಂದ ಜರುಗಿದ ರಥೋತ್ಸವ

ಚಾಮರಾಜನಗರ: ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರ ಹರ್ಷೋದ್ಘಾರ, ಯುವಕರ ಉತ್ಸಾಹ, ನವಜೋಡಿಗಳ ಕಲರವದ ನಡುವೆ ಶ್ರೀಕೆಂಪನಂಜಾಂಬ ಸಮೇತ ಶ್ರೀಚಾಮರಾಜೇಶ್ವರಸ್ವಾಮಿ ರಥೋತ್ಸವ ಗುರುವಾರ ಸಂಭ್ರಮದಿಂದ ಜರುಗಿತು.

ನಗರದ ಇತಿಹಾಸ ಪ್ರಸಿದ್ಧ ಶ್ರೀಚಾಮರಾಜೇಶ್ವರ ರಥೋತ್ಸವದ ಪ್ರಯುಕ್ತ ಎಂ.ಎಸ್.ಐ.ಎಲ್ ನಿಗಮದ ಅಧ್ಯಕ್ಷ ಮತ್ತು ಶಾಸಕ ಸಿ.ಪುಟ್ಟರಂಗಶೆಟ್ಟಿ ಬೆಳಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ದೇಗುಲದ ಅರ್ಚಕರು ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸುವ ಮೂಲಕ ಉತ್ಸವ ಮೂರ್ತಿಯನ್ನು ದೇವಾಲಯದ ಸುತ್ತಲೂ ಪ್ರದಕ್ಷಿಣೆ ಮಾಡಿದರು. ತದನಂತರ ಕೊಂಬು-ಕಹಳೆ, ನಾದಸ್ವರದೊಂದಿಗೆ ವಿವಿಧ ಕೋಮುವಾರು ಮುಖಂಡರು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಸಾಗಿಬಂದರು.

ಈ ವೇಳೆ ವಿವಿಧ ಹೂಗಳು, ಬಣ್ಣಬಣ್ಣದ ಧ್ವಜಗಳಿಂದ ಕಂಗೊಳಿಸುತ್ತಿದ್ದ ಶ್ರೀಚಾಮರಾಜೇಶ್ವರಸ್ವಾಮಿ ರಥದಲ್ಲಿ ಶ್ರೀ ಕೆಂಪನಂಜಾಂಬಾ ಅಮ್ಮನವರ ಸಮೇತ ಶ್ರೀಚಾಮರಾಜೇಶ್ವರಸ್ವಾಮಿ ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಸಾವಿರಾರು ಭಕ್ತರು, ನವಜೋಡಿಗಳು ಹಾಗೂ ಯುವಕರ ಶಿಳ್ಳೆ, ಚಪ್ಪಾಳೆಯೊಂದಿಗೆ ಮಧ್ಯಾಹ್ನ 12.15 ಗಂಟೆಗೆ ರಥೋತ್ಸವಕ್ಕೆ ಶಾಸಕ ಸಿ.ಪುಟ್ಟರಂಗಶೇಟ್ಟಿ ಅವರು ಚಾಲನೆ ನೀಡುತ್ತಿದ್ದಂತೆಯೇ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತು.

ಅಲ್ಲಿಂದ ದಕ್ಷಿಣಾಭಿಮುಖವಾಗಿ ಸಾಗಿ ರಥದ ಬೀದಿ, ಎಸ್‌ಬಿಎಂ ರಸ್ತೆ, ಶ್ರೀವೀರಭದ್ರೇಶ್ವರ ಸ್ವಾಮಿ ದೇವಸ್ಥಾನ ರಸ್ತೆ, ಮಾರಿಗುಡಿ ಮುಂಭಾಗದ ರಸ್ತೆ, ತರಕಾರಿ ಮಾರುಕಟ್ಟೆ ರಸ್ತೆ, ನೃಪತುಂಗ ವೃತ್ತದ ಮೂಲಕ ಸುಮಾರು 4 ಗಂಟೆಯ ಸಮಯಕ್ಕೆ ಸ್ವಸ್ಥಾನಕ್ಕೆ ರಥ ತಲುಪಿತು.

ಶ್ರೀಚಾಮರಾಜೇಶ್ವರಸ್ವಾಮಿ ರಥದ ಮುಂಭಾಗ ಮುಮ್ಮಡಿ ಕೃಷ್ಣರಾಜ ಒಡೆಯರ್ ಉತ್ಸವಮೂರ್ತಿ, ಗಣಪತಿ ಚಿಕ್ಕ ರಥಗಳಲ್ಲಿ ಸಾಗಿದರೆ, ಹಿಂಭಾಗದಲ್ಲಿ ಕೆಂಪನಂಜಾಂಬ ಮತ್ತು ಪಾರ್ವತಿ ಉತ್ಸವಮೂರ್ತಿಯನ್ನು ಒಳಗೊಂಡ ರಥ ಸಾಗಿತು. ರಥ ಸಾಗುವ ಮಧ್ಯೆ ಭಕ್ತರು ಹಣ್ಣು-ಕಾಯಿಯೊಂದಿಗೆ ಪೂಜೆ ಸಲ್ಲಿಸಿದರು. ನೆರೆದ ಭಕ್ತರು, ನವಜೋಡಿಗಳು ರಥಕ್ಕೆ ಹಣ್ಣು, ದವನ ಎಸೆಯುವ ಮೂಲಕ ಭಕ್ತಿಯನ್ನು ಸಮರ್ಪಿಸಿದರು. ವಿವಿಧ ಗ್ರಾಮಗಳು, ಹೊರಜಿಲ್ಲೆಗಳಿಂದ ಬಂದಿದ್ದ ಸಾವಿರಾರು ಭಕ್ತರು ದೇವಸ್ಥಾನದ ಸುತ್ತಮುತ್ತ ನಿಂತು ರಥೋತ್ಸವವನ್ನು ಕಣ್ತುಂಬಿಕೊಂಡರು. ಹಲವಾರು ಜನರು ಹಾಗೂ ಯುವಕರು ಎತ್ತರದ ಕಟ್ಟಡವನ್ನು ಏರಿ ರಥೋತ್ಸವವನ್ನು ವೀಕ್ಷಣೆ ಮಾಡಿದರು.

ವಿಶೇಷ ಹೂವಿನ ಅಲಂಕಾರ:

ಈ ಬಾರಿಯ ರಥೋತ್ಸವದಲ್ಲಿ ಶ್ರೀಚಾಮರಾಜೇಶ್ವರಸ್ವಾ ದೇವಸ್ಥಾನದಲ್ಲಿ ಮಾಡಿದ್ದ ಹೂವಿನ ಅಲಂಕಾರ ಗಮನ ಸೆಳೆಯುವ ಜತೆಗೆ ಭಾವೈಕ್ಯತೆಯನ್ನು ಸಾರಿತು. ಯಾವುದೇ ಜಾತಿ, ಮತಗಳನ್ನು ಮರೆತು ಜನರು ಜಾತ್ರೆಗಳಲ್ಲಿ ಒಂದಾಗುವುದನ್ನು ನಾವು ಕಾಣಬಹುದು. ಅಂತೆಯೇ ಈ ಬಾರಿ ದೇವಸ್ಥಾನದ ಹೂವಿನ ಅಲಂಕಾರವನ್ನು ಇಸ್ಲಾಂ ಸಮುದಾಯದ ಖಾನ್ ಎಂಬುವವರು ಮಾಡಿದ್ದು, ಭಾವೈಕ್ಯೆತಯನ್ನು ಮೂಡಿಸಿತು. ಬೆಂಗಳೂರಿನ ಪ್ರತಿಷ್ಠಿತ ದೇವಾಲಯಗಳಲ್ಲಿ ಹೂವಿನ ಅಲಂಕಾರ ಮಾಡುತ್ತಿದ್ದು, ಇದು ನನ್ನ ಕಾಯಕವಾಗಿದೆ. ಇದರಲ್ಲಿ ಭಕ್ತಿಯನ್ನು ಕಾಣುತ್ತಿದ್ದೇನೆ ಎಂದು ಖಾನ್ ಅವರು ವಿಜಯವಾಣಿಗೆ ತಿಳಿಸಿದರು.

ಪೊಲೀಸರಿಂದ ಅಚ್ಚುಕಟ್ಟಾದ ವ್ಯವಸ್ಥೆ:

ಶ್ರೀಚಾಮರಾಜೇಶ್ವರಸ್ವಾಮಿ ರಥೋತ್ಸವ ಸುಸೂಕ್ತವಾಗಿ ನಡೆಯಲು ಪೊಲೀಸ್ ಇಲಾಖೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿಕೊಂಡಿತ್ತು. ರಥದ ಬೀದಿಯಲ್ಲಿ ಅಲ್ಲಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಯಾವುದೇ ಅವಘಡಗಳು ಸಂಭವಿಸದಂತೆ ಕಣ್ಗಾವಲು ಹಾಕಿದ್ದರು. ಖಾಕಿಪಡೆ ಸಾರ್ವಜನಿಕರಿಗೆ ದಾರಿಯುದ್ದಕ್ಕೂ ಎಚ್ಚರಿಕೆಯನ್ನು ನೀಡುತ್ತಿದ್ದರು. ಪ್ರತಿಯೊಂದು ರಥಗಳಿಗೆ ಪೊಲೀಸ್ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗಿತ್ತು. ದೊಡ್ಡ ರಥದ ಸುತ್ತಲೂ ಹಗ್ಗವಿಡಿದು ನಿಂತಿದ್ದ ಅಧಿಕಾರಿಗಳು ವಿನಾಃಕಾರಣ ಯಾರನ್ನು ಹತ್ತಿರಕ್ಕೆ ಬಿಡಲಿಲ್ಲ. ಅಗ್ನಿಶಾಮಕ ದಳ ಮತ್ತು ಆ್ಯಂಬುಲೆನ್ಸ್ ವಾಹನ ವ್ಯವಸ್ಥೆ ಮಾಡಲಾಗಿತ್ತು. ದೇವಸ್ಥಾನಕ್ಕೆ ಬರುವ ದಾರಿಗಳಲ್ಲಿ ಬ್ಯಾರಿಗೇಟ್ ಹಾಕಿ ವಾಹನ ಸಂಚಾರ ಬಂದ್ ಮಾಡಲಾಗಿತ್ತು. ಸಾರ್ವಜನಿಕರು ನಡೆದುಕೊಂಡು ಬರಲು ಮಾತ್ರ ಅವಕಾಶ ನೀಡಲಾಗಿತ್ತು. ಒಟ್ಟಾರೆಯಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ನವ ಜೋಡಿಗಳ ಕಲರವ:

ರಥೋತ್ಸವದಲ್ಲಿ ನವಜೋಡಿಗಳ ಕಲರವ ಕಂಡುಬಂದಿತು. ಆಷಾಢ ಮಾಸದಲ್ಲಿ ನಡೆಯುತ್ತಿರುವ ಜಾತ್ರೆಯಲ್ಲಿ ನವ ದಂಪತಿಗಳು ಭಾಗವಹಿಸಿ ಪೂಜೆ ಸಲ್ಲಿಸಿದರು. ಸೆಲ್ಫಿ ಪೋಟೋಗಳನ್ನು ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಬಳಿಕ ರಥೋತ್ಸವದಲ್ಲಿ ಪಾಲ್ಗೊಂಡು ಹಣ್ಣು-ದವನ ಎಸೆದು ರಥಕ್ಕೆ ನಮಿಸಿದರು. ಜನ ಜಂಗುಳಿ ನಡುವೆ ಹೊಸ ಜೋಡಿಗಳ ಓಡಾಟ ಜಾತ್ರೆಗೆ ಮೆರುಗು ತಂದಿತ್ತು. ದೂರದ ಊರುಗಳಿಂದ ಕುಟುಂಬ ಸಮೇತರಾಗಿ ಆಗಮಿಸಿದ್ದ ನವಜೋಡಿಗಳು ಆಷಾಢದ ರಥೋತ್ಸವವನ್ನು ಕಣ್ತುಂಬಿಕೊಂಡು, ಹರಕೆಯನ್ನು ತೀರಿಸಿದರು. ಇವರಿಂದ ಜಾತ್ರೆಯಲ್ಲಿ ಖರೀದಿ ಭರಾಟೆಯೂ ಜೋರಾಗಿತ್ತು.

ಭಕ್ತರಿಗೆ ಅನ್ನಸಂತರ್ಪಣೆ:

ಶ್ರೀಚಾಮರಾಜೇಶ್ವರ ಸ್ವಾಮಿ ರಥೋತ್ಸವದ ಅಂಗವಾಗಿ ಹಳೇ ಖಾಸಗಿ ಬಸ್ ನಿಲ್ದಾಣದ ಮಾರಮ್ಮ ದೇವಸ್ಥಾನದ ಮುಂಭಾಗ, ಹೊಸ ಮಾರುಕಟ್ಟೆ ಮುಂಭಾಗ, ಹಳೆ ಮಾರುಕಟ್ಟೆ ಸಮೀಪ ಹಾಗೂ ವಿವಿಧ ಅಂಗಡಿ ಮುಂಗಟ್ಟುಗಳ ಮುಂಭಾಗದಲ್ಲಿ ಭಕ್ತರಿಗೆ ಹಲವರು ಅನ್ನ ಸಂತರ್ಪಣೆಯನ್ನು ಏರ್ಪಡಿಸಿದ್ದರು. ನಗರಸಭೆ ವತಿಯಿಂದ ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಕಸ ವಾಹನಗಳನ್ನು ನಿಲ್ಲಿಸಿ ಸ್ವಚ್ಛತೆಯನ್ನು ಕಪಾಡಲಾಯಿತು.

ವೇಷಭೂಷಣ ತೊಟ್ಟು ಸಂಭ್ರಮ:

ರಥೋತ್ಸವದಲ್ಲಿ ವಿವಿಧ ವೇಷಭೂಷಣಗಳನ್ನು ತೊಟ್ಟು ಹಲವರು ಸಂಗ್ರಮಿಸಿದರು. ನಗರದ ಗುರರಾಜ್ ಎಂಬುವವರು ಗರುಡನ ಮಾದರಿಯನ್ನು ಮುಖಕ್ಕೆ ಧರಿಸಿ, ಅದರ ಮೇಲೆ ರಥವನ್ನು ಕುಳ್ಳಿರಿಸಿದಂತೆ ಇದ್ದ ಭೂಷಣ ನೋಡುಗರ ಗಮನಸೆಳೆಯಿತು. ಮತ್ತೊಬ್ಬ ಕಲಾವಿದ ಶ್ರೀಕೃಷ್ಣನ ವೇಷವನ್ನು ತೊಟ್ಟು ಸಂಭ್ರಮಿಸಿದರು. ಜನರು ಇವರೊಂದಿಗೆ ಪೋಟೋ ತೆಗೆಸಿಕೊಂಡು ಖುಷಿಪಟ್ಟರು.

ಚಂದ್ರು ಮೆಲೋಡಿಸ್‌ನಿಂದ ರಸಸಂಜೆ:

ಶ್ರೀಚಾಮರಾಜೇಶ್ವರ ರಥೋತ್ಸವದ ಅಂಗವಾಗಿ ಸಂಜೆ ದೇವಸ್ಥಾನದ ಮುಂಭಾಗ ಡಾ.ರಾಜ್‌ಕುಮಾರ್ ಕಲಾವೇದಿಕೆ ಹಾಗೂ ಚಂದ್ರು ಮೆಲೋಡಿಸ್ ವತಿಯಿಂದ ಆಯೋಜಿಸಿದ್ದ ರಸ ಮಂಜರಿ ಕಾರ್ಯಕ್ರಮ ಗಮನಸೆಳೆಯಿತು. ಗಾಯಕರಾದ ಉಮ್ಮತ್ತೂರು ಚಂದ್ರು, ಡಾ.ಸುಗಂಧರಾಜು, ವೇದಶ್ರೀ, ಸಂತೋಷ್, ವಿ.ಮಯೂರ, ಮಹದೇವಸ್ವಾಮಿ, ಜನಪದ ಮಹೇಶ್, ಎಸ್‌ಪಿಬಿ ಸಂಘದ ಅಧ್ಯಕ್ಷ ಎಚ್.ಎಂ.ಶಿವಣ್ಣ, ಸಿ.ಎಂ.ನರಸಿಂಹಮೂರ್ತಿ, ಶಾಂತರಾಜು, ಮಂಜುಶ್ರೀರಾಮ್ ಹಾಡಿದ ಸುಮಧುರ ಹಾಡುಗಳು ನೆರೆದವರನ್ನು ರಂಜಿಸಿತು.

ಸತತ 6 ವರ್ಷಗಳಿಂದ ಶ್ರೀಚಾಮರಾಜೇಶ್ವರಸ್ವಾಮಿ ರಥೋತ್ಸವದಲ್ಲಿ ರಸಸಂಜೆ ಕಾರ್ಯಕ್ರಮವನ್ನು ಆಯೋಜನೆ ಮಾಡಿಕೊಂಡು ಬರಲಾಗಿದೆ. ರಾಜ್ಯದಲ್ಲೇ ವಿಶೇಷವಾಗಿ ಆಷಾಢಮಾಸದಲ್ಲಿ ಜರುಗುವ ಶ್ರೀಚಾಮರಾಜೇಶ್ವರಸ್ವಾಮಿ ರಥೋತ್ಸವ ಸಂಭ್ರಮದಿಂದ ನಡೆದಿದೆ. ನವವಿವಾಹಿತರು, ಯುವ ಸಮುದಾಯ ಜಾತ್ರೆಯ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿತು.

ಉಮ್ಮತ್ತೂರು ಚಂದ್ರು, ಗಾಯಕರು ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರರು, ಚಾಮರಾಜನಗರ

ಆಷಾಢ ಮಾಸದ ಶ್ರೀಚಾಮರಾಜೇಶ್ವರಸ್ವಾಮಿ ರಥೋತ್ಸವದಲ್ಲಿ ಪಾಲ್ಗೊಳ್ಳುವಂತೆ ನನ್ನ ಪತ್ನಿ ಹರೆಕೆ ಒತ್ತುಕೊಂಡಿದ್ದರು. ಅದರಂತೆ ನಾವು ರಥೋತ್ಸವದಲ್ಲಿ ಭಾಗವಹಿಸಿದ್ದೇವೆ. ನಮ್ಮ ಇಷ್ಠಾರ್ಥವನ್ನು ನೆರವೇರಿಸುವಂತೆ ರಥಕ್ಕೆ ಹಣ್ಣು-ದವನ ಎಸೆದು ಪ್ರಾರ್ಥನೆ ಸಲ್ಲಿಸಿದ್ದೇವೆ.

ಮೋನಿಷ್, ನವವಿವಾಹಿತ, ಮಂಡ್ಯ

ರಾಜ್ಯದಲ್ಲಿ ವಿಶೇಷವಾಗಿ ಆಷಾಢಮಾಸದಲ್ಲಿ ನಡೆಯುವ ಶ್ರೀಚಾಮರಾಜೇಶ್ವರಸ್ವಾಮಿ ರಥೋತ್ಸವವನ್ನು ಕಣ್ತುಂಬಿಕೊಂಡೆವು. ನವ ವಧು-ವರರು ರಥೋತ್ಸವದಲ್ಲಿ ಭಾಗವಹಿಸಿ ಎಂಬ ಸಂಬಂಧಿಕರ ಸೂಚನೆಯಂತೆ ಭಾಗವಹಿಸಿದ್ದೇವು. ವಿಶೇಷ ಜಾತ್ರೆ ಖುಷಿ ನೀಡಿತು.

ಅರ್ಪಿತಾ, ನವವಿವಾಹಿತೆ, ಬೆಂಗಳೂರು