Oplus_131072 
ಜಿಲ್ಲೆ

ಸಂಭ್ರಮದಿಂದ ಈದ್-ಉಲ್ ಫಿತರ್ ಆಚರಣೆ

ಯಳಂದೂರು: ಪಟ್ಟಣವೂ ಸೇರಿದಂತೆ ತಾಲೂಕಿನ ವಿವಿಧೆಡೆ ಸೋಮವಾರ ಮುಸ್ಲಿಮರ ಪವಿತ್ರ ರಂಜಾನ್ ಮಾಸದ ಉಪವಾಸ ಅಂತ್ಯವಾಗುವ ದಿನ ಈದ್-ಉಲ್ ಫಿತರ್ (ರಂಜಾನ್) ಹಬ್ಬವನ್ನು ಸಂಭ್ರಮ ಸಡಗರಗಳಿಂದ ಮುಸ್ಲಿಮರು ಆಚರಿಸುವ ಮೂಲಕ ಭಕ್ತಿ ಮೆರೆದರು.

ಪಟ್ಟಣದ ಜಾಮೀಯಾ ಮಸೀದಿಯಿಂದ ಬೆಳಗ್ಗೆ 9.30ಕ್ಕೆ ನೂರಾರು ಸಂಖ್ಯೆಯ ಮುಸ್ಲಿಮರು ಒಗ್ಗೂಡಿ ದೇವರ ನಾಮಗಳನ್ನು ಹಾಡುತ್ತ ಪಟ್ಟಣದ ಕೆ.ಕೆ.ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಜಮಾವಣೆಗೊಂಡರು. ನಂತರ ಇಲ್ಲಿನ ಮುಸ್ಲಿಂ ಧಾರ್ಮಿಕ ಗುರು ಅಬ್ರಾರ್ ಅಹಮ್ಮದ್ ಈ ಹಬ್ಬದ ವಿಶೇಷತೆಗಳ ಬಗ್ಗೆ ಧಾರ್ಮಿಕ ಪ್ರವಚನ ನೀಡಿದರು.

ಮುಸ್ಲಿಮರ ಪವಿತ್ರ ಧರ್ಮಗ್ರಂಥವಾದ ಕುರ್‌ಅನ್ ಭೂಮಿ ಮೇಲೆ ಬಂದ ಪವಿತ್ರ ಮಾಸ ಇದಾಗಿದೆ. ಒಂದು ತಿಂಗಳ ಕಾಲ ಉಪವಾಸ ವ್ರತವನ್ನು ಆಚರಿಸಿ, ಚಂದ್ರ ದರ್ಶನ ಪಡೆದು ನಂತರ ಹಬ್ಬ ಆಚರಿಸುವ ಧಾರ್ಮಿಕ ಹಿನ್ನೆಲೆ ಈ ಹಬ್ಬಕ್ಕಿದೆ. ಈ ತಿಂಗಳಲ್ಲಿ ತಾವು ಇಟ್ಟಿರುವ ಹಣ, ಚಿನ್ನ, ಬೆಳ್ಳಿ ಒಡವೆಗಳಿಗೆ ನಿಗದಿತವಾಗಿರುವ ಜಕಾತ್, ಫಿತ್ರ್ (ದಾನ)ವನ್ನು ನೀಡುತ್ತಾರೆ. ಇದನ್ನು ತಮ್ಮ ಸುತ್ತಲಿನ ಬಡವರು, ನಿರ್ಗತಿಕರಿಗೆ ನೀಡುವ ಪರಿಪಾಠವಿದೆ. ಎಲ್ಲರೂ ಒಂದೇ, ಎಲ್ಲರಲ್ಲೂ ಹಬ್ಬದ ಸಂಭ್ರಮವನ್ನು ಕಾಣುವ ದಿನವಾಗಬೇಕು ಎಂಬ ಉದ್ದೇಶವಿದೆ ಎಂದು ಪ್ರವಚನದಲ್ಲಿ ನುಡಿದರು. ಇದಾದ ಬಳಿಕ ವಿಶೇಷ ಪ್ರಾರ್ಥನೆಯನ್ನು ಮಾಡಲಾಯಿತು.

ತೋಳಿಗೆ ಕಪ್ಪುಪಟ್ಟಿ ಧರಿಸಿ ಬಂದ ಮುಸ್ಲಿಮರು: ಹಬ್ಬದ ವಿಶೇಷ ಪ್ರಾರ್ಥನೆ ಸಲ್ಲಿಸಲು ಬಂದಿದ್ದ ಬಹುತೇಕ ಮುಸ್ಲಿಮರು ತಮ್ಮ ತೋಳಿಗೆ ಕಪ್ಪು ಪಟ್ಟಿಯನ್ನು ಧರಿಸಿ ಬಂದಿದ್ದರು. ವಕ್ಫ್ ಮಸೂದೆಗೆ ಕೇಂದ್ರ ಸರ್ಕಾರ ತರಲು ಹೊರಟಿರುವ ಮಾರ್ಪಾಡುಗಳನ್ನು ಖಂಡಿಸಿ ತಮ್ಮ ತೋಳುಗಳಿಗೆ ಕಪ್ಪುಪಟ್ಟಿಯನ್ನು ಧರಿಸಿ ಎಲ್ಲರೂ ನಮಾಜ್ ಮಾಡಿ, ಪ್ರಾರ್ಥಿಸಿದ್ದು ಈ ವರ್ಷದ ವಿಶೇಷವಾಗಿತ್ತು.

ಪುರುಷರು ಮತ್ತು ಮಕ್ಕಳು ಈದ್ಗಾ ಮೈದಾನದಲ್ಲಿ ಹೊಸಹೊಸ ಧಿರಿಸು ಧರಿಸಿ ಅತ್ತರು (ಸುಗಂಧ ದ್ರವ್ಯ) ಹಾಕಿಕೊಂಡು ಹಬ್ಬದ ಸಂಭ್ರಮದಲ್ಲಿ ಭಾಗವಹಿಸಿದ್ದರಿಂದ ಹಬ್ಬದ ಸಡಗರ ಮತ್ತಷ್ಟು ಕಳೆಕಟ್ಟಿತ್ತು. ತಾಲೂಕಿನ ಮಾಂಬಳ್ಳಿ, ಗುಂಬಳ್ಳಿ, ಯರಗಂಬಳ್ಳಿ ಸಮೀಪದ ಚಾಟೀಪುರ, ಹೊಂಗನೂರು ಸೇರಿದಂತೆ ಅನೇಕ ಗ್ರಾಮಗಳಲ್ಲೂ ಈದನ್ನು ಸಂಭ್ರಮ ಸಡಗರಗಳಿಂದ ಆಚರಣೆ ಮಾಡಲಾಯಿತು.