ಬನ್ನೂರು: ಆದಿಶಕ್ತಿ ಹುಚ್ಚಮ್ಮದೇವಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ವಿಜೃಂಭಣೆಯಿಂದ ಜರುಗಿತು.
ರಥೋತ್ಸವದ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ದೇವಿಗೆ ವಿವಿಧ ಹಣ್ಣುಗಳಿಂದ ಅಲಂಕಾರ ಮಾಡಲಾಗಿತ್ತು. ಅಲಂಕೃತಗೊಂಡ ತೇರಿನಲ್ಲಿ ಹುಚ್ಚಮ್ಮ ದೇವಿಯ ಉತ್ಸವ ಮೂರ್ತಿಯನ್ನು ರಥದ ಸುತ್ತ ಪ್ರದಕ್ಷಿಣೆ ಮಾಡಿ ರಥದ ಮೇಲೆ ಪ್ರತಿಷ್ಠಾಪಿಸಲಾಯಿತು. ದೇವಿಗೆ ಮಹಾಮಂಗಳಾರತಿ ನೆರವೇರಿಸುತ್ತಿದ್ದಂತೆ ದೇವಾಲಯದ ಆವರಣದಲ್ಲಿ ಸೇರಿದ್ದ ಭಕ್ತರು, ನವದಂಪತಿ, ಹರಕೆ ಹೊತ್ತ ಭಕ್ತರು ರಥದೆಡೆ ಹಣ್ಣು ಜವನ ಎಸೆದರು. ನಂತರ ರಥವನ್ನು ಎಳೆದರು.
ಆದಿಶಕ್ತಿ ಹುಚ್ಚಮ್ಮ ದೇವಿಯ ರಥೋತ್ಸವದ ವೇಳೆ ರಥದ ಕೆಳಗೆ ನವಜಾತ ಶಿಶುಗಳು, 6 ವರ್ಷದೊಳಗಿನ ಮಕ್ಕಳನ್ನು ನುಸುಳಿಸುವ ವಾಡಿಕೆಯಿದೆ. ಅದರಂತೆ ಮಕ್ಕಳನ್ನು ರಥದ ಕೆಳಭಾಗ ನುಸುಳಿಸುವ ಸಲುವಾಗಿ ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಪಾಲಕರು ಆಗಮಿಸಿ ಟೋಕನ್ ಪಡೆದು ಸರದಿಯಲ್ಲಿ ಕಾದು ನಿಂತಿದ್ದರು. ರಥ ಪ್ರಾರಂಭಗೊಂಡು ದೇವಾಲಯದ ಪಕ್ಕ ತಿರುವು ಪಡೆಯುತ್ತಿದ್ದಂತೆ ಮಕ್ಕಳನ್ನು ರಥದ ಕೆಳಗೆ ನುಸುಳಿಸಲು ಅವಕಾಶವನ್ನು ಕಲ್ಪಿಸಲಾಯಿತು.
ರಥೋತ್ಸವದ ಮುಂಭಾಗ ಗ್ರಾಮೀಣ ಕ್ರೀಡೆಗಳಾದ ದೊಣ್ಣೆವರಸೆ, ಕತ್ತಿವರಸೆಯನ್ನು ಯುವಕರು ಪ್ರದರ್ಶಿಸಿದರು. ಹಿರಿಯರು ದೇವಿಯ ಕುರಿತು ಜಾನಪದ ಗೀತೆಗಳನ್ನು ಹಾಡಿದರು. ಗ್ರಾಮದ ಪ್ರತಿಯೊಂದು ವರ್ಗದವರು ಜಾತ್ರಾ ಮಹೋತ್ಸವದ ಕಾರ್ಯಗಳನ್ನು ಹಂಚಿಕೊಂಡು ಯಶಸ್ವಿಗೊಳಿಸಿದರು. ರಥದ ಬಳಿ ದೇವಿಗೆ ಭಕ್ತರು ಪೂಜೆ ಸಲ್ಲಿಸಿದರು. ರಥೋತ್ಸವದ ನಂತರ ಮಜ್ಜಿಗೆ, ಪಾನಕ, ಅನ್ನಸಂತರ್ಪಣೆ ನೀಡಲಾಯಿತು. ಮಾಜಿ ಶಾಸಕಿ ಜೆ.ಸುನೀತಾ ವೀರಪ್ಪಗೌಡ, ದೇವಾಲಯದ ವ್ಯವಸ್ಥಾಪಕ ವೀರಪ್ಪಗೌಡ, ಬನ್ನೂರು ಹೋಬಳಿ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರವಿ, ಮನು ಇದ್ದರು.