ಜಿಲ್ಲೆ

ಸಂಭ್ರಮದ ಸಂಕ್ರಾಂತಿಗೆ ಕರೊನಾ ಅಡ್ಡಿ ; ಎಳ್ಳು ಬೆಲ್ಲ ತಿನ್ನಿ, ಒಳ್ಳೆಯ ಮಾತಾಡಿ

Tumakuru

ತುಮಕೂರು : ಗ್ರಾಮೀಣ ಸೊಗಡಿನ ಹಬ್ಬ ಸಂಕ್ರಾಂತಿ ಆಚರಣೆಗೆ ಕರೊನಾ ಮೂರನೇ ಅಲೆ ಅಡ್ಡಿಯಾಗಿದೆ. ಆತಂಕದ ನಡುವೆಯೂ ನಗರವಾಸಿಗಳು ಹಬ್ಬಕ್ಕೆ ಸಜ್ಜಾಗಿದ್ದಾರೆ. ಗ್ರಾಮೀಣ ಭಾಗದಲ್ಲಿ ಸಾಂಪ್ರದಾಯಿಕ ಆಚರಣೆ ನಡೆಯಲಿದೆ.

ಕರೊನಾ ಆತಂಕದ ನಡುವೆಯೂ ಕಳೆದ ವರ್ಷದಲ್ಲಿ ಉತ್ತಮ ಮಳೆಯಾಗಿದ್ದು, ರೈತ ಕಣದಲ್ಲಿ ಭರ್ಜರಿ ಬೆಳೆ ಬಂದಿದೆ ಹಾಗಾಗಿ, ರೈತರು ತಮಗೆ ಹೆಗಲು ಕೊಡುವ ಜಾನುವಾರು ಸಿಂಗರಿಸಿ ಸಂಭ್ರಮಿಸಲು ಸಂಕ್ರಾಂತಿ ಕಾರಣವಾಗಲಿದೆ, ಮನೆಗಳಲ್ಲಿ ಹಬ್ಬದ ಪೂರ್ವ ಸಿದ್ಧತೆಯಾಗಿ ಹದವಾಗಿ ಹುರಿದ ಎಳ್ಳು, ಬೆಲ್ಲ, ಕೊಬ್ಬರಿ, ಹುರಿಕಡಲೆ ಮಿಶ್ರಣದ ಎಳ್ಳುಬೆಲ್ಲಾ ತಯಾರಾಗಿದೆ. ಮನೆ ಮನೆಗೆ ತೆರಳಿ ಎಳ್ಳು ಬೀರಿ ‘ಎಳ್ಳು ಬೆಲ್ಲ ಕೊಳ್ಳಿ, ಒಳ್ಳೊಳ್ಳೆ ಮಾತಾಡಿ’ ಎಂದು ಸಂಕ್ರಮಣದ ಸಂಭ್ರಮ ಹಂಚಿಕೊಳ್ಳಲು ಯುವತಿಯರು ತಯಾರಿ ನಡೆಸಿದ್ದಾರೆ.

ಎಳ್ಳು, ಶೇಂಗಾ, ಹುರಿಗಡಲೆ, ಒಣಕೊಬ್ಬರಿ ತುಂಡು, ಬೆಲ್ಲದಚ್ಚು, ಸಕ್ಕರೆ ಅಚ್ಚು, ಕಬ್ಬು ಅವರೆಕಾಯಿ, ಗೆಣಸು ನಗರದ ಮಾರುಕಟ್ಟೆಯಲ್ಲಿ ರಾಶಿ, ರಾಶಿಯಾಗಿ ಲಗ್ಗೆ ಇಟ್ಟಿವೆ.

ಮಾರುಕಟ್ಟೆಯಲ್ಲಿ ಹಬ್ಬದ ಮುನ್ನಾ ದಿನವಾದ ಶುಕ್ರವಾರ ಅವರೆಕಾಯಿ ತೂಕ 90ರೂ, ಕಡ್ಲೆಕಾಯಿ 1ಕೆಜಿಗೆ 70 ರೂ, ಎಳ್ಳುಬೆಲ್ಲಾ ಪ್ಯಾಕೆಟ್ 1ಕೆ.ಜಿ.ಗೆ 140ರೂ, ಕಬ್ಬು 1 ಜೋಡಿ ಜಲ್ಲೆಗೆ 30 ರಿಂದ 50 ರೂ., ಸಿಹಿಗೆಣಸು ಕೆಜಿಗೆ 30 ರೂ, ಸಕ್ಕರೆ ಅಚ್ಚು 100 ರೂ.ಗೆ ಮಾರಾಟವಾಗುತಿತ್ತು. ಬಾಳೆಹಣ್ಣು ಕೆಜಿಗೆ 30 ರೂ. ಹೂವು-ಹಣ್ಣು, ತರಕಾರಿ ಬೆಲೆ ಕೊಂಚ ಕಡಿಮೆಯಾಗಿತ್ತು. ನಗರದ ಬಹುತೇಕ ಮಾರುಕಟ್ಟೆಗಳಲ್ಲಿ ಅವರೆ, ಕಡ್ಲೆಕಾಯಿ, ಗೆಣಸು, ಕಬ್ಬು, ಹೂ-ಹಣ್ಣ ಖರೀದಿ ಭರಾಟೆಯಿಂದ ಸಾಗಿತ್ತು. ನಗರದ ಪ್ರಮುಖ ವ್ಯಾಪಾರ ತಾಣಗಳಾದ ಬಿ.ಎಚ್.ರಸ್ತೆ, ಅಶೋಕ ರಸ್ತೆ, ಜೆ.ಸಿ.ರಸ್ತೆ, ಬಟವಾಡಿ, ಎಸ್.ಎಸ್.ಪುರಂ, ಎಸ್‌ಐಟಿ ಮುಖ್ಯ ರಸ್ತೆ, ಅಂತರಸನಹಳ್ಳಿ ಮಾರುಕಟ್ಟೆ ಸೇರಿದಂತೆ ವಿವಿಧ ಭಾಗಗಳಲ್ಲಿ ವ್ಯಾಪಾರ ವಹಿವಾಟು ಬಿರುಸಿನಿಂದ ನಡೆಯಿತು.

ಗ್ರಾಮೀಣ ಸೊಗಡಿನೊಂದಿಗೆ ಬೆಸೆದುಕೊಂಡಿರುವ ಹಬ್ಬದ ಸ್ವರೂಪ ನಗರದಲ್ಲಿ ಬದಲಾಗಿದೆ. ಮನೆಯಲ್ಲಿ ಸಿದ್ಧಪಡಿಸಿಕೊಳ್ಳುತ್ತಿದ್ದ ಎಳ್ಳು ಬೆಲ್ಲ ಮಾರುಕಟ್ಟೆಯಲ್ಲಿ ಕೊಂಡಕೊಂಡಿದ್ದು ಕಾಣಿಸಿತು.

ಮಕರ ಸಂಕ್ರಾಂತಿ ದಿನಾಂಕ ಬದಲಾವಣೆ ಏಕೆ? : ಹಿಂದಿನ ವರ್ಷಗಳಲ್ಲಿ ಮಕರ ಸಂಕ್ರಾಂತಿ ಹಬ್ಬ ಜನವರಿ 14 ರಂದು ಬರುತ್ತಿತ್ತು. ಈಗಿನ ವರ್ಷಗಳಲ್ಲಿ ಜನವರಿ 15 ರಂದು ಬರುತ್ತಿದೆ. ಕಾರಣವೇನು ಎಂಬ ಬಗ್ಗೆ ತುಮಕೂರಿನ ಕ್ಯಾಲೆಂಡರ್ ಶಿವಕುಮಾರ್ ಅಭಿಪ್ರಾಯ ತಿಳಿಸಿದ್ದಾರೆ.

ಮಕರ ಸಂಕ್ರಾಂತಿ 1862 ರಿಂದ 1934ರವರೆಗೆ ಜನವರಿ 13, 1935 ರಿಂದ 2007ರ ವರೆಗೆ ಜ.14, 2008 ರಿಂದ 2080ರ ವರೆಗೆ ಜ.15 ಹಾಗೂ 2081 ರಿಂದ 2153ರ ವರೆಗೆ ಜ.16ರಂದು ಬರಲಿದೆ. ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ಸೂರ್ಯ ಪ್ರತಿವರ್ಷ ಧನುರ್ ರಾಶಿಯಿಂದ ಮಕರ ರಾಶಿಗೆ 20 ನಿಮಿಷಗಳು ತಡವಾಗಿ ಪ್ರವೇಶಿಸುತ್ತಾನೆ. ಹಾಗಾಗಿ, ಸೂರ್ಯ 3 ವರ್ಷಗಳಿಗೊಮ್ಮೆ 1 ಗಂಟೆ ತಡವಾಗಿ ಪ್ರವೇಶಿಸುತ್ತಾನೆ. ಅಂದರೆ 72 ವರ್ಷಗಳಿಗೊಮ್ಮೆ ಸೂರ್ಯ ಮಕರ ರಾಶಿ ಪ್ರವೇಶಿಸಲು ಒಂದು ದಿನ ತಡವಾಗಲಿದೆ. ಇದರಿಂದಾಗಿ ಪ್ರತಿ 72 ವರ್ಷಗಳಿಗೊಮ್ಮೆ ಮಕರ ಸಂಕ್ರಾಂತಿ ಹಬ್ಬವು ಒಂದು ದಿನ ಮುಂದೆ ಹೋಗುತ್ತದೆ.