ಜಿಲ್ಲೆ

ಸಂಭ್ರಮದ ವರಮಹಾಲಕ್ಷ್ಮೀ ವ್ರತ

ಬಾಳೆಹೊನ್ನೂರು: ಹೋಬಳಿಯಾದ್ಯಂತ ವರಮಹಾಲಕ್ಷ್ಮೀ ವ್ರತವನ್ನು ಶ್ರದ್ಧಾ, ಭಕ್ತಿಯಿಂದ ಆಚರಿಸಿದರು. ಮನೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ, ಮನೆಗಳಲ್ಲಿ ಕಲಶ ಪ್ರತಿಷ್ಠಾಪಿಸಿ ಭಕ್ತಿಯಿಂದ ಲಕ್ಷ್ಮೀಯನ್ನು ಪೂಜಿಸಿ ಪ್ರಾರ್ಥಿಸಿದರು. ಹಬ್ಬಕ್ಕೆಂದು ತಯಾರಿಸಿದ ವಿವಿಧ ಖಾದ್ಯಗಳನ್ನು ದೇವರಿಗೆ ನೈವೇದ್ಯ ಮಾಡಿದರು.

ಮುತೆôದೆಯರನ್ನು ಮನೆಗೆ ಆಹ್ವಾನಿಸಿದ ಅರಿಶಿಣ, ಕುಂಕುಮ, ಹೂ, ಬಳೆಗಳನ್ನು ನೀಡಿ ಸತ್ಕರಿಸಿದರು. ಹಬ್ಬದ ಅಂಗವಾಗಿ ರಂಭಾಪುರಿ ಪೀಠದ ಶಕ್ತಿಮಾತೆ ಚೌಡೇಶ್ವರಿ ಹಾಗೂ ಭದ್ರಕಾಳಿ ಅಮ್ಮನವರ ಸನ್ನಿಧಿಯಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ವಿಶೇಷ ಪೂಜೆ ನೆರವೇರಿಸಿ, ಅಷ್ಟೋತ್ತರ, ಕುಂಕುಮಾರ್ಚನೆ ಹಾಗೂ ಮಹಾ ಮಂಗಳಾರತಿ ನೆರವೇರಿದರು.

ಪಟ್ಟಣದ ಮೃತ್ಯಂಬಿಕಾ ಅಮ್ಮನವರ ದೇವಸ್ಥಾನದಲ್ಲಿ ಪ್ರಧಾನ ಅರ್ಚಕ ಕೆ.ಎಸ್.ಪ್ರಕಾಶ್ ಭಟ್ ನೇತೃತ್ವದಲ್ಲಿ ದೇವರಿಗೆ ವಿಶೇಷ ಪೂಜೆ ನೆರವೇರಿಸಿ ವಿವಿಧ ಪುಷ್ಪಾಲಂಕಾರ ಮಾಡಲಾಗಿತ್ತು. ಎನ್.ಆರ್. ಪುರ ರಸ್ತೆಯ ಚೌಡೇಶ್ವರಿ ದೇವಸ್ಥಾನ, ಅಕ್ಷರನಗರದ ಗುರಿಕಟ್ಟೆಬೈಲು ಚಾಮುಂಡೇಶ್ವರಿ ದೇವಾಲಯ ಸೇರಿದಂತೆ ಸುತ್ತಮುತ್ತಲಿನ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿದವು.