ಜಿಲ್ಲೆ

ಸಂಭ್ರಮದ ಮೊಹರಂ ಆಚರಣೆ

ಬಳ್ಳಾರಿ : ಜಿಲ್ಲಾದ್ಯಂತ ವಿವಿಧ ಗ್ರಾಮಗಳಲ್ಲಿ ಬುಧವಾರ ಮೊಹರಂ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಜಿಲ್ಲೆಯ ಹಲವು ಜನರು ಹಬ್ಬದಲ್ಲಿ ಪಾಲ್ಗೊಂಡು ಧನ್ಯತೆ ಮೆರೆದರು.
ಮೊಹರಂ ಪ್ರಯುಕ್ತ ಕಳೆದ ಎರಡು ದಿನಗಳಿಂದ ಗ್ರಾಮಗಳಲ್ಲಿ ವಿವಿಧ ಕಾರ್ಯಕ್ರಮಗಳು ನೆರವೇರಿದವು. ಯಾವುದೇ ಜಾತಿ, ಧರ್ಮದರ ಭೇದವಿಲ್ಲದೆ ಎಲ್ಲರು ಒಂದಾಗಿ ಹಬ್ಬದ ಸಂಭ್ರಮದಲ್ಲಿ ತೊಡಗಿಸಿಕೊಂಡಿದ್ದರು. ದೇವರ ವಿಸರ್ಜನೆಯ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ಗ್ರಾಮಸ್ಥರು ಕುಣಿದು ಕುಪ್ಪಳಿಸಿದರು. ಮಕ್ಕಳು, ಯುವಕರು ಸೇರಿದಂತೆ ಎಲ್ಲ ವಯಸ್ಸಿನವರು ತಮಟೆ ಸದ್ದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ನಗರದ ಅಂದ್ರಾಳ್, ಮಿಲ್ಲರ್‌ಪೇಟ್, ಬಂಡಿಹಟ್ಟಿ, ಕೌಲ್‌ಬಜಾರ್, ಶ್ರೀರಾಂಪುರ ಕಾಲೊನಿ ಸೇರಿ ನಾನಾ ಮಸೀದಿಗಳಲ್ಲಿ ಪ್ರತಿಷ್ಠಾಪಿಸಿದ್ದ ಪೀರಲ ದೇವರು ಬೆಳಗಿನ ಜಾವ ಸವಾರಿ ಮಾಡಿಬಂದವು. ಕೆಂಪು ಸಕ್ಕರೆ, ಹೂವಿನ ಹಾರ ನೈವೇದ್ಯ ಅರ್ಪಿಸಿದರು. ಅಲಾಯಿ ಕುಣಿಯಲ್ಲಿ ಕಟ್ಟಿಗೆ ಉಪ್ಪು ಹಾಕಿ ಭಕ್ತಿ ಮೆರೆದರು. ಕೊನೆಯ ದಿನವಾದ ಕಾರಣ ಸಿಂಗಾರಗೊಂಡಿದ್ದ ದೇವರುಗಳು ಸಂಜೆಯಾಗುತ್ತಲೇ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹೋರಟವು. ಜನರು ದಾರಿಯುದ್ದಕ್ಕೂ ತಂಡೋಪ ತಂಡವಾಗಿ ನಿಂತುಕೊಂಡು ಅಂತಿಮ ದರ್ಶನ ಪಡೆದು ಪುನೀತರಾದರು.