ಮಡಿಕೇರಿ: ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ 29ನೇ ವರ್ಷದ ಪುತ್ತರಿ ನಮ್ಮೆಯನ್ನು ಹುಣ್ಣಿಮೆಯ ದಿನವಾದ ಗುರುವಾರ ದಕ್ಷಿಣ ಕೊಡಗಿನ ಬಿರುನಾಣಿಯ ತೆರಾಲು ಗ್ರಾಮದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಬೊಟ್ಟಂಗಡ ಗಿರೀಶ್ ಹಾಗೂ ಸವಿತಾ ಗಿರೀಶ್ ದಂಪತಿ ಭತ್ತದ ಗದ್ದೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಕದಿರು ಕೊಯ್ದು ಮನೆಗೆ ತರಲಾಯಿತು.
ಎನ್.ಯು.ನಾಚಪ್ಪ ಮಾತನಾಡಿ, ಅತ್ಯಂತ ಸೂಕ್ಷ್ಮ ಜನಾಂಗವಾಗಿರುವ ಕೊಡವರ ಸಾಂಪ್ರದಾಯಿಕ ಹಬ್ಬ, ಆಚಾರ, ವಿಚಾರಗಳನ್ನು ಇಡೀ ವಿಶ್ವಕ್ಕೆ ತಿಳಿಸಬೇಕೆನ್ನುವ ಉದ್ದೇಶದಿಂದ ಸಿಎನ್‌ಸಿ ಸಂಘಟನೆ ಕಳೆದ ಮೂರು ದಶಕಗಳಿಂದ ಹಬ್ಬಗಳನ್ನು ಸಾರ್ವಜನಿಕವಾಗಿ ಆಚರಿಸಿಕೊಂಡು ಬರುತ್ತಿದೆ. ಕೊಡವ ಜನಾಂಗದ ಪುತ್ತರಿ ನಮ್ಮೆಯನ್ನು ಹುಣ್ಣಿಮೆಯ ದಿನ ಆಚರಿಸಲಾಗುತ್ತದೆ ಎಂದರು.
ಕೊಡವರಿಗೆ ಯಾವುದೇ ಧಾರ್ಮಿಕ ಕ್ರಿಯೆಯ ಏಜೆಂಟರುಗಳ ಅಗತ್ಯವಿಲ್ಲ. ನೇರವಾಗಿ ಪ್ರಕೃತಿಯ ಚಕ್ರದ ಮೂಲಕ ಕೊಡವರೇ ಕೊಡವರ ಜನಪದ ಆಚರಣೆಗಳನ್ನು ನಿರ್ಧರಿಸುತ್ತಾರೆ. ಕೊಡವರ ಹಬ್ಬಗಳ ಕ್ಯಾಲೆಂಡರ್‌ನಲ್ಲಿ ಕೊಡವ ಜನಾಂಗದ ಕೊಯ್ಲು ಹಬ್ಬ ಪುತ್ತರಿ ಪ್ರಧಾನ ಹಬ್ಬವಾಗಿ ಗುರುತಿಸಿಕೊಂಡಿದೆ. ಪುತ್ತರಿ ಎಂಬುದು ತಮಿಳು ಕ್ಯಾಲೆಂಡರ್‌ನ ಪೊಂಗಲ್ ಮತ್ತು ಸಿಖ್ಖರ ಬೈಸಾಕಿಯಂತೆ. ಹೊಸ ಅಕ್ಕಿ ಅಥವಾ ಭತ್ತವನ್ನು ಅಂದರೆ ಆಹಾರ ಧಾನ್ಯವನ್ನು ಮನೆಗೆ ಸ್ವಾಗತಿಸುವುದನ್ನು ಪುತ್ತರಿ ಸಂಕೇತಿಸುತ್ತದೆ. ಇದು ಸಮೃದ್ಧಿಯ ಸಂಕೇತವೂ ಹೌದು ಎಂದು ನಾಚಪ್ಪ ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಬೊಟ್ಟಂಗಡ ಗಿರೀಶ್, ಸವಿತಾ ಗಿರೀಶ್, ಬೊಟ್ಟಂಗಡ ಸುಮನ್ ಸೀತಮ್ಮ, ಬೊಟ್ಟಂಗಡ ವಿಲೀನಾ, ಬೊಟ್ಟಂಗಡ ಮಾನಸ, ಬೊಟ್ಟಂಗಡ ಪುಷ್ಪ, ಕುಮಾರಿ ಬೊಟ್ಟಂಗಡ ವಂಶಿಕ, ಬೊಟ್ಟಂಗಡ ವಂಶಿಕ, ಬೊಟ್ಟಂಗಡ ವಂಶಿಕ, ಬೊಜ್ಜಂಗಡ ಚಂಪಾ, ಅರೆಯಡ ಸವಿ, ಬೊಟ್ಟಂಗಡ ದೀಪಿಕಾ, ಕುಮಾರಿ ಬೊಜ್ಜಂಗಡ ಆಂಚಲ್, ಬಲ್ಯಮೀದೇರಿರ ಆಶಾ, ಕಲಿಯಂಡ ಪ್ರಕಾಶ್ ಮತ್ತಿತರರು ಪುತ್ತರಿ ನಮ್ಮೆಯಲ್ಲಿ ಪಾಲ್ಗೊಂಡಿದ್ದರು.