ಜಿಲ್ಲೆ

ಸಂಭ್ರಮದ ಜಾತ್ರಾ ಮಹೋತ್ಸವಕ್ಕೆ ಚಾಲನೆ

ರಾಣೆಬೆನ್ನೂರ: ಹೂವಿನ ಹರಕೆಯ ಗಂಗಾಜಲ ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವದ ನಿಮಿತ್ತ ಸೋಮವಾರ ಚೌಡೇಶ್ವರಿ ದೇವಿಯ ಉತ್ಸವ ಮೂರ್ತಿಯ ಮೆರವಣಿಗೆ ಸಕಲ ವಾದ್ಯ ವೈಭವಗಳೊಂದಿಗೆ ಸಂಭ್ರಮದಿಂದ ಸೋಮವಾರ ನಡೆಯಿತು.

ನಗರದ ತಳವಾರ ಓಣಿಯಲ್ಲಿರುವ ಮೂಲ ದೇವಸ್ಥಾನ ಎದುರು ತೋಟಗಾರಿಕೆ ಸಚಿವ ಆರ್. ಶಂಕರ ಹಾಗೂ ಶಾಸಕ ಅರುಣಕುಮಾರ ಪೂಜಾರ ದೇವಿಯ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಅಲ್ಲಿಂದ ಹೊರಟ ಉತ್ಸವ ಮೂರ್ತಿ ಮೆರವಣಿಗೆ ದೊಡ್ಡಪೇಟೆ, ಕುರುಬಗೇರಿ, ಹರಳಯ್ಯ ನಗರದ, ಬಸವನಗುಡಿ ರಸ್ತೆ ಸೇರಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮೆರವಣಿಗೆಯಲ್ಲಿ ಭಕ್ತರು ಸುಮಾರು 2 ಗಂಟೆಗಳ ಕಾಲ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಡೊಳ್ಳು ಕುಣಿತ, ವೀರಗಾಸೆ, ಮಹಿಳೆಯರ ಡೊಳ್ಳು ಕುಣಿತ, ಜಾಂಜ್ ಮೇಳ ಮೆರವಣಿಗೆಯಲ್ಲಿ ನೆರೆದವರನ್ನು ರಂಜಿಸಿದವು.

ಉತ್ಸವದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾದರು. ಹಿಂದು, ಮುಸ್ಲಿಂ ಎಂಬ ಭೇದಭಾವವಿಲ್ಲದೇ ನಗರದ ಎಲ್ಲ ಸಾರ್ವಜನಿಕರು ಗ್ರಾಮ ದೇವತೆಯ ಜಾತ್ರೆಯಲ್ಲಿ ಭಾಗಿಯಾಗಿ ಭಕ್ತಿಭಾವ ಮೆರೆದರು. ಜಾತ್ರೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಮುಂಜಾಗ್ರತೆ ಕ್ರಮವಾಗಿ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಒದಗಿಸಿತ್ತು. ಒಟ್ಟಾರೆ 5 ದಿನಗಳ ಕಾಲ ನಡೆಯುವ ಜಾತ್ರೆ ಸಂಭ್ರಮದಿಂದ ಆರಂಭವಾಗಿದ್ದು, ಮಂಗಳವಾರ ಬೆಳಗ್ಗೆ ಮೆಡ್ಲೇರಿ ರಸ್ತೆಯಲ್ಲಿರುವ ಗಂಗಾಜಲ ದೇವಸ್ಥಾನದಲ್ಲಿ ಮೂರ್ತಿ ಪ್ರತಿಷ್ಠಾಪಿಸಿ ಧಾರ್ವಿುಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುವುದು.

ಸಡಗರದ ತುಂಗಾಜಲ ಚೌಡೇಶ್ವರಿ ಮೆರವಣಿಗೆ: ಇಲ್ಲಿಯ ಮಾರುತಿ ನಗರದ ತುಂಗಾಜಲ ಚೌಡೇಶ್ವರಿ ದೇವಿಯ ಉತ್ಸವ ಮೂರ್ತಿ ಮೆರವಣಿಗೆ ಸೋಮವಾರ ಬೆಳಗ್ಗೆ ನಗರದಲ್ಲಿ ಸಂಭ್ರಮದಿಂದ ನಡೆಯಿತು. ಮಾರುತಿ ನಗರದ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆ ಮಿನಿ ವಿಧಾನಸೌಧ, ಸಿದ್ದೇಶ್ವರ ನಗರ ಸೇರಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಶಾಸಕ ಅರುಣಕುಮಾರ ಪೂಜಾರ ಚಾಲನೆ ನೀಡಿದರು. ಜಿಪಂ ಸದಸ್ಯೆ ಮಂಗಳಗೌರಿ ಪೂಜಾರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ ಇದ್ದರು.