ಜಿಲ್ಲೆ

ಸಂಭ್ರಮಕ್ಕೆ ಸಾಕ್ಷಿಯಾದ ಜಿಲ್ಲೆಯ ಜ್ಞಾನದೇಗುಲಗಳು

ಚಿತ್ರದುರ್ಗ: ಜಿಲ್ಲೆಯ ಸರ್ಕಾರಿ, ಅನುದಾನಿತ, ಅನುದಾನ ರಹಿತ ಸೇರಿ ಅನೇಕ ಶಾಲೆಗಳು ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದವು. ಅಕ್ಕರೆಯ ಮುದ್ದು ಮಕ್ಕಳನ್ನು ಭವ್ಯವಾಗಿ ಸ್ವಾಗತಿಸಲು ಆಯಾ ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರು ತಡೆಗೋಡೆ ಬಳಿ ಸನ್ನಧರಾಗಿ ನಿಂತಿದ್ದರು. ಪುಷ್ಪ ಮಳೆಗೈದು ವಿದ್ಯಾರ್ಥಿ ಸಮೂಹವನ್ನು ಆವರಣದೊಳಗೆ ಬರಮಾಡಿಕೊಂಡಾಗ ಸಂತಸಕ್ಕೆ ಪಾರವೇ ಇರಲಿಲ್ಲ..

ಜಿಲ್ಲಾದ್ಯಂತ ಗುರುವಾರ ಅದ್ದೂರಿಯಾಗಿ ಆರಂಭವಾದ ಶಾಲೆಗಳಿಗೆ ಪುಟಾಣಿಗಳು, ವಿದ್ಯಾರ್ಥಿಗಳು ಹೆಗಲ ಮೇಲೆ ಚೀಲ (ಬ್ಯಾಗ್) ಏರಿಕೊಂಡು ಮೊದಲ ದಿನ ತಂದೆ-ತಾಯಿ, ಅಜ್ಜ-ಅಜ್ಜಿ, ಪಾಲಕರ ಜತೆಗೆ ಬಂದಾಗ ಕಂಡ ದೃಶ್ಯವಿದು.

ಮೊದಲನೇ ಬಾರಿ ಶಾಲೆಯೊಳಗೆ ಪ್ರವೇಶಿಸಿದ ಅನೇಕ ಕಂದಮ್ಮಗಳು ಸಂತಸದಿಂದ ಇದ್ದರೆ, ಇನ್ನೂ ಕೆಲವರು ಅಳುತ್ತಿದ್ದರು. ಅಂತಹ ಮಗುವನ್ನು ತಾಯಿ ಮಾದರಿಯಲ್ಲಿ ಸಂತೈಸಲು ಶಿಕ್ಷಕಿಯರು ಹರಸಾಹಸಪಡಬೇಕಾಯಿತು.

ಮೂರ‌್ನಾಲ್ಕು ದಿನಗಳಿಂದಲೂ ಶಾಲೆಗಳ ಸ್ವಚ್ಛತೆಯಲ್ಲಿ ತೊಡಗಿದ್ದ ಸಿಬ್ಬಂದಿ ತಳಿರು, ತೋರಣ, ಪುಷ್ಪಗಳಿಂದ ಅತ್ಯಾಕರ್ಷವಾಗಿ ವಿದ್ಯಾರ್ಥಿಗಳ ಗಮನ ಸೆಳೆಯುವಂತೆ ಅಲಂಕರಿಸಿ ಆರಂಭೋತ್ಸವ ಕಾರ್ಯಕ್ಕೆ ಸಾಥ್ ನೀಡುತ್ತಿದ್ದ ದೃಶ್ಯ ಮುಂಜಾನೆ ಅನೇಕ ಶಾಲೆಗಳ ಬಳಿ ಕಂಡುಬಂದಿತು.

ನಗರ, ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲೂ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲು ಸ್ವಾಗತ ಕಮಾನು ಹಾಕಲಾಗಿತ್ತು. ಗ್ರಾಮೀಣ ಸೊಗಡಿನ ಎತ್ತಿನ ಗಾಡಿಗಳಿಂದಲೂ ಮೆರವಣಿಗೆ ನಡೆಸಿ ಮಕ್ಕಳನ್ನು ಅಧಿಕಾರಿಗಳು ಕೆಲವೆಡೆ ಕರೆತಂದರು.

ಜಿಲೇಬಿ, ಮೈಸೂರ್ ಪಾಕ್ ಸೇರಿ ಇತರೆ ಸಿಹಿ ಹಂಚುವ, ಕೈಗಳಿಗೆ ಗುಲಾಬಿ ಮತ್ತು ಬಟನ್ಸ್ ಹೂ, ಬಲೂನ್‌ಗಳನ್ನು ನೀಡಿ ಶಾಲೆಗಳ ಕುರಿತು ಇನ್ನಷ್ಟು ಒಲವು ಮೂಡುವಂತೆ ಮಾಡಿದ್ದು, ವಿಶೇಷವಾಗಿತ್ತು. ಮಧ್ಯಾಹ್ನದ ಬಿಸಿಯೂಟದ ಜತೆ ಪಾಯಸ ನಾಲಿಗೆಯ ರುಚಿಯನ್ನು ಹೆಚ್ಚಿಸಿತು. ಇದೇ ವೇಳೆ 2025-26ನೇ ಸಾಲಿಗೆ ಮಕ್ಕಳನ್ನು ದಾಖಲಿಸಿಕೊಳ್ಳುವ ಪ್ರಕ್ರಿಯೆಗೂ ಚಾಲನೆ ದೊರೆಯಿತು. ಮಕ್ಕಳಿಗೆ ಪಠ್ಯಪುಸ್ತಕ ವಿತರಿಸಲಾಯಿತು.

ಗಮನಸೆಳೆದ ಶಾಲೆಗಳು: ಕೋಟೆನಗರಿಯ ಸರ್ಕಾರಿ ಶಾಲೆಗಳು ಮಾತ್ರವಲ್ಲದೆ, ಹಲವು ಖಾಸಗಿ ಶಾಲೆಗಳಲ್ಲೂ ಸಂಭ್ರಮ ಜೋರಾಗಿತ್ತು. ವಿದ್ಯಾರ್ಥಿಗಳಷ್ಟೇ ಅಲ್ಲ, ದಾರಿಹೋಕರ ಗಮನ ಸೆಳೆಯುವಲ್ಲೂ ಸಫಲವಾಯಿತು. ಶುಭ ಸಮಾರಂಭಗಳ ಮಾದರಿಯಲ್ಲೇ ಸ್ವಾಗತ ಕಮಾನು ನಿರ್ಮಿಸಲಾಗಿತ್ತು. ಪ್ರೀತಿಯ ಸ್ವಾಗತ ಎಂಬ ಫಲಕ ಕಣ್ಣಿಗೆ ರಾಚುತ್ತಿತ್ತು.

ಶಾಲೋತ್ಸವದಲ್ಲಿ ಅರಳಿದ ಮಂದಹಾಸ: ಸತತ ಎರಡು ತಿಂಗಳ ರಜೆಯ ಮಜಾ ದಿನಗಳನ್ನು ಸಂತೋಷದಿಂದಲೇ ಕಳೆದ ವಿದ್ಯಾರ್ಥಿ ಸಮೂಹ ಶಾಲೆಗಳಿಗೆ ಬರುವಲ್ಲೂ ಉತ್ಸಾಹ ತೋರಿದ್ದು, ತಮ್ಮ ಶೈಕ್ಷಣಿಕ ಬೆಳವಣಿಗೆಯ ಆಸಕ್ತಿಯನ್ನು ಪ್ರದರ್ಶಿಸಿದಂತ್ತಿತ್ತು. ಜ್ಞಾನದೇಗುಲಗಳ ಮೆಟ್ಟಿಲೇರುವಾಗ ಪ್ರತಿಯೊಬ್ಬರ ಮೊಗದಲ್ಲೂ ಮಂದಹಾಸ ಅರಳಿತ್ತು.