ಜಿಲ್ಲೆ

ಸಂಬಳದಲ್ಲಿ ಸ್ಮಾರ್ಟ್​ಕ್ಲಾಸ್​ ಮಾಡಿದ ಸರ್ಕಾರಿ ಶಾಲೆ ಶಿಕ್ಷಕ

ಮಲ್ಲಪ್ಪ ಗೌಡ ಔರಾದ್

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಸರ್ಕಾರಿ ಶಾಲೆ ಶಿಕ್ಷಕರೊಬ್ಬರು ತನ್ನ ಸಂಬಳದಲ್ಲೇ ಸ್ಮಾರ್ಟ್​ಕ್ಲಾಸ್ ಮಾಡಿ ಗಮನ ಸೆಳೆದಿದ್ದಾರೆ.

ಖಾಸಗಿ ಪಬ್ಲಿಕ್ ಶಾಲೆಗಳಿಗೆ ಪೈಪೋಟಿ ನೀಡಬೇಕು ಎಂಬ ಮಹತ್ತರ ಕನಸು ಕಟ್ಟಿಕೊಂಡಿರುವ ಶಿಕ್ಷಕ ಮುತ್ತಣ್ಣ ರಂಡ್ಯಾಳೆ ಅವರು ಸೇವೆ ಸಲ್ಲಿಸುವ ಸರ್ಕಾರಿ ಶಾಲೆಯನ್ನೇ ಸ್ಮಾರ್ಟ್ ಆಗಿಸಿದ್ದಾರೆ. ಇದರಿಂದ ಬೋರ್ಗಿ(ಜೆ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೋಧನೆ-ಕಲಿಕೆಗೆ ಹೈಟೆಕ್ ಸ್ಪರ್ಶ ನೀಡಿದಂತಾಗಿದೆ.

ಆರು ವರ್ಷದಿಂದ ಬೋರ್ಗಿ (ಜೆ) ಶಾಲೆಯಲ್ಲಿ ಸಹಶಿಕ್ಷಕರಾಗಿರುವ ಮುತ್ತಣ್ಣ, ತನ್ನ ಎರಡು ತಿಂಗಳ ಸಂಬಳದ 59,600 ಸಾವಿರ ರೂ. ಸ್ಮಾರ್ಟ್ ಕ್ಲಾಸ್​ಗಾಗಿ ನೀಡಿದ್ದಾರೆ. ಈ ಹಣದಲ್ಲಿ ಪ್ರೊಜೆಕ್ಟರ್, ಸ್ಕ್ರೀನ್ ಇತರ ಉಪಕರಣ ತಂದು ತರಗತಿಗೆ ಹೊಸ ರೂಪ ನೀಡಿದ್ದಾರೆ. ಕಳೆದ ಜ.12ರಂದು ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಸ್ಮಾರ್ಟ್ ಕ್ಲಾಸ್​ಗೆ ಚಾಲನೆ ನೀಡಲಾಗಿದೆ. ಪಠ್ಯಪುಸ್ತಕಗಳಿಗೆ ಪೂರಕವಾದ ವಿಷಯಗಳ ಬಗ್ಗೆ ಮಕ್ಕಳಿಗೆ ಯೂಟ್ಯೂಬ್ನಲ್ಲಿ ತೋರಿಸಿ ಪಾಠ ಮಾಡುತ್ತಿದ್ದಾರೆ. 1ರಿಂದ 8ನೇ ತರಗತಿಯ 112 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ.

ಮಕ್ಕಳಿಗೆ ಓದಿ ಬರೆಯುವ ಅಥವಾ ಶಿಕ್ಷಕರು ಬಾಯಿಯಿಂದ ಮಾಡುವ ಪಾಠಕ್ಕಿಂತ ಹೆಚ್ಚಿನ ಪರಿಣಾಮ ಈ ಸ್ಮಾರ್ಟ್ ಕ್ಲಾಸ್​ನಿಂದ ಆಗುತ್ತಿದೆ. ಶಾಲೆಯಲ್ಲಿ ಬರೀ ಪುಸ್ತಕ ಹಿಡಿದು ಪಾಠ ಮಾಡಲ್ಲ. ಅಂತಜರ್ಾಲ ಮೂಲಕ ಪಠ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಸ್ಕ್ರೀನ್ ಮೇಲೆ ತೋರಿಸಿ ಬೋಧನೆ ಮಾಡಲಾಗುತ್ತಿದೆ. ಮಕ್ಕಳು ಸಹ ಉತ್ಸಾಹದಿಂದ ಕಲಿಯುತ್ತಿದ್ದಾರೆ. ಪ್ರೊಜೆಕ್ಟರ್ ಮೂಲಕ ಡಿಎಸ್ಇಆರ್​ಟಿ ಮತ್ತು ಪಿಪಿಟಿ ಮಾಡಿ ಮಕ್ಕಳಿಗೆ ಸಿರಿಗನ್ನಡ, ಸಮಾಜ ವಿಜ್ಞಾನ, ಇಂಗ್ಲಿಷ್ ಸ್ಪೀಕಿಂಗ್, ಸಾಮಾನ್ಯ ಜ್ಞಾನ, ವ್ಯಕ್ತಿತ್ವ ವಿಕಸನ, ಯೋಗ, ಪರಿಸರ ಸಂರಕ್ಷಣೆಯಂಥ ವಿಷಯಗಳನ್ನು ಕಲಿಸಲಾಗುತ್ತಿದೆ. ಶಿಕ್ಷಕ ಮುತ್ತಣ್ಣ ರಂಡ್ಯಾಳೆ ಅವರ ವಿನೂತನ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆಯೂ ವ್ಯಕ್ತವಾಗುತ್ತಿದೆ.

ಭಾಷಾ ಪ್ರಯೋಗಾಲಯಕ್ಕೆ ನೆರವಾಗಿ: ನಮ್ಮ ಶಾಲೆಯಲ್ಲಿ ಇಂಗ್ಲಿಷ್ ಲರ್ನಿಂಗ್ ಕಾರ್ನರ್ (ಭಾಷಾ ಪ್ರಯೋಗಾಲಯ) ಆರಂಭಿಸಬೇಕು ಎಂಬುದು ನನ್ನ ಇನ್ನೊಂದು ಆಶಯ. ಇದಕ್ಕೆ ಶಾಲೆ ಹಳೆಯ ವಿದ್ಯಾರ್ಥಿಗಳು ಹಾಗೂ ದಾನಿಗಳು ಸಹಕಾರ ನೀಡಬೇಕಿದೆ. ಸರ್ಕಾರಿ ಶಿಕ್ಷಕ ಎಂಬುದು ನನಗೆ ಹೆಮ್ಮೆ. ಕೈಲಾದಷ್ಟು ಹೆಚ್ಚಿನ ಕಾರ್ಯಗಳನ್ನು ಮಾಡುತ್ತೇನೆ. ಮುಖ್ಯಗುರು ಇತರ ಸಹಶಿಕ್ಷಕರ ಸಹಕಾರ, ಪ್ರೇರಣೆಯಿಂದ ಶೈಕ್ಷಣಿಕ ಅಭಿವೃದ್ಧಿ ಪ್ರಯತ್ನಿಸಲಾಗುತ್ತಿದೆ ಎನ್ನುತ್ತಾರೆ ಮುತ್ತಣ್ಣ ರಂಡ್ಯಾಳೆ.