ಹುಬ್ಬಳ್ಳಿ: 6 ಜನ ಕರೊನಾ ಪಾಸಿಟಿವ್ನ ಹೊಂದಿರುವ ಹುಬ್ಬಳ್ಳಿಯಲ್ಲಿ ಸೀಲ್ಡೌನ್ ಹಾಗೂ ಲಾಕ್ಡೌನ್ ಜಾರಿಯಲ್ಲಿದೆಯೇ?
ಶನಿವಾರದಂದು ನಗರದ ಬಹುತೇಕ ಪ್ರದೇಶಗಳಲ್ಲಿ ಕಂಡುಬಂದ ವಾಹನ ಹಾಗೂ ಜನ ಸಂಚಾರ ಗಮನಿಸಿದಾಗ ಇಂತಹದೊಂದು ಸಂಶಯ ಸುಳಿಯಿತು.
ಹಳೇ ಹುಬ್ಬಳ್ಳಿಯಲ್ಲಂತೂ ಲಾಕ್ಡೌನ್ ಮೊದಲು ಇದ್ದಂತಹ ಸಾಮಾನ್ಯ ಸ್ಥಿತಿ ಕಂಡುಬಂದಿದೆ. ಕರೊನಾ ಸೋಂಕು ಹರಡದಂತೆ ತಡೆಯಲು ಜಿಲ್ಲಾಡಳಿತ ಹುಬ್ಬಳ್ಳಿಯ 3 ಪ್ರದೇಶದಲ್ಲಿ ಸೀಲ್ಡೌನ್ ಎಂದು ಘೋಷಿಸಿ, ನಗರದ ಅರ್ಧಕ್ಕಿಂತಲೂ ಹೆಚ್ಚು ಪ್ರದೇಶವನ್ನು ಕಂಟೈನ್ಮೆಂಟ್ ಏರಿಯಾ ಎಂದು ಗುರುತಿಸಿದೆ. ಆದರೆ, ಹಲವರು ಮನಬಂದಂತೆ ಸುತ್ತಾಡುತ್ತಿದ್ದಾರೆ.
ಬಹುತೇಕ ಪ್ರದೇಶಗಳಲ್ಲಿ ಬೈಕ್, ಆಟೋ, ಕಾರುಗಳು ಮನಬಂದಂತೆ ತಿರುಗುತ್ತಿದ್ದವು. ಅರವಿಂದ ನಗರ, ಕಾರವಾರ ರಸ್ತೆ, ಇಂಡಿಪಂಪ್ ವೃತ್ತಗಳಲ್ಲಿ ವಾಹನ ದಟ್ಟಣೆ ಹೆಚ್ಚಿತ್ತು. ಜನರು ಗುಂಪಾಗಿ ರಸ್ತೆ ಬದಿ ಹಣ್ಣು, ತರಕಾರಿ ಖರೀದಿಸುತ್ತಿದ್ದರು. ಸಾಮಾಜಿಕ ಅಂತರದ ಅರ್ಥ ಮತ್ತು ಅಗತ್ಯವನ್ನು ಬುದ್ಧಿಪೂರ್ವಕವಾಗಿ ಮರೆತಿದ್ದರು!
ಅನಗತ್ಯವಾಗಿ ತಿರುಗುವವರಿಗೆ ಅಲ್ಲಿಯೇ ಇರುವ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಭಯವೂ ಇರಲಿಲ್ಲ. ಸಂಚಾರ ಠಾಣೆ ಪೊಲೀಸರು ಸಹ ವಾಹನಗಳನ್ನು ತಡೆದು ವಿಚಾರಿಸುವ ಗೊಡವೆಗೆ ಅಷ್ಟಾಗಿ ಹೋಗಲಿಲ್ಲ.
ಚನ್ನಮ್ಮ ವೃತ್ತ, ವಿದ್ಯಾನಗರ, ಸವೋದಯ ವೃತ್ತ, ಲ್ಯಾಮಿಂಗ್ಟನ್ ರಸ್ತೆ, ಸ್ಟೇಶನ್ ರಸ್ತೆಗಳಲ್ಲಿಯೂ ವಾಹನ ಹಾಗೂ ಜನರು ಮನಬಂದಂತೆ ಸುತ್ತಾಡುತ್ತಿರುವುದು ಕಾಣಿಸಿತು. ಸವೋದಯ ವೃತ್ತದಲ್ಲಿ ಸಂಚಾರ ಠಾಣೆ ಪೊಲೀಸರು ವಾಹನಗಳನ್ನು ತಡೆದು, ವಿಚಾರಿಸುತ್ತಿದ್ದರು.
ಪೊಲೀಸರು ಯಾವಾಗ ಬಿಗಿ ಮಾಡುತ್ತಾರೆ, ಯಾವಾಗ ಸಡಿಲ ಬಿಡುತ್ತಾರೆ ಎನ್ನುವುದಕ್ಕೆ ನಿರ್ದಿಷ್ಟ ನಿಯಮ ಇರಲಿಲ್ಲ. ಹೀಗಾಗಿ, ಪ್ರಮುಖ ವೃತ್ತಗಳಿಗಿಂತ ತುಸು ದೂರದಿಂದಲೇ ನೋಡಿ, ಪೊಲೀಸರ ಮನಸ್ಥಿತಿ ಅರಿತು ಬೈಕ್ ಓಡಿಸಿಕೊಂಡು ಹೋಗುವ ಚತುರತೆಯನ್ನು ಕೆಲವರು ಬೆಳೆಸಿಕೊಂಡಿರುವುದು ಕಂಡುಬಂತು.