ಮೈಸೂರು: ಹೇರಲ್ಪಟ್ಟ ಇತಿಹಾಸದಿಂದ ದೇಶದ ಜನರು ಹೊರ ಬರಲು ಕೇವಲ ರಾಜಕೀಯ ಅಧಿಕಾರದಿಂದ ಮಾತ್ರ ಸಾಧ್ಯವಿಲ್ಲ, ಇದಕ್ಕೆ ಕಾಯ್ದೆ ಗಳಲ್ಲಿ ಬದಲಾವಣೆ ತರುವ ಅವಶ್ಯಕತೆ ಇದೆ ಎಂದು ಲೇಖಕ ಜೆ.ಸಾಯಿ ದೀಪಕ್ ಹೇಳಿದರು.
ನಗರದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯಾರ್ ಪ್ರತಿಷ್ಠಾನ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ತಾವು ರಚಿಸಿದ ‘ಇಂಡಿಯಾ, ಭಾರತ್ ಮತ್ತು ಪಾಕಿಸ್ತಾನ್’ ಕೃತಿ ಕುರಿತು ಮಾತನಾಡಿ ದರು.
ಹೇರಲ್ಪಟ್ಟ ಇತಿಹಾಸದಿಂದ ನಮಗೆ ವಿಮೋಚನೆ ನೀಡಲು ಕೇಂದ್ರ ಸರ್ಕಾರ ಪ್ರಯತ್ನಿಸಬೇಕು. ಆದರೆ, 9 ವರ್ಷಗಳಾದರೂ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ನಿರೀಕ್ಷಿತ ಗುರಿ ಸಾಧಿಸಲು ವಿಫಲವಾಗಿದೆ. ಕೇಂದ್ರ ಸರ್ಕಾರ ಜನರ ಉತ್ಸಾಹವನ್ನು ಮಾತ್ರ ಪೊಷಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಪ್ರದಾಯವಾದಿಗಳೇ ದೇಶದ ಸಂಸ್ಕೃತಿಯ ರಕ್ಷಕರಾಗಿದ್ದಾರೆ. ಆದರೆ, ಸಂಪ್ರದಾಯವಾದಿಗಳ ಮೇಲೆ ಆಕ್ರಮಣ ನಡೆಯುತ್ತಿದೆ. ದೇಶದ ಇತಿಹಾಸದ ಮೌಲ್ಯಗಳನ್ನು ಸಂಪ್ರದಾಯವಾದಿಗಳು ರಕ್ಷಿಸುತ್ತಿದ್ದಾರೆ. ಅದರಲ್ಲಿ ನಾನು ಕೂಡ ಒಬ್ಬ ಎಂಬುದು ನನಗೆ ಹೆಮ್ಮೆಯ ವಿಚಾರ. ಕೆಲವರು ದೇವಸ್ಥಾನಗಳನ್ನೇ ಗುರಿಯಾಗಿಸಿಕೊಂಡು ಟೀಕಿಸುತ್ತಿದ್ದು, ದೇವರಿಗೆ ಉಸಿರಾಡಲು ಅವಕಾಶ ನೀಡದ ವಾತಾವರಣ ನಿರ್ಮಿಸುತ್ತಿದ್ದಾರೆ. ಇದಕ್ಕೆ ಶಬರಿಮಲೆ ಪ್ರಕರಣ ಉದಾಹರಣೆಯಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮೈಸೂರು ರಾಜಮನೆತನದ ಪ್ರಮೋದಾದೇವಿ ಒಡೆಯರ್ ಇದ್ದರು.