ಬಾಗಲಕೋಟೆ: ಸರಕಾರ ಜಾರಿಗೆ ತಂದ ಯೋಜನೆಗಳನ್ನು ಸಮರ್ಪಕ ಅನುಷ್ಠಾನಗೊಳಿಸಿ ಸಾಕ್ಷರತೆಯನ್ನು ಗರಿಷ್ಟ ಮಟ್ಟದಲ್ಲಿ ಹೆಚ್ಚಿಸುವ ಮೂಲಕ ಬಾಗಲಕೋಟೆಯನ್ನು ಸಂಪೂರ್ಣ ಸಾಕ್ಷರತಾ ಜಿಲ್ಲೆಯನ್ನಾಗಿಸುವಂತೆ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಉಲ್ಲಾಸ-ನವ ಸಾಕ್ಷರತ ಕಾರ್ಯಕ್ರಮ ಅನುಷ್ಠಾನ ಕುರಿತು ಜಿಲ್ಲಾ ಮಟ್ಟದ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಾಕ್ಷರತೆ ಕೇವಲ ಓದುವುದು, ಬರೆಯುವುದು ಮತ್ತು ಸಂಖ್ಯಾಶಾಸ್ತçವಲ್ಲ. ವೃತ್ತಿಪರ ಕೌಶಲ್ಯ, ಡಿಜಿಟಲ್ ಸಾಕ್ಷರತೆ, ಕಾನೂನು ಸಾಕ್ಷರತೆ, ದೈನಂದಿನ ಜೀವನ ಕೌಶಲ್ಯಗಳನ್ನು ತಿಳಿಸುವುದು ನವಸಾಕ್ಷರತ ಕಾರ್ಯಕ್ರಮದ ಉದ್ದೇಶವಾಗಿದೆ. ಈ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು.
ಸಾಕ್ಷರತೆಯನ್ನು ಶೇ.೧೦೦ ರಷ್ಟು ಸಾಧಿಸಲು ಸರಕಾರ ವಿವಿಧ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ವಿವಿಧ ಕಾರ್ಯಕ್ರಮಗಳಡಿ ನೀಡಿರುವ ಗುರಿಯನ್ನು ಸಾಧಿಸಲು ಅಧಿಕಾರಿಗಳು ಸಕ್ರಿಯವಾಗಿ ಪ್ರಯತ್ನಿಸಬೇಕಿದೆ. ಜಿಲ್ಲೆಯಲ್ಲಿರುವ ಅನಕ್ಷರಸ್ಥರನ್ನು ಗುರುತಿಸಿ ಅಕ್ಷರಸ್ಥರನ್ನಾಗಿ ಮಾಡಬೇಕು. ವಯಸ್ಸು ಹೆಚ್ಚಾದ ವಯಸ್ಕರು, ಮದುವೆ, ಮಕ್ಕಳಾದ ವಯಸ್ಕ ಹೆಣ್ಣು ಮಕ್ಕಳು, ಶ್ರೀಮಂತರಾದರೂ ಓದು, ಬರಹ ಬರದೇ ಇದ್ದವರಿಗೆ ಹಿಂದೆ ಕಲಿತ ನವಸಾಕ್ಷರರ ಉದಾಹರಣೆಗಳೊಂದಿಗೆ ಕಲಿಕೆಗೆ ಪ್ರೋತ್ಸಾಹಿಸುವ ಕಾರ್ಯವಾಗಬೇಕು ಎಂದರು.
ಸಾಮಾಜಿ ಚೇತನ ಕೇಂದ್ರಗಳ ಕುರಿತಾಗಿ ಅನಕ್ಷರಸ್ಥರಿಗೆ ಡಿಜಿಟಲ್ ಸಾಕ್ಷರತೆಯನ್ನು ನೀಡಲಾಗುತ್ತಿದೆ ಎಂದು ಸಭೆಗೆ ತಿಳಿಸಿದಾಗ ಜಿಲ್ಲೆಯ ಯಾವ ತಾಲೂಕಿನಲ್ಲಿ ಚೇತನ ಕೇಂದ್ರಗಳನ್ನು ತೆರೆಯಲಾಗಿದೆ. ಅದರ ಉದ್ದೇಶಗಳೇನು, ಎಷ್ಟು ಗಂಟೆಗಳ ವರೆಗೆ ಕಾರ್ಯನಿರ್ವಹಿಸುತ್ತವೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಈ ಬಗ್ಗೆ ಮಾಹಿತಿ ಪಡೆದುಕೊಂಡ ಜಿಲ್ಲಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಮತ್ತು ಸಮಾಜ ಕಲ್ಯಾಣ ಇಲಾಖೆಗಳನ್ನು ಜೋಡಿಸಿಕೊಳ್ಳಲು ತಿಳಿಸಿದರು. ಬಿಇಡಿ ಮತ್ತು ಪದವಿ ವಿದ್ಯಾರ್ಥಿಗಳಿಂದ ಸಾಕ್ಷರತೆಯ ಕಾರ್ಯವನ್ನು ಕೈಗೊಳ್ಳುವಂತೆ ತಿಳಿಸಿದರು.
ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ವಿರೇಶ ಜೇವರಗಿ ಮಾತನಾಡಿ ಸಮುದಾಯದಲ್ಲಿ ಸಾಕ್ಷರತೆಯ ಅರಿವು ಮೂಡಿಸಲು ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪದವಿ ಕಾಲೇಜ ಹಾಗೂ ಶಿಕ್ಷಣ ಮಹಾವಿದ್ಯಾಲಯಗಳ ಪ್ರಶಿಕ್ಷಣಾರ್ಥಿಗಳನ್ನು ಸ್ವಯಂ ಸೇವಕ ಬೋಧಕರನ್ನಾಗಿ ಮಾಡಿ ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡಲು ಕ್ರಮಕೈಗೊಳ್ಳಲಾಗುತ್ತಿದೆ. ಲಿಂಕ್ ಡಾಕುಮೆಂಟ್ ಪ್ರಕಾರ ೩೫೦೦ ಅನಕ್ಷರಸ್ಥರನ್ನು ಸಾಕ್ಷರನ್ನಾಗಿಸುವುದು, ೧೦೦೦ ಗ್ರಾಮ ಪಂಚಾಯತಿಗಳಲ್ಲಿ ಸಂಪೂರ್ಣ ಸಾಕ್ಷರತೆ ಹಾಗೂ ಉಲ್ಲಾಸ ನವಭಾರತ ಸಾಕ್ಷರತಾ ಕಾರ್ಯಕ್ರಮಗಳ ಮೂಲಕ ಸಾಕ್ಷರರನ್ನಾಗಿ ಮಾಡಲಾಗುತ್ತಿದೆ ಎಂದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕಿ ಅಕ್ಕಮಹಾದೇವಿ ಕೆ.ಎಚ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ನಂದಾ ಹಣಮರಟ್ಟಿ, ಕಾರ್ಯಕ್ರಮ ಸಹಾಯಕಿ ಸಾವಿತ್ರಿ ಕಲಬುರ್ಗಿ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕಿನ ಕ್ಷೇತ್ರ ಸಮನ್ವಯಾಧಿಕಾರಿಗಳು, ಬಿ.ಆರ್.ಸಿ ಸಂಯೋಜಕರು ಉಪಸ್ಥಿತರಿದ್ದರು.