ಜಿಲ್ಲೆ

ಸಂಪುಟದಿಂದ ಪ್ರಭು ಚೌಹಾಣ್ ವಜಾಕ್ಕೆ ಪಟ್ಟು, ನೆಲಮಂಗಲ ತಾಲೂಕು ಮಾದಿಗ ಮಹಾಸಭಾ ಪ್ರತಿಭಟನೆ

ನೆಲಮಂಗಲ: ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರನ್ನು ಅವಾಚ್ಯವಾಗಿ ನಿಂದಿಸಿರುವ ಪಶು ಸಂಗೋಪನಾ ಇಲಾಖೆ ಸಚಿವ ಪ್ರಭು ಚೌಹಾಣ್ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿ ತಾಲೂಕು ಮಾದಿಗ ಮಹಾಸಭಾ ಪ್ರತಿಭಟನಾ ಮೆರವಣಿಗೆ ನಡೆಸಿತು.

ನಗರದ ಪ್ರವಾಸಿ ಮಂದಿರದ ಬಳಿ ಶುಕ್ರವಾರ ಬೆಳಗ್ಗೆ ಸಮಾವೇಶಗೊಂಡ ಮಹಾಸಭಾ ಹಾಗೂ ವಿವಿಧ ಪರಿಶಿಷ್ಟ ಜಾತಿ ಸಂಘಟನೆಗಳ ನೂರಾರು ಕಾರ್ಯಕರ್ತರು ಮುಖ್ಯರಸ್ತೆಯ ಮೂಲಕ ತಾಲೂಕು ಕಚೇರಿವರೆಗೆ ಮೆರವಣಿಗೆ ನಡೆಸಿದರು.

ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಬಿ.ಆರ್.ಭಾಸ್ಕರ್‌ಪ್ರಸಾದ್ ಮಾತನಾಡಿ, ಸದಾಶಿವ ಆಯೋಗದ ಬಗ್ಗೆ ಧ್ವನಿ ಎತ್ತಿದ ಮಾದಿಗ ಸಮುದಾಯದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ವಿರುದ್ಧ ಬಂಜಾರ, ಬೋವಿ, ಕೊರಮ, ಸಮುದಾಯವನ್ನು ಎತ್ತಿಕಟ್ಟಿರುವ ಪ್ರಭು ಚೌಹಾಣ್ ಸೆ.3ರಂದು ಕೇಂದ್ರ ಸಚಿವರ ವಿರುದ್ಧ ಪ್ರತಿಭಟನೆ ಮಾಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಮುಂದಾಗಿದ್ದಾಗಿ ತಿಳಿಸಿದರು.

ತಾಲೂಕಿನಲ್ಲಿ ಮಾದಿಗ ಸಮುದಾಯದ 45 ಸಾವಿರಕ್ಕೂ ಹೆಚ್ಚು ಜನರಿದ್ದಾರೆ. ನ್ಯಾ.ಎ.ಜೆ. ಸದಾಶಿವ ಆಯೋಗ ವರದಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ 3 ದಶಕಗಳಿಂದಲೂ ಹೋರಾಟ ಮಾಡಲಾಗುತ್ತಿದೆ. ವರದಿ ಜಾರಿ ಮಾಡುವುದಾಗಿ ಚುನಾವಣೆ ಸಂದರ್ಭದಲ್ಲಿ ಆಶ್ವಾಸನೆ ನೀಡುವ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬರುತ್ತಲೇ ಮರೆಯುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಲಿತ ಕೂಲಿಕಾರ್ಮಿಕ ಸಂಘಟನೆ ಅಧ್ಯಕ್ಷ ಬಿ. ಗಂಗಬೈಲಪ್ಪ ಮಾತನಾಡಿದರು.

ವಿಧಾನಸೌಧಕ್ಕೆ ಮುತ್ತಿಗೆ: ಕೇಂದ್ರ ಸಚಿವರನ್ನು ಅವಮಾನಿಸಿರುವ ಸಚಿವ ಪ್ರಭು ಚೌಹಾಣ್ ಅವರನ್ನು 15 ದಿನಗಳೊಳಗೆ ಸಂಪುಟದಿಂದ ವಜಾಗೊಳಿಸಬೇಕು. ಇಲ್ಲವಾದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ನೆಲಮಂಗಲ ಮಾದಿಗ ಮಹಾಸಭಾ ಅಧ್ಯಕ್ಷ ಜಿ.ಎನ್. ಕನಕರಾಜು ಎಚ್ಚರಿಕೆ ನೀಡಿದರು.

ಮಾದಿಗ ಮಹಾಸಭಾ ಪ್ರಧಾನ ಕಾರ್ಯದರ್ಶಿ ಎನ್.ಕೆ. ರಾಜು, ಸಲಹೆಗಾರ ನಾಗರಾಜು, ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕ ನಾರಾಯಣಸ್ವಾಮಿ, ಖಜಾಂಚಿ ನಾಗರಾಜು, ಕರ್ನಾಟಕ ಜನಪರ ಸಂಘಟನೆ ಅಧ್ಯಕ್ಷ ಎನ್.ಆರ್.ನಾಗರಾಜು, ಕರ್ನಾಟಕ ದಲಿತ ಸಮರ ಸೇನೆ ಅಧ್ಯಕ್ಷ ವಿ. ಶ್ರೀನಿವಾಸ್, ಗ್ರಾಪಂ ಸದಸ್ಯ ಸಿದ್ಧರಾಜು, ಮುಖಂಡರಾದ ವಕೀಲ ದೊಡ್ಡೇರಿ ಬೈಲಪ್ಪ, ದೀಪಕ್‌ಕಿರಣ್, ಬೊಮ್ಮನಹಳ್ಳಿ ನಾಗರಾಜು, ಗೋವಿಂದರಾಜು, ಪುಟ್ಟರಾಜು, ಶಶಿದಾಸ್, ಪೂಜಾ, ನಾಗರತ್ನಮ್ಮ, ಗಂಗಮ್ಮ, ಮತ್ತಿತರರು ಇದ್ದರು.