ಬೀದರ್: ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ತುಂಬುವ ಹುದ್ದೆಗಳನ್ನು ನನ್ನ ಗಮನಕ್ಕೆ ತಂದೇ ಭರ್ತಿ ಮಾಡುವಂತೆ ಫರ್ಮಾನು ಹೊರಡಿಸಿ ನಿಯಮ ಗಾಳಿಗೆ ತೂರಿರುವ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರನ್ನು ರಾಜ್ಯದ ಸಂಪುಟದಿಂದ ಕೈಬಿಡುವಂತೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಆಗ್ರಹಿಸಿದ್ದಾರೆ.
ಈ ಕುರಿತು ರಾಜ್ಯಪಾಲರು ಮತ್ತು ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿರುವ ಖೂಬಾ, ಖಂಡ್ರೆ ಅವರು ಜಿಪಂ ಸಿಇಒ ಅವರಿಗೆ ಪತ್ರ ಬರೆದು ಅಲ್ಲಿಂದ ಎಲ್ಲ ಇಲಾಖೆಗಳಿಗೆ ಪತ್ರ ರವಾನೆ ಮಾಡಿಸಿದ್ದಾರೆ. ಇವರನ್ನು ತಮ್ಮ ಸಂವಿಧಾನಿಕ ಹಕ್ಕನ್ನು ಬಳಸಿ ಕ್ರಮ ಕೈಗೊಂಡು ಸಂಪುಟದಿಂದ ಕೈಬಿಡಬೇಕೆಂದು ಒತ್ತಾಯಿಸಿದ್ದಾರೆ.
ಅಧಿಕಾರಿಗಳ ಮೇಲೆ ಖಂಡ್ರೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಸರ್ಕಾರದಲ್ಲಿ ಯಾವುದೇ ನೇಮಕಾತಿಗಳು ಪಾರದರ್ಶಕ, ನ್ಯಾಯಯುತ, ನಿಯಮಾವಳಿ, ಅರ್ಹತೆ ಮೇಲೆ ಆಯ್ಕೆ ಮಾಡುವುದು ಸರ್ಕಾರದ ನಿಯಮ. ಆದರೆ ಒಬ್ಬ ಉಸ್ತುವಾರಿ ಸಚಿವರಾಗಿ ಖಂಡ್ರೆ ಅವರು ಬಡವರಿಗೆ ಮತು ನಿಜವಾದ ಅರ್ಹರಿಗೆ ನ್ಯಾಯ ಕೊಡಿಸುವಲ್ಲಿ ವಿಫಲವಾಗಿದ್ದಾರೆ. ತಮ್ಮದೆಯಾದ ಸ್ವತಂತ್ರ ನಿಯಮ ರೂಪಿಸಿ ತಾವು ಹೇಳಿದಂತೆಯೇ ನಡೆಯಬೇಕೆಂಬ ನಿಟ್ಟಿನಲ್ಲಿ ಅಧಿಕಾರ ಚಲಾಯಿಸುತ್ತಿದ್ದಾರೆ ಎಂದು ದೂರಿದ್ದಾರೆ.
ಸಂವಿಧಾನಬದ್ಧ ಅಧಿಕಾರವನ್ನು ಯಾವುದೇ ತಾರತಮ್ಯ ಮಾಡದೆ ನಿರ್ವಹಿಸುತ್ತೇನೆಂದು ಪ್ರಮಾಣ ಮಾಡಿದ ಖಂಡ್ರೆ ಅದಕ್ಕೆ ತದ್ವಿರುದ್ಧ ನಡೆದುಕೊಂಡಿದ್ದಾರೆ. ಜಿಪಂ ಸಿಇಒ ಅವರಿಗೆ ಪತ್ರ ಬರೆದಿರುವುದು ಇವರ ದುರಾಡಳಿತಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ.
ನೇಮಕಾತಿಯನ್ನು ನನ್ನ ಗಮನಕ್ಕೆ ತಂದು ಕ್ರಮಕೈಗೊಳ್ಳಲು ಖಂಡ್ರೆ ಅವರು ತಜ್ಞರಾ ಅಥವಾ ಆಯ್ಕೆ ಸಮಿತಿ ಅಧ್ಯಕ್ಷರಾ? ರಾಜ್ಯ ಸರ್ಕಾರದ ಆಯ್ಕೆ ನಿಯಮಗಳ ಮೇಲೆ ಖಂಡ್ರೆ ಅವರಿಗೆ ನಂಬಿಕೆಯಿಲ್ಲವೆ? ಅಧಿಕಾರಿಗಳನ್ನು ಮುಂದೆ ಮಾಡಿ, ಭ್ರಷ್ಟಾಚಾರ ಮೂಲಕ ತಾವು ಹೇಳಿದವರನ್ನು ನೇಮಕ ಮಾಡುವಂಥ ಭಯದ ವಾತಾವರಣ ನಿರ್ಮಾಣ, ಹಣ ಸಂಗ್ರಹಿಸಲು ಸಂಚು ರೂಪಿಸುತ್ತಿರುವುದು ಕಂಡುಬರುತ್ತಿದೆ ಎಂದು ಖಂಡ್ರೆ ವಿರುದ್ಧ ಹರಿಹಾಯ್ದಿದ್ದಾರೆ.
ಖಂಡ್ರೆಯವರಿಗೆ ದೇಶದ ಸಂವಿಧಾನ ಹಾಗೂ ಆಡಳಿತ ಯಂತ್ರದ ಮೇಲೆ ನಂಬಿಕೆ ಇಲ್ಲ. ವಿಶೇಷವಾಗಿ ಸಕರ್ಾರಿ ನೌಕರರನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಇಂಥ ಪತ್ರ ಬರೆದು ದುಸ್ಸಾಹಸಕ್ಕೆ ಕೈಹಾಕಿರುವುದರಿಂದ ತಕ್ಷಣ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.
ದಲಿತರು, ಅಲ್ಪಸಂಖ್ಯಾತರು ಸೇರಿ ಎಲ್ಲ ವರ್ಗದವರಿಗೆ ಸಾಮಾಜಿಕ ನ್ಯಾಯ ಕೊಡುವ ನಿಟ್ಟಿನಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆದರೆ ಸಚಿವ ಈಶ್ವರ ಖಂಡ್ರೆ ಅವರು ಸರ್ಕಾರದ ನಿಯಮಾವಳಿ ಗಾಳಿಗೆ ತೂರಿ ತಮ್ಮದೆ ಸ್ವತಂತ್ರ ನಿಯಮ ರಚಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯೇ ಹಾಳು ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.