ಗಂಗಾಧರ್ ಬೈರಾಪಟ್ಟಣ ರಾಮನಗರ
ಕೇಂದ್ರ ಗೃಹ ಸಚಿವ ಅಮಿತ್ಷಾ ರಾಜ್ಯಕ್ಕೆ ಭೇಟಿ ನೀಡಿದ ಬೆನ್ನಲ್ಲೇ ಸಚಿವ ಸಂಪುಟ ಸರ್ಜರಿ ಮುನ್ನೆಲೆಗೆ ಬಂದಿದೆ. ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರಿಗೆ ಕೈತಪ್ಪಿರುವ ಅವಕಾಶ ಮತ್ತೆ ಕೈ ಸೇರಲಿದೆ ಎನ್ನುವ ವಿಚಾರ ಜಿಲ್ಲೆಯ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿವೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಂತ್ರಿ ಮಂಡಲದಲ್ಲಿ ಸಚಿವರಾಗಿದ್ದ ಯೋಗೇಶ್ವರ್, ನಂತರ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ನಿರಂತರ ಯತ್ನ ನಡೆಸುತ್ತಲೇ ಇದ್ದಾರೆ. ಆದರೆ ಇದುವರೆಗೂ ಮಂತ್ರಿ ಸ್ಥಾನ ಕೊಡುವ ನಿಟ್ಟಿನಲ್ಲಿ ಆಶಾದಾಯಕ ಬೆಳವಣಿಗೆಗಳು ನಡೆದಿರಲಿಲ್ಲ. ಇದೀಗ ಕೇಂದ್ರ ಗೃಹ ಸಚಿವ ಅಮಿತ್ಷಾ ತುಮಕೂರಿಗೆ ಬಂದಿದ್ದ ವೇಳೆ ಅವರನ್ನು ಭೇಟಿ ಮಾಡಿದ್ದ ಯೋಗೇಶ್ವರ್ ಅವರಿಗೆ ಮಂತ್ರಿ ಸ್ಥಾನದ ಭರವಸೆ ದೊರೆತಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.
ಹಳೇ ಮೈಸೂರಿಗೆ ಯಾರು?: ಬೆಂಗಳೂರಿನಲ್ಲಿ ಕೋರ್ ಕಮಿಟಿ ಸಭೆ ನಡೆಸಿದ್ದ ಅಮಿತ್ಷಾ, ಹಳೇ ಮೈಸೂರು ಭಾಗದಲ್ಲಿ ಪಕ್ಷ ಬಲವರ್ಧನೆಗೆ ಒತ್ತು ನೀಡುವಂತೆ ಖಡಕ್ ಸೂಚನೆ ನೀಡಿದ್ದರು. ಈ ಭಾಗದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಹಣಾಹಣಿಯಿದ್ದು, ಬಿಜೆಪಿ ಸಂಟನೆಯ ವೈಲ್ಯದಿಂದ ಕೆಲವು ಕ್ಷೇತ್ರಗಳನ್ನು ಹೊರತುಪಡಿಸಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಈ ಭಾಗದಲ್ಲಿ ಒಕ್ಕಲಿಗರ ಪ್ರಾಬಲ್ಯ ಹೆಚ್ಚಿದ್ದು, ದೇವೇಗೌಡರ ಕುಟುಂಬ ಮತ್ತು ಡಿ.ಕೆ.ಶಿವಕುಮಾರ್ ಈ ಭಾಗದ ಒಕ್ಕಲಿಗ ನಾಯಕರಾಗೇ ಗುರುತಿಸಿಕೊಂಡಿದ್ಧಾರೆ. ಇದರ ಹೊರತಾಗಿಯೂ ಬಿಜೆಪಿಗೆ ಒಬ್ಬ ಪ್ರಬಲ ಒಕ್ಕಲಿಗ ನಾಯಕನ ಅಗತ್ಯವಿದ್ದು, ಈ ಸ್ಥಾನವನ್ನು ಯೋಗೇಶ್ವರ್ ಅವರು ತುಂಬುವ ಶಕ್ತಿ ಹೊಂದಿದ್ದಾರೆ ಎನ್ನುವ ಕಾರಣಕ್ಕಾಗಿಯೇ ಈ ಬಾರಿ ಸಂಪುಟ ಸರ್ಜರಿಯಲ್ಲಿ ಸಿಪಿವೈಗೆ ಸ್ಥಾನ ದೊರೆಯಲಿದೆ ಎನ್ನುವುದು ಅವರ ಅಭಿಮಾನಿಗಳ ವಾದ.
ದೊರೆಯುವುದೇ ಸ್ಥಾನ? ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವುದರ ಹಿಂದೆ ಸಿ.ಪಿ.ಯೋಗೇಶ್ವರ್ ಪಾತ್ರವೂ ಹಿರಿದು. ಇದಕ್ಕೆ ಪ್ರತಿಲ ಎಂಬಂತೆ ಯಡಿಯೂರಪ್ಪ ಅವರು ಯೋಗೇಶ್ವರ್ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುವ ಜತೆಗೆ ಮಂತ್ರಿಗಿರಿ ನೀಡಿದ್ದರು. ಆದರೆ ನಂತರ ಇಬ್ಬರ ನಡುವಿನ ಮುಸುಕಿನ ಗುದ್ದಾಟ ಯಡಿಯೂರಪ್ಪ ಅವರ ಪದಚ್ಯುತಿವರೆಗೂ ಎಳೆದು ತಂದಿತು. ಇದರ ಪರಿಣಾಮವಾಗಿ ಯೋಗೇಶ್ವರ್ ಅವರು ಬಸವರಾಜ ಬೊಮ್ಮಾಯಿ ಅವರ ಮಂತ್ರಿ ಮಂಡಲದ ಸದಸ್ಯರಾಗಿ ಉಳಿಯಲು ಸಾಧ್ಯವಾಗಲೇ ಇಲ್ಲ ಎನ್ನುವುದು ನಗ್ನ ಸತ್ಯ. ಆದರೆ, ಈಗ ಮತ್ತೆ ನಡೆಯುವ ಸಂಪುಟ ಸರ್ಜರಿಯಲ್ಲಿ ಯೋಗೇಶ್ವರ್ ಅವರಿಗೆ ಮಂತ್ರಿ ಸ್ಥಾನ ದೊರೆಯುತ್ತದೆ ಎನ್ನುವ ವಿಶ್ವಾಸ ಸಿಪಿವೈ ಅಭಿಮಾನಿಗಳಲ್ಲಿ ಇದೆಯಾದರೂ, ನಿಜವಾಗಲೂ ಇದು ಸಾಧ್ಯವೇ ಎನ್ನುವ ಪ್ರಶ್ನೆಯೂ ಮೂಡಿದೆ. ಲಭ್ಯ ಮಾಹಿತಿ ಪ್ರಕಾರ ಪ್ರಸ್ತುತ ಸನ್ನಿವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಹಳೇ ಮೈಸೂರು ಭಾಗದಲ್ಲಿ ಹೋರಾಡುವ ಶಕ್ತಿ ಯೋಗೇಶ್ವರ್ ಹೊರತಾಗಿ ಇನ್ಯಾವ ಬಿಜೆಪಿ ನಾಯಕರಿಗೂ ಇಲ್ಲ ಎನ್ನುವುದನ್ನು ಮನಗಂಡು ಪಕ್ಷ ಸಂಟನೆ ದೃಷ್ಟಿಯಿಂದ ಯೋಗೇಶ್ವರ್ ಅವರಿಗೆ ಮಂತ್ರಿ ಸ್ಥಾನ ದೊರೆಯಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೆಹಲಿಗೆ ತೆರಳಿ ಅಲ್ಲಿಂದ ಅನುಮೋದನೆ ಪಡೆದ ಪಟ್ಟಿ ಬಿಡುಗಡೆ ಮಾಡಿದ ನಂತರವಷ್ಟೇ ಎಲ್ಲವೂ ಸ್ಪಷ್ಟವಾಗಲಿದೆ ಎನ್ನುವುದಕ್ಕೆ ಹಿಂದಿನ ಹಲವು ಟನೆಗಳು ಉದಾಹರಣೆಯಾಗಿವೆ.
ಹಾಲಿ ಮೂರು ಸಚಿವರು :
ಪ್ರಸ್ತುತ ಬಸವರಾಜ ಬೊಮ್ಮಾಯಿ ಸಚಿವ ಸಂಪುಟದಲ್ಲಿ ರಾಮನಗರ ಜಿಲ್ಲೆ ಮೂಲದ ಮೂವರು ಮಂತ್ರಿಗಳಾಗಿದ್ದಾರೆ. ಮಾಗಡಿಯ ಚಿಕ್ಕಕಲ್ಯಾ ಗ್ರಾಮದ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಉನ್ನತ ಶಿಕ್ಷಣ ಸಚಿವರಾಗಿದ್ದರೆ, ಕನಕಪುರದ ಯಲವನಾಥದ ವಿ.ಸೋಮಣ್ಣ ವಸತಿ ಸಚಿವ, ಚನ್ನಪಟ್ಟಣದ ಶೆಟ್ಟಿಹಳ್ಳಿ ಗ್ರಾಮದ ಎಸ್.ಟಿ.ಸೋಮಶೇಖರ್ ಸಹಕಾರ ಸಚಿವರಾಗಿದ್ದಾರೆ. ಇವರಲ್ಲಿ ಅಶ್ವತ್ಥನಾರಾಯಣ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಉತ್ತಮ ಕೆಲಸಗಳನ್ನು ಮಾಡಿದ್ದರೂ ಕಳೆದ 2&3 ತಿಂಗಳಿಂದ ಇವರ ಗಮನ ಮಾಗಡಿ ಹೊರತಾಗಿ ಬೇರೆ ಕಡೆಗೆ ಸಾಗುತ್ತಿಲ್ಲ. ಇನ್ನು ಸಚಿವ ವಿ.ಸೋಮಣ್ಣ ಹಲವಾರು ಬಾರಿ ಜಿಲ್ಲೆಗೆ ಪ್ರವಾಸ ಕೈಗೊಂಡಿದ್ದರೂ, ಇದು ಕನಕಪುರ, ಮುದವಾಡಿ, ಯಲವನಾಥ ಸುತ್ತಲೇ ಗಿರಕಿ ಹೊಡೆಯುತ್ತಿರುತ್ತದೆ. ಆದರೆ, ಸೋಮಶೇಖರ್ ಮಾತ್ರ ಜಿಲ್ಲೆಯ ಭೇಟಿಗೆ ಹೆಚ್ಚಿನ ಒಲವು ತೋರಿಸಿಲ್ಲ.