ಜಿಲ್ಲೆ

ಸಂಪನ್ಮೂಲಗಳ ಮರುಬಳಕೆಗೆ ಮುಂದಾಗಿ

ಮೈಸೂರು: ದೇಶದ ಪ್ರಮುಖ ಸಂಶೋಧನಾ ಸಂಸ್ಥೆಗಳು ಸಂಪನ್ಮೂಲಗಳ ಮರುಬಳಕೆಗೆ ಹೆಚ್ಚು ಕ್ರಿಯಾಶೀಲವಾಗಬೇಕು ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಸಿಇಒ, ರೈತರ ಆದಾಯ ದ್ವಿಗುಣಗೊಳಿಸುವ ಸಮಿತಿಯ ಅಧ್ಯಕ್ಷ ಡಾ.ಅಶೋಕ ದಳವಾಯಿ ಹೇಳಿದರು.

ನಗರದ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ(ಸಿಎಫ್‌ಟಿಆರ್‌ಐ) ವತಿಯಿಂದ ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ‘ಒಂದು ವಾರ, ಒಂದು ಪ್ರಯೋಗಾಲಯ; ಆಹಾರ ಸಂಶೋಧನೆಯ ಸಂಭ್ರಮೋತ್ಸವ’ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಪಾಶ್ಚಾತ್ಯ ದೇಶಗಳಲ್ಲಿ ವಸ್ತುಗಳನ್ನು ಬಳಸಿ ಬಿಸಾಡುವ ಪ್ರವೃತ್ತಿ ಹೆಚ್ಚು. ಇದು ಭಾರತದಲ್ಲೂ ಕಾಣಿಸಿಕೊಳ್ಳುತ್ತಿದೆ. ಇದರಿಂದಾಗಿಯೇ ಜಾಗತಿಕ ತಾಪಮಾನ ಏರಿಕೆ, ಹವಾಮಾನ ಬದಲಾವಣೆ ಆಗುತ್ತಿದೆ. ಇದು ಜಗತ್ತು ಎದುರಿಸುತ್ತಿರುವ ದೊಡ್ಡ ಸವಾಲು. ಆದ್ದರಿಂದ ವಸ್ತುಗಳನ್ನು ಬಿಸಾಡುವ ಬದಲು, ಮರುಬಳಕೆ ಕಡೆಗೆ ಕ್ರಮ ವಹಿಸಬೇಕಿದೆ ಎಂದರು.

ಪೆಟ್ರೋಲ್ ಉತ್ಪನ್ನಗಳ ಬದಲು ಜೈವಿಕ ಅನಿಲ, ಸೌರಶಕ್ತಿ ಬಳಕೆಯನ್ನು ಉತ್ತೇಜಿಸಬೇಕಿದೆ. ವಿವಿಧ ಶಕ್ತಿ, ಇಂಧನ ಉತ್ಪಾದನೆಗೆ ವಿನಿಯೋಗಿಸುವ ಹಣವನ್ನು ಕಡಿಮೆ ಮಾಡಬೇಕು. ದೀರ್ಘಕಾಲದ ಬಳಕೆಗೆ ದಾರಿ ಮಾಡಿಕೊಡುವ ನವೀಕೃತ ಇಂಧನಗಳ ಬಳಕೆಗೆ ಮುಂದಾಗಬೇಕಿದೆ ಎಂದರು.

ಭಾರತದಲ್ಲಿ ನೈಸರ್ಗಿಕ ಸಂಪನ್ಮೂಲ ಇತಿಮಿತಿಯಲ್ಲಿದೆ. ಆದರೆ, ಇಡೀ ದೇಶ ಮಾನವ ಸಂಪನ್ಮೂಲವನ್ನು ನೆಚ್ಚಿಕೊಂಡಿದೆ. ಸಂಪನ್ಮೂಲಗಳ ಸಮರ್ಪಕ ಬಳಕೆಯಲ್ಲೂ ಮುಂಚೂಣಿಯಲ್ಲಿ ಇದೆ. ಸ್ವಾತಂತ್ರೃದ ಅಮೃತ ಮಹೋತ್ಸವ ಸಂದರ್ಭದಲ್ಲಿ ಭಾರತವು ಕೃಷಿ, ಆಹಾರ, ಕೈಗಾರಿಕೆ, ತಂತ್ರಜ್ಞಾನ, ಬಾಹ್ಯಾಕಾಶ ಸೇರಿದಂತೆ ಎಲ್ಲ ವಲಯದಲ್ಲೂ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗಿದೆ. ಇದರೊಂದಿಗೆ ಭಾರತ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ ಎಂದರು.

ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, 7 ದಶಕಗಳಿಂದ ಸಿಎಫ್‌ಟಿಆರ್‌ಐ ದೇಶಕ್ಕೆ ಉತ್ತಮ ಕೊಡುಗೆಯನ್ನು ನೀಡಿದೆ. ಆಹಾರ ಸ್ವಾವಲಂಬನೆಗೂ ನೆರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

2ನೇ ಮಹಾಯುದ್ಧದ ನಂತರ ಆಹಾರ ತಂತ್ರಜ್ಞಾನ ಪ್ರಗತಿಗಾಗಿ ಈ ಸಂಸ್ಥೆಯು ಮೈಸೂರಿನಲ್ಲಿ ಸ್ಥಾಪನೆ ಮಾಡಲಾಯಿತು. ಇದೀಗ ಯುವ ಜನರಲ್ಲಿ ಉದ್ಯಮಶೀಲತೆಗೆ ಪ್ರೋತ್ಸಾಹ ನೀಡುತ್ತಿದೆ ಎಂದು ಸ್ಮರಿಸಿದರು.

ಸಂಸ್ಥೆಯ ನಿರ್ದೇಶಕಿ ಡಾ.ಶ್ರೀದೇವಿ ಅನ್ನಪೂರ್ಣ ಸಿಂಗ್, ಸಂಸ್ಥೆ ಮಾಜಿ ನಿರ್ದೇಶಕರಾದ ಡಾ.ವಿ.ಪ್ರಕಾಶ್, ಡಾ.ಎಸ್.ಆರ್.ಭೌಮಿಕ್, ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ.ಬಿ.ವಿ.ಸತ್ಯೇಂದ್ರರಾವ್ ಇನ್ನಿತರರಿದ್ದರು.