ಗದಗ: ತಾಲೂಕಿನ ಕಳಸಾಪುರ ಗ್ರಾಮದ ಖಾಸಗಿ ಜಮೀನಿನಲ್ಲಿ ಸ್ಥಾಪಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಮೂರ್ತಿ ತೆರವು ಸಂಬಂಧ ಶನಿವಾರ ತಹಸೀಲ್ದಾರ್ ಮತ್ತು ದಲಿತ(ಚಲವಾದಿ) ಸಮುದಾಯ ನಡುವೆ ನಡೆದ ಮಾತುಕತೆ ವಿಫಲವಾಯಿತು.
ಜಮೀನು ಖಾಸಗಿಯವರಿಗೆ ಸೇರಿದೆ ಎಂದು ಸ್ಥಳೀಯ ಸಿವಿಲ್ ನ್ಯಾಯಾಲಯ ಆದೇಶ ನೀಡಿದೆ. ಮೂರ್ತಿ ತೆರವು ಸಂಬಂಧವೂ ಕೋರ್ಟ್ನಿಂದ ಆದೇಶ ಹೊರಬೀಳá-ವ ನಿರೀಕ್ಷೆ ಇದ್ದು, ಪ್ರಕರಣದ ಸೂಕ್ಷ್ಮತೆ ಅರಿತ ಗದಗ ತಹಸೀಲ್ದಾರ್ ಕಿಶನ್ ಕಲಾಲ್ ಅವರು ಗ್ರಾಪಂ ಸದಸ್ಯರು, ಸಮುದಾಯದವರ ಜತೆ ಮಾತುಕತೆ ನಡೆಸಲು ಸಿಬ್ಬಂದಿಯೊಂದಿಗೆ ಕಳಸಾಪುರ ಗ್ರಾಪಂ ಕಚೇರಿಗೆ ತೆರಳಿದ್ದರು. ವಿಷಯ ತಿಳಿದ ಸಮುದಾಯದ ಜನರು ಮೂರ್ತಿ ಸ್ಥಾಪಿಸಿದ ಸ್ಥಳದಲ್ಲೇ ಪ್ರತಿಭಟನೆ ಆರಂಭಿಸಿದರು. ಪ್ರಕರಣದ ಹಿನ್ನೆಲೆ, ಕೋರ್ಟ್ ಆದೇಶ ಪಾಲನೆ ಕುರಿತು ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಪಟ್ಟು ಬಿಡದ ಪ್ರತಿಭಟನಾಕಾರರು, ಮೂರ್ತಿ ತೆರವಿಗೆ ಅವಕಾಶ ನೀಡುವುದಿಲ್ಲ ಎಂದು ಪ್ರತಿಪಾದಿಸಿದರು.
ಪ್ರಕರಣದ ಹಿನ್ನೆಲೆ: ಕಳಸಾಪುರ ಗ್ರಾಮಕ್ಕೆ ಹೊಂದಿಕೊಂಡಂತೆ ಮುಖ್ಯ ರಸ್ತೆಯ ಪಕ್ಕದಲ್ಲಿರುವ 2.37 ಎಕರೆ ಜಮೀನಿನಲ್ಲಿ 2016ರಲ್ಲಿ ಅಂಬೇಡ್ಕರ್ ಮೂರ್ತಿ ಸ್ಥಾಪಿಸಲಾಗಿತ್ತು. ಆಗ ಸ್ಥಳದಲ್ಲಿ ಉದ್ವಿಗ್ನತೆ ನಿರ್ವಣವಾಗಿದ್ದರಿಂದ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಜಮೀನು ನಮಗೆ ಸೇರಿದ್ದು ಎಂದು ಮಾಂಡ್ರೆ ಕೌಜಗೇರಿ ಎಂಬುವರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ನ್ಯಾಯಾಲಯ ಮಾಂಡ್ರೆ ಕೌಜಗೇರಿ ಅವರ ವಾದ ಊರ್ಜಿತಗೊಳಿಸಿದೆ.
ತಹಸೀಲ್ದಾರ್ ಪ್ರಯತ್ನ: ತಹಸೀಲ್ದಾರ್ ಸ್ಥಳಕ್ಕೆ ಬರುತ್ತಿದ್ದಂತೆ ಪ್ರತಿಭಟನಾಕಾರರ ಘೊಷನೆಗಳ ಕೂಗು ಹೆಚ್ಚಾಯಿತು. ಅವರ ಮನವೊಲಿಸಲು ತಹಸೀಲ್ದಾರ್ ಪ್ರಯತ್ನಿಸಿದರು. ಜಮೀನಿನ ಮಾಲೀಕರ ಪರ ನ್ಯಾಯಾಲಯ ಆದೇಶ ನೀಡಿದೆ. ವಿಚಾರಣೆ ಮುಕ್ತಾಯವಾಗಿದ್ದು, ಸದ್ಯದರಲ್ಲೇ ಆದೇಶ ಹೊರಬೀಳಲಿದೆ. ನ್ಯಾಯಾಲಯದ ಆದೇಶ ಪಾಲನೆ ನಮ್ಮ ಕರ್ತವ್ಯ. ಪ್ರತಿಭಟನಾಕಾರರು ಕಾನೂನು ಹೋರಾಟ ನಡೆಸಲು ಮಾರ್ಗವಿದೆ ಎಂದು ಮನವರಿಕೆ ಮಾಡಿಕೊಟ್ಟರು.
ಪ್ರಕರಣದಲ್ಲಿ ಸ್ಥಳೀಯರ ಅಭಿಪ್ರಾಯ ಸಂಗ್ರಹಿಸಲು ಮತ್ತು ತಿಳಿವಳಿಕೆ ನೀಡಲು ಸಭೆ ಕರೆಯಲಾಗಿತ್ತು. ಕರ್ತವ್ಯ ಮತ್ತು ಸಾಮಾಜಿಕ ಜವಾಬ್ದಾರಿ, ಹಿತದೃಷ್ಟಿಯಿಂದ ಮಾತುಕತೆ ನಡೆಸಲು ಬಂದಿದ್ದೇನೆ. ಪ್ರತಿಭಟನೆ ಬದಲಾಗಿ ಕಾನೂನು ಮೂಲಕ ಮಾರ್ಗ ಕಾಣುವುದು ಒಳಿತು ಎಂದು ಮನವೊಲಿಸಲು ಪ್ರಯತ್ನಿಸಿದರು.
ಪ್ರತಿಭಟನಾಕಾರ ವಾದ: 2.37 ಎಕರೆ ಜಮೀನನ್ನು ಕಾನೂನು ಬಾಹಿರವಾಗಿ ರಿಯಲ್ ಎಸ್ಟೇಟ್ ಉದ್ಯಮಿಗಳು ಪರಭಾರೆ ಮಾಡಿಕೊಂಡಿದ್ದಾರೆ. ಈ ಜಮೀನು ಮೂಲತಃ ಚಾಕ್ರಿ ಜಮೀನಾಗಿದೆ. ನ್ಯಾಯಾಲಯ ಮಾರ್ಗ ಕಂಡುಕೊಳ್ಳಲು ನಾವು ಸ್ಥಿತಿವಂತರಲ್ಲ. ಪ್ರತಿಭಟನೆ ಮೂಲಕವೇ ನ್ಯಾಯ ಪಡೆಯುತ್ತೇವೆ. ಹಲವು ವರ್ಷಗಳ ಹಿಂದೆಯೇ ಇಲ್ಲಿ ಬಿ.ಆರ್.ಅಂಬೇಡ್ಕರ್ ಮೂರ್ತಿ ಸ್ಥಾಪನೆ ಆಗಿದ್ದು, ಜಮೀನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಆಕ್ಷೇಪಿಸಿದರು. ನಂತರ ತಹಸೀಲ್ದಾರ್ ಸ್ಥಳದಿಂದ ತೆರಳಿದರು.
ಜಮೀನು ಮಾಲೀಕರೊಂದಿಗೆ ಸಭೆ: ಕೆಲವು ವರ್ಷಗಳ ಹಿಂದೆ ಪ್ರಕರಣ ತೀವ್ರ ಸ್ವರೂಪ ಪಡೆದá-ಕೊಂಡಾಗ ಜಿಲ್ಲಾಡಳಿತವೇ ಮಾಲೀಕರಿಂದ ಜಮೀನು ಖರೀದಿಸಿ ಸಮುದಾಯಕ್ಕೆ ನೀಡುವ ಪ್ರಸ್ತಾವ ಜಿಲ್ಲಾಧಿಕಾರಿ ಮುಂದೆ ಇಡಲಾಗಿತ್ತು. ಮಾಲೀಕರ ಜತೆ ಎರಡು ಬಾರಿ ಸಭೆಯೂ ನಡೆಸಲಾಗಿತ್ತು. ಎಕರೆಗೆ 50 ರಿಂದ 65 ಲಕ್ಷ ರೂಪಾಯಿಗೆ ಖರೀದಿಸುವ ಮಾತುಕತೆ ನಡೆದಿತ್ತು. ಆದರೆ, ಮಾಲೀಕರು ಈ ಒಪ್ಪಂದವನ್ನು ತಿರಸ್ಕರಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಈ ಪ್ರಕರಣದ ಹಿಂದೆ ರಿಯಲ್ ಎಸ್ಟೇಟ್ ಲಾಬಿ ಇದೆ. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎನ್ನುವಂತೆ ಬಡವರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಶಾಸಕ ಎಚ್.ಕೆ.ಪಾಟೀಲ ಅವರು ಮಧ್ಯಸ್ಥಿಕೆ ವಹಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು. -ಸುಭಾಷ ಸೋಂಪುರ, ಸ್ಥಳೀಯ ಮುಖಂಡ
ಈ ಜಮೀನು ಚಾಕ್ರಿ ಜಮೀನು ಆಗಿದ್ದೇ ಆದರೆ ನ್ಯಾಯಾಲಯದ ಮೊರೆ ಹೋಗುವುದು ಉತ್ತಮ. ನ್ಯಾಯಾಲಯದ ಆದೇಶ ಪಾಲಿಸುವುದಷ್ಟೇ ನಮ್ಮ ಕರ್ತವ್ಯ.-ಕಿಶನ್ ಕಲಾಲ್ ತಹಸೀಲ್ದಾರ್, ಗದಗ