ಜಿಲ್ಲೆ

ಸಂತ್ರಸ್ತರ ಬಗ್ಗೆ ಸರ್ಕಾರದ ನಿರ್ಲಕ್ಷ್ಯ

ಸಾಗರ: ನಾಡಿಗೆ ವಿದ್ಯುತ್ ನೀಡಲು ತಮ್ಮ ಸರ್ವಸ್ವ ಕಳೆದುಕೊಂಡು ಸಂಕಷ್ಟ ಜೀವನ ನಡೆಸುತ್ತಿರುವ ಸಂತ್ರಸ್ತರ ಬದುಕಿನ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲವಾಗಿದೆ ಎಂದು ತಾಲೂಕು ಪ್ರಗತಿಪರ ಯುವ ಒಕ್ಕೂಟದ ಅಧ್ಯಕ್ಷ ರಮೇಶ್ ಈ. ಕೆಳದಿ ದೂರಿದರು.

1926ರ ಹಿರೇಭಾಸ್ಕರ ಅಣೆಕಟ್ಟು ಹಾಗೂ 1956ರ ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣ ಸಂದರ್ಭದಲ್ಲಿ ಸಾವಿರಾರು ಕುಟುಂಬಗಳು ಸರ್ವಸ್ವ ಕಳೆದುಕೊಂಡಿವೆ. ಸಂತ್ರಸ್ತ ಕುಟುಂಬಗಳಿಗೆ ಜಿಲ್ಲೆಯ ವಿವಿಧೆಡೆ ಅರಣ್ಯದಲ್ಲಿ ಜಮೀನು ನೀಡಲಾಗಿದೆ. ಆದರೆ ಸರ್ಕಾರ ಜಮೀನು ನೀಡಿದೆಯೇ ವಿನಃ ಯಾವುದೇ ಹಕ್ಕುಪತ್ರ ನೀಡಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ, ಹೊಸನಗರ ಹೀಗೆ ಬೇರೆ ಬೇರೆ ಭಾಗದ ಅರಣ್ಯದಲ್ಲಿ ಜಮೀನು ನೀಡಲಾಗಿದೆ. ಈ ಕುಟುಂಬಗಳು ತಮಗೆ ಜಮೀನು ನೀಡಿದ ಜಾಗದಲ್ಲಿಯೇ ಕೃಷಿ ಚಟುವಟಿಕೆ ನಡೆಸಿಕೊಂಡು, ಮನೆ, ಕೊಟ್ಟಿಗೆ ನಿರ್ವಿುಸಿಕೊಂಡು ಜೀವನ ನಡೆಸುತ್ತಿವೆ. ಆದರೆ ಸರ್ಕಾರ ನೀಡಿದ ಜಮೀನು ಸ್ವಂತದ್ದಾಗಿಲ್ಲ ಎಂಬ ಭೀತಿಯಲ್ಲೇ ಬದುಕುವಂತಾಗಿದೆ ಎಂದರು.

ಅರಣ್ಯ ಇಲಾಖೆ ಹಲವು ಎಕರೆ ಭೂಮಿಯನ್ನು ಡಿನೋಟಿಫಿಕೇಶನ್ ಮಾಡಿದೆ. ಅರಣ್ಯೇತರ ಭೂಮಿಯನ್ನು ಕಂದಾಯ ಭೂಮಿಯಾಗಿ ಪರಿವರ್ತಿಸಿದ್ದಾರೆ. ಆದರೆ ಸಂತ್ರಸ್ತರಿಗೆ ಮಾತ್ರ ಈತನಕ ಸರ್ಕಾರದಿಂದ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಕಳೆದ 50 ವರ್ಷಗಳಿಂದ ಭೂಮಿಯ ಹಕ್ಕು, ಪಹಣಿ ಇಲ್ಲದೆ ಇರುವುದರಿಂದ ಸಂತ್ರಸ್ತರು ಸರ್ಕಾರದ ಎಲ್ಲ ಸೌಲಭ್ಯದಿಂದ ವಂಚಿತರಾಗಿದ್ದಾರೆ ಎಂದು ದೂರಿದರು.

ಸರ್ಕಾರ ಇನ್ನಾದರೂ ಸಂತ್ರಸ್ತರ ಭೂಮಿಗೆ ಹಕ್ಕು ನೀಡಬೇಕು. ಇಲ್ಲವಾದಲ್ಲಿ ಪ್ರಗತಿಪರ ಯುವ ಒಕ್ಕೂಟದ ನೇತೃತ್ವದಲ್ಲಿ ಎಲ್ಲ ಸಂತ್ರಸ್ತರನ್ನು ಒಳಗೊಂಡು ಬೃಹತ್ ಪ್ರತಿಭಟನೆ ನಡೆಸುವುದು ಅನಿವಾಯರ್å ಎಂದು ಎಚ್ಚರಿಕೆ ನೀಡಿದರು.

ನಾರಾಯಣಪ್ಪ, ಗೋಪಾಲ, ಅಶೋಕ್, ಸುರೇಶ್ ಕೆಳದಿ, ಮಹಾಬಲೇಶ್, ಶಿವಪ್ಪ, ಈಶ್ವರಪ್ಪ ಸುದ್ದಿಗೋಷ್ಠಿಯಲ್ಲಿದ್ದರು.