ಕೊಳ್ಳೇಗಾಲ: ತಾಲೂಕಿನ ಹಿತ್ತಲದೊಡ್ಡಿ ಗ್ರಾಮದಲ್ಲಿ ರಸ್ತೆ ಜಾಗ ವಿಚಾರಕ್ಕೆ ಕುಟುಂಬವೊಂದನ್ನು ಸ್ವಗ್ರಾಮದ ಯಜಮಾನರೇ ಬಹಿಷ್ಕರಿಸಿದ್ದಾರೆ ಎಂಬ ಆರೋಪ ಹಾಗೂ ಅವರು ವಾಸಿಸುವ ಮನೆಗೆ ತೆರಳುವ ರಸ್ತೆಗೆ ಅಡ್ಡಲಾಗಿ ಟ್ರಂಚ್ ನಿರ್ಮಿಸಿದ್ದಾರೆ ಎಂಬ ದೂರು ಅರ್ಜಿ ವಿಚಾರಣೆ ಸಂಬಂಧ ಕಂದಾಯ ಇಲಾಖೆ ಅಧಿಕಾರಿಗಳು ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲೂಕು ಕಚೇರಿಯಲ್ಲಿ ಮಂಗಳವಾರ ಉಪವಿಭಾಗಾಧಿಕಾರಿ ಗೀತಾ ಹುಡೇದ ನೇತೃತ್ವದಲ್ಲಿ ನಡೆದಿದ್ದ ಸಾರ್ವಜನಿಕರ ದೂರು ಅರ್ಜಿ ಸ್ವೀಕಾರ ಕಾರ್ಯಕ್ರಮದಲ್ಲಿ ತಾಲೂಕಿನ ಹಿತ್ತಲದೊಡ್ಡಿ ಗ್ರಾಮದ ಜಿ.ಮರಿಸ್ವಾಮಿ ನೀಡಿದ್ದ ದೂರು ಅರ್ಜಿ ವಿಚಾರಕ್ಕೆ ಸಂಬಂಧಿಸಿದಂತೆ ರಾಜಸ್ವ ನಿರೀಕ್ಷಕ ನಿರಂಜನ್, ಗ್ರಾಮ ಲೆಕ್ಕಾಧಿಕಾರಿ ಪ್ರದೀಪ್, ಸಹಾಯಕ ಪಿಎಸ್‌ಐ ಜಡೇಸ್ವಾಮಿ ದೂರದಾರ ಮರಿಸ್ವಾಮಿ ಮನೆಗೆ ಭೇಟಿ ನೀಡಿ, ಮಾಹಿತಿ ಪಡೆದರು.
ಈ ವೇಳೆ ದೂರುದಾರ ಜಿ.ಮರಿಸ್ವಾಮಿ ಮಾತನಾಡಿ, ಕುಣಗಳ್ಳಿ ಗ್ರಾಮದ ಸರ್ವೆ ನಂ. 530/1ನಲ್ಲಿ 3.05 ಎಕರೆ ಜಮೀನಿದೆ. ಈ ನನ್ನ ಜಮೀನಿಗೆ ಸೇರಿದ ಭೂಮಿಯನ್ನು ರಸ್ತೆಗೆ ಬಿಡುವಂತೆ ಹಿತ್ತಲದೊಡ್ಡಿ ಹಾಗೂ ಕುಣಗಳ್ಳಿ ಯಜಮಾನರು ಒತ್ತಾಯಿಸುತ್ತಿದ್ದಾರೆ. ಇದಕ್ಕೆ ನಿರಾಕರಿಸಿದ್ದಕ್ಕೆ ನಾವು ಸಂಚರಿಸುವ ರಸ್ತೆಗೆ ಅಡ್ಡಲಾಗಿ ಶುಕ್ರವಾರ ಟ್ರಂಚ್ ನಿರ್ಮಿಸಿ ತಿರುಗಾಡದ ರೀತಿ ಮಾಡಿದ್ದಾರೆ. ಜತೆಗೆ ನಮ್ಮ ಕುಟುಂಬವನ್ನು ಬಹಿಷ್ಕರಿಸಿ 50 ಸಾವಿರ ರೂ. ದಂಡ ಕಟ್ಟುವಂತೆ ಹೇಳುತ್ತಿದ್ದಾರೆ ಎಂದು ಆರೋಪಿಸಿದರು.