ಮುದ್ದೇಬಿಹಾಳ ತಾಲೂಕಿನ ಸಿದ್ದಾಪೂರ ಪಿ.ಟಿ. ಗ್ರಾಮದ ಬಳಿ ಕಾಲುವೆಗೆ ಜಮೀನು ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ಒದಗಿಸಿಕೊಡುವುದಾಗಿ ಕೆಬಿಜೆಎನ್‌ಎಲ್ ಅಧಿಕಾರಿಗಳು ಲಿಖಿತ ಪತ್ರ ನೀಡಿದ್ದರಿಂದ ಹೋರಾಟ ಅಂತ್ಯಗೊಳಿಸಿದರು. 
ಜಿಲ್ಲೆ

ಸಂತ್ರಸ್ತ ರೈತರಿಗೆ ಪರಿಹಾರ ಕೊಡುವ ಭರವಸೆ

ಮುದ್ದೇಬಿಹಾಳ: ಚಿಮ್ಮಲಗಿ ಏತ ನೀರಾವರಿ ಎಡದಂಡೆ ಕಾಲುವೆಗಾಗಿ ಜಮೀನು ಕಳೆದುಕೊಂಡ ತಾಲೂಕಿನ ಸಿದ್ದಾಪೂರ ಪಿ.ಟಿ. ಸಂತ್ರಸ್ತ ರೈತರು ಮೂರು ದಿನಗಳಿಂದ ಕಾಲುವೆಗೆ ಮಣ್ಣು ಹಾಕಿ ನೀರು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಕೆಬಿಜೆಎನ್‌ಎಲ್ ಭೂಸ್ವಾಧೀನ ವಿಭಾಗದ ವಿಶೇಷ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಸೋಮವಾರ ಭೇಟಿ ನೀಡಿ, ರೈತರೊಂದಿಗೆ ನಡೆಸಿದ ಮಾತುಕತೆ ಫಲಪ್ರದವಾಗಿದ್ದು ಅಧಿಕಾರಿಗಳ ಲಿಖಿತ ಭರವಸೆ ಮೇರೆಗೆ ರೈತರು ಹೋರಾಟವನ್ನು ಅಂತ್ಯಗೊಳಿಸಿದರು.

ಮೂರನೇ ದಿನಕ್ಕೆ ಕಾಲಿಟ್ಟಿದ್ದ ರೈತರ ಹೋರಾಟದ ಸ್ಥಳಕ್ಕೆ ಕೆಬಿಜೆಎನ್‌ಎಲ್ ಇಇ ಆರ್.ಎಲ್. ಹಳ್ಳೂರ, ಎಇಇ ಅಬೂಬಕರ್ ಬಾಗವಾನ, ಅಶೋಕ ಬಿರಾದಾರ, ಸುನೀಲಕುಮಾರ ಮೊದಲಾದ ಹಿರಿಯ ಅಧಿಕಾರಿಗಳೊಂದಿಗೆ ರೈತರ ಮನವೊಲಿಸುವುದಕ್ಕೆ ಮುಂದಾದರು.

ಹೋರಾಟದ ನೇತೃತ್ವ ವಹಿಸಿದ್ದ ಯುವ ಮುಖಂಡ ಗುರು ರಾಯಗೊಂಡ, ಕಳೆದ ಹನ್ನೆರಡು ವರ್ಷಗಳಿಂದ ನಮಗೆ ಜಮೀನು ಕಳೆದುಕೊಂಡಿದ್ದರೂ ಪರಿಹಾರ ಬಂದಿಲ್ಲ. ಆಲಮಟ್ಟಿ ಎಸ್‌ಎಲ್‌ಓ ಅಧಿಕಾರಿ ಶಿವಾನಂದ ಸಾಗರ ಅವರನ್ನು ವಿಚಾರಿಸಲು ಹೋದರೆ ರೈತರೊಂದಿಗೆ ಉಡಾಫೆಯಿಂದ ಮಾತನಾಡುತ್ತಾರೆ. ನಮ್ಮ ಜಮೀನು ಕಳೆದುಕೊಂಡಿದ್ದಕ್ಕೆ ದಾಖಲೆಗಳೇ ಇಲ್ಲವೆಂದು ಬೇಜವಾಬ್ದಾರಿತನದ ಉತ್ತರ ನೀಡುತ್ತಾರೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ಬಾಗಲಕೋಟೆಯ ಕೆಬಿಜೆಎನ್‌ಎಲ್ ಭೂಸ್ವಾಧೀನ ವಿಭಾಗದ ವಿಶೇಷ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ರೈತರ ಸಮಸ್ಯೆಯನ್ನು ಆಲಿಸಿದರು. ಕಳೆದ 12 ವರ್ಷದಿಂದ ರೈತರಿಗೆ ಪರಿಹಾರ ಒದಗಿಸುವ ಭರವಸೆಯನ್ನು ನೀಡಿ, ಪರಿಹಾರಕ್ಕೆ ಆದೇಶ ಇರದ 18 ರೈತರಿಗೆ ಸೇರಿದಂತೆ ಚಿಮ್ಮಲಗಿ ಏತ ನೀರಾವರಿ ಯೋಜನೆಯ ಎಡದಂಡೆ ಕಾಲುವೆಯ ಹೆಚ್ಚುವರಿ ಕ್ಷೇತ್ರದ 0.484 ದಿಂದ 2.193 ಕಿಮೀ ವರೆಗಿನ ಜಮೀನು ಕಳೆದುಕೊಂಡ ಸಂತ್ರಸ್ತ ರೈತರಿಗೆ ಒಣಬೇಸಾಯ ಜಮೀನಿಗೆ ಎಕರೆಗೆ 20 ಲಕ್ಷ ರೂ ಹಾಗೂ ನೀರಾವರಿ ಎಕರೆ ಜಮೀನಿಗೆ 24 ಲಕ್ಷ ರೂ. ಪರಿಹಾರ ಬರುತ್ತದೆ. ಅದು ಒಪ್ಪಿತ ನಿಯಮದಂತೆ ನಡೆದುಕೊಳ್ಳುವುದಾದರೆ ತ್ವರಿತವಾಗಿ ಪರಿಹಾರ ದೊರಕಿಸಿಕೊಡುವ ಕಾರ್ಯ ಮಾಡುತ್ತೇವೆ. ಸಿದ್ದಾಪುರ ಪಿಟಿ ಗ್ರಾಮದ ರೈತರಿಗೆ ಪರಿಹಾರವನ್ನು ಒದಗಿಸಲು 3 ಕೋಟಿ ರೂ. ಠೇವಣಿ ಇಡುವಂತೆ ಕೆಬಿಜೆಎನ್‌ಎಲ್ ಎಂಡಿ ಅವರೊಂದಿಗೆ ಮಾತನಾಡಿದ್ದೇನೆ ಎಂದು ಹೇಳಿದರು.

ಈ ವೇಳೆ ಕೆಲವು ರೈತರು ಸಹನೆ ಕಳೆದುಕೊಂಡು ಅಧಿಕಾರಿಗಳ ವಿರುದ್ಧ ಕೂಗಾಡಿದರು. ಕೆಲವರಂತೂ ತಾವೇನು ಮಾತನಾಡುತ್ತಿದ್ದೇವೆ ಎಂಬುದನ್ನೇ ಮರೆತಂತೆ ವರ್ತಿಸಿದರು. ಆದರೂ ಸಹನೆ ಕಳೆದುಕೊಳ್ಳದೇ ಅಧಿಕಾರಿಗಳು ಸಂತ್ರಸ್ತ ರೈತರಿಗೆ ಸೂಕ್ತ ತಿಳಿವಳಿಕೆ ನೀಡಿ ಕಾನೂನಾತ್ಮಕ ಪರಿಹಾರ ಒದಗಿಸುವುದಾಗಿ ಹೇಳಿದರು.

ಬಳಿಕ ಕೆಬಿಜೆಎನ್‌ಎಲ್ ಇಇ ಆರ್.ಎಲ್. ಹಳ್ಳೂರ ಸಹಿ ಮಾಡಿದ ಲಿಖಿತ ಪತ್ರ ನೀಡಿ ಆರು ತಿಂಗಳಲ್ಲಿ ರೈತರಿಗೆ ಪರಿಹಾರದ ಹಣ ತಲುಪಿಸುವ ಕಾರ್ಯ ಮಾಡುತ್ತೇವೆ ಎಂದು ಭರವಸೆ ನೀಡಿದ ಬಳಿಕ ಹೋರಾಟ ಅಂತ್ಯಗೊಳಿಸಲಾಯಿತು.

ಸಂತ್ರಸ್ತ ರೈತರಾದ ವಿಠ್ಠಲ ಹಾಲ್ಯಾಳ, ಶಾಂತಪ್ಪ ಬ್ಯಾಕೋಡ, ಗುರುಸಿದ್ದಪ್ಪ ಗೋಡಿಕಾರ, ಸಿದ್ದಪ್ಪ ಸೋಮನಾಳ, ಶಿವಾನಂದ ಬಾಗೇವಾಡಿ ಇತರರಿದ್ದರು. ಪಿಎಸ್‌ಐ ಆರೀಫ ಮುಶಾಪುರಿ ಹಾಗೂ ಪೊಲೀಸ್ ಸಿಬ್ಬಂದಿ ಭದ್ರತೆ ಒದಗಿಸಿದ್ದರು.ಎಸ್‌ಎಲ್‌ಓ ಕಚೇರಿ ಭೂಮಾಪಕರಾದ ಕವನ್ ಕುಲಕರ್ಣಿ, ಸಮೀರ್ ಪಠಾಣ ಇದ್ದರು.