ಜಿಲ್ಲೆ

ಸಂತ್ರಸ್ತ ರೈತರಿಗೆ ತಕ್ಷಣ ಪರಿಹಾರ ಕೊಡಿ

ಬೀದರ್: ಆಲಿಕಲ್ಲು ಮಳೆಯಿಂದಾಗಿ ಬೆಳೆ ಕಳೆದುಕೊಂಡಿರುವ ರೈತರಿಗೆ ಸರ್ಕಾರ ತಕ್ಷಣ ಸೂಕ್ತ ಪರಿಹಾರ ನೀಡಬೇಕು ಎಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ, ಡಾ.ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಷನ್ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಒತ್ತಾಯಿಸಿದ್ದಾರೆ.

ಆಲಿಕಲ್ಲು ಮಳೆಪೀಡಿತ ಮರಕಲ್ ಗ್ರಾಮಕ್ಕೆ ಭೇಟಿ ನೀಡಿ ಬೆಳೆ ಹಾನಿ ಪರಿಶೀಲಿಸಿದ ಅವರು, ರೈತರು ಬೆಳೆ ಕಳೆದುಕೊಂಡು ಕಷ್ಟದಲ್ಲಿದ್ದಾರೆ. ಮಾವು ಮತ್ತಿತರ ತೋಟಗಾರಿಕೆ ಬೆಳೆಗಳು, ಜೋಳ, ಕುಸುಬೆ, ತರಕಾರಿ ಆಲಿಕಲ್ಲು ಮಳೆಯಿಂದಾಗಿ ಹಾಳಾಗಿದ್ದರಿಂದ ರೈತರ ಕಷ್ಟ ಕಣ್ಣೀರು ತರಿಸುವಂತಿದೆ. ಕೃಷಿ ಮತ್ತಿತರ ಇಲಾಖೆ ಅಕಾರಿಗಳು ಹಾನಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಆಗ್ರಹಿಸಿದರು.

ಕೃಷಿ ಇಲಾಖೆ ನಿರ್ದೇಶಕರೊಂದಿಗೆ ಮೊಬೈಲ್ ನಲ್ಲಿ ಮಾತನಾಡಿದ ನಾಗಮಾರಪಳ್ಳಿ, ಆಲಿಕಲ್ಲು ಮಳೆಯಿಂದಾಗಿ ಆಗಿರುವ ಬೆಳೆ ಹಾನಿ ಕುರಿತು ಮಾಹಿತಿ ನೀಡಿದರು. ತಕ್ಷಣ ಸರ್ವೇ ನಡೆಸಿ ಸಂತ್ರಸ್ತ ರೈತರಿಗೆ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಸ್ಪಂದಿಸಿದ ನಿರ್ದೇಶಕರು, ನಿಯಮಾನುಸಾರ ಸಮೀಕ್ಷೆ ನಡೆಸಿ ಪರಿಹಾರ ಕೊಡಲಾಗುವುದು ಎಂದು ಭರವಸೆ ನೀಡಿದರು.

ಸ್ಥಳದಲ್ಲಿದ್ದ ರೈತ ಮುಖಂಡ ಶಂಕರ ಪಾರಾ ಅವರೂ ಕೃಷಿ ನಿರ್ದೇಶಕರ ಜತೆ ಮಾತನಾಡಿ, ಅನ್ನದಾತರ ಕಷ್ಟವನ್ನು ವಿವರಿಸಿದರು. ಪ್ರಮುಖರಾದ ಚನ್ನಯ್ಯ ಸ್ವಾಮಿ, ಕಾಮಶೆಟ್ಟಿ ಬುಯ್ಯಾ, ರಮೇಶ ಬುಯ್ಯಾ, ಪ್ರಶಾಂತ ಬಿರಾದಾರ್, ಸತೀಶ ಪಾರಾ ಇತರರಿದ್ದರು.

ಕಷ್ಟಕ್ಕೆ ಸ್ಪಂದಿಸದ ಖಾನ್: ಹಿಂದೆ ಮಳೆಯಿಂದಾಗಿ ಸೋಯಾ ಬೆಳೆ ಹಾಳಾದಾಗಲೂ ಸೂರ್ಯಕಾಂತ ನಾಗಮಾರಪಳ್ಳಿ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದರು. ಆಗ ಬೆಳೆ ಕಳೆದುಕೊಂಡವರಿಗೆ ಪರಿಹಾರ ಸಿಕ್ಕಿತ್ತು ಎಂದು ಗ್ರಾಮದ ರೈತ ರಮೇಶ ಬುಯ್ಯಾ ಹೇಳಿದರು. ಇದೀಗ ಬಿಳಿಜೋಳ, ತರಕಾರಿ ಬೆಳೆಗಳು ಹಾಳಾಗಿದ್ದು, ಸರ್ಕಾರ ರೈತರಿಗೆ ನೆರವಾಗಬೇಕು ಎಂದು ಒತ್ತಾಯಿಸಿದರು. ನಾಲ್ಕೂವರೆ ವರ್ಷದಲ್ಲಿ ಶಾಸಕ ರಹೀಮ್ ಖಾನ್ ಒಮ್ಮೆ ಊರಿಗೆ ಬಂದಿದ್ದು, ರೈತರಿಗೆ ಯಾವುದೇ ಅನುಕೂಲ ಆಗಿಲ್ಲ ಎಂದು ಬುಯ್ಯಾ ಆರೋಪಿಸಿದರು.