ಧಾರವಾಡ: ಕುಸ್ತಿ ಕ್ರೀಡಾಕೂಟ ಎಂದ ತಕ್ಷಣ ಧಾರವಾಡದಲ್ಲಿ ನಡೆದಿದ್ದ ರಾಜ್ಯ ಒಲಿಂಪಿಕ್ಸ್ ವೇಳೆ ನಡೆದಿದ್ದ ದುರಂತ ನೆನಪಿಗೆ ಬರುತ್ತದೆ. ಕುಸ್ತಿ ಸ್ಪರ್ಧೆಯಲ್ಲಿ ಕಾಲು ಮುರಿದುಕೊಂಡು ಆಸ್ಪತ್ರೆ ಸೇರಿದ್ದ ಪ್ರತಿಭಾವಂತ ಯುವ ಕುಸ್ತಿಪಟು ದಾರುಣ ಸಾವನ್ನಪ್ಪಿದ್ದ. ಆತನ ಕುಟುಂಬಕ್ಕೆ ಘೊಷಣೆಯಾಗಿದ್ದ ಭರವಸೆಗಳು 3 ವರ್ಷವಾದರೂ ಈಡೇರಿಲ್ಲ.
ತಾಲೂಕಿನ ಚಿಕ್ಕಮಲ್ಲಿಗವಾಡ ಗ್ರಾಮದ ಬಡ ಕುಟುಂಬದ ಸಂತೋಷ ಹೊಸಮನಿ, 2017ರ ಫೆ. 8ರಂದು ರಾಜ್ಯ ಒಲಿಂಪಿಕ್ಸ್ ಕುಸ್ತಿ ಸ್ಪರ್ಧೆ ವೇಳೆ ತೊಡೆಯ ಮೂಳೆ ಮುರಿತಕ್ಕೊಳಗಾಗಿದ್ದರು. 20 ವರ್ಷದ ಗ್ರಾಮೀಣ ಪ್ರತಿಭೆ ಸಂತೋಷ ಕಿಮ್ಸ್ನಲ್ಲಿ ಶಸ್ತ್ರಚಿಕಿತ್ಸೆ ವೇಳೆ ಹೃದಯಸ್ತಂಭನದಿಂದ ಮೃತಪಟ್ಟ ಎಂದು ವರದಿಯಾಗಿದೆ.
ಆಯೋಜಕರ ಎಡವಟ್ಟು: ಅಂದು ನಡೆದಿದ್ದ 96 ಕೆಜಿ ವಿಭಾಗದ ಗ್ರೀಕೋ ರೋಮನ್ ಕುಸ್ತಿ ಸ್ಪರ್ಧೆಯಲ್ಲಿ ಸಂತೋಷನ ಬಲ ತೊಡೆಯ ಮೂಳೆ ಮುರಿದಿತ್ತು. ಗಾಯಾಳು ಸಂತೋಷನನ್ನು ಮೊದಲು ಎಸ್ಡಿಎಂ, ನಂತರ ಕಿಮ್ಸ್ಗೆ ಸಾಗಿಸಲಾಗಿತ್ತು. ನಂತರದ 6 ದಿನಗಳ ಕಾಲ ಆತನ ಕುಟುಂಬ, ಗೆಳೆಯರಿಗೆ ಜವಾಬ್ದಾರಿ ವಹಿಸಿದ್ದ ಜಿಲ್ಲಾಡಳಿತ ಕಟು ಟೀಕೆಗೊಳಗಾಗಿತ್ತು.
ಚಿಕಿತ್ಸಾ ವೆಚ್ಚಕ್ಕೆ ಮಾತ್ರ ವಿಮೆ: ಕ್ರೀಡೆಯಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳು ಹಾಗೂ ನೋಡುಗರಿಗೂ ರಾಜ್ಯ ಒಲಿಂಪಿಕ್ಸ್ ಸಂಸ್ಥೆ ವಿಮೆ ಮಾಡಿಸಿತ್ತು. ಅವಘಡದಲ್ಲಿ ಮೃತಪಟ್ಟರೆ 10 ಲಕ್ಷ ರೂ. ಪರಿಹಾರ, ಗಾಯಗೊಂಡರೆ 2 ಲಕ್ಷ ರೂ.ವರೆಗೆ ಚಿಕಿತ್ಸಾ ವೆಚ್ಚ ವಿಮೆ ಮಾಡಿಸಲಾಗಿದೆ ಎಂದು ಅಂದಿನ ಜಿಲ್ಲಾಧಿಕಾರಿ ಹೇಳಿದ್ದರು. ನಂತರ ಪ್ರಾಣಹಾನಿಗೆ ವಿಮೆ ಅನ್ವಯವಾಗುವುದಿಲ್ಲ ಎಂದು ಹೇಳಿ ಸಂತೋಷ ಕುಟುಂಬಕ್ಕೆ ಹಣಕಾಸಿನ ನೆರವು ನಿರಾಕರಿಸಿತ್ತು.
ಇನ್ನೂ ಈಡೇರದ ಭರವಸೆ: ಸಂತೋಷ ತಂದೆ ದ್ಯಾಮಣ್ಣ ಕೃಷಿ ಇಲಾಖೆಯಲ್ಲಿ ಡಿ ದರ್ಜೆ ನೌಕರರಾಗಿ ನಿವೃತ್ತಿಯಾಗಿದ್ದಾರೆ. ತಾಯಿ ಗೃಹಿಣಿ. ಇಬ್ಬರು ಅಣ್ಣಂದಿರು, ಇಬ್ಬರು ಸಹೋದರಿಯರಿದ್ದಾರೆ. ಕುಟುಂಬದ ಸಂಕಷ್ಟಕ್ಕೆ ಸ್ಪಂದಿಸಿದ್ದ ಸಂಸದ ಪ್ರಲ್ಹಾದ ಜೋಶಿ, ಅಂದಿನ ಸಚಿವ ಸಂತೋಷ ಲಾಡ್ ವೈಯಕ್ತಿಕ ನಗದು ನೆರವು ನೀಡಿದ್ದಾರೆ. ಜೊತೆಗೆ ಜಿಲ್ಲಾಡಳಿತ, ಪಾಲಿಕೆಯಿಂದ ಒಟ್ಟು 10 ಲಕ್ಷ ರೂ. ಪರಿಹಾರ ಸಿಕ್ಕಿದೆ. ಆದರೆ ಕುಟುಂಬದ ಸದಸ್ಯನಿಗೆ ಸರ್ಕಾರಿ ನೌಕರಿ, ನಿವೇಶನ ಸಹಿತ ಆಶ್ರಯ ಮನೆಯ ಭರವಸೆ ಇನ್ನೂ ಈಡೇರಿಲ್ಲ. ಕುಟುಂಬದವರು ಜಿಲ್ಲಾಧಿಕಾರಿ ಕಚೇರಿಗೆ ಎಡತಾಕುತ್ತಲೇ ಇದ್ದಾರೆ.
2017ರ ರಾಜ್ಯ ಒಲಿಂಪಿಕ್ಸ್ ದುರ್ಘಟನೆಯ ನೆನಪು ಮಾಸುವ ಮುನ್ನವೇ ಜಿಲ್ಲೆ ಕರ್ನಾಟಕ ಕುಸ್ತಿ ಹಬ್ಬದ ಆತಿಥ್ಯ ವಹಿಸಿದೆ. ನಗರದ ಕರ್ನಾಟಕ ಕಾಲೇಜು ಮೈದಾನದಲ್ಲಿ ಫೆ. 22ರಿಂದ 4 ದಿನಗಳ ಕುಸ್ತಿ ಹಬ್ಬ ನಡೆಯಲಿದೆ. ದೇಶ- ವಿದೇಶಗಳ ಕುಸ್ತಿಪಟುಗಳ ಭಾಗವಹಿಸಲಿದ್ದಾರೆ. ರಾಜ್ಯ ಸರ್ಕಾರ 2 ಕೋಟಿ ರೂ. ಅನುದಾನ ನೀಡಿದ್ದು, ಹೋಟೆಲ್ ಒಡೆಯರ ಸಂಘ, ಇತರ ಸಂಘ- ಸಂಸ್ಥೆಗಳು, ಬ್ಯಾಂಕ್, ಕೈಗಾರಿಕೋದ್ಯಮಿಗಳು ವಿವಿಧ ನೆರವು ಘೊಷಿಸಿವೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಹಾಗೂ ಯುವ ಸಬಲೀಕರಣ ಇಲಾಖೆ ವಿಮೆ ಮಾಡಿಸಿದೆ.
ಇಲಾಖೆಯ ಕೇಂದ್ರ ಕಚೇರಿಯಿಂದ ಕೆನರಾ ಬ್ಯಾಂಕ್ ಗುಂಪು ಜೀವವಿಮೆ ಮಾಡಿಸಲಾಗಿದೆ. ಅವಘಡವಾಗಿ ಜೀವಹಾನಿ ಸಂಭವಿಸಿದಲ್ಲಿ ಅಥವಾ ಗಾಯವಾದರೆ ಚಿಕಿತ್ಸೆ ವೆಚ್ಚಕ್ಕೆ ಬರೀ 2 ಲಕ್ಷ ರೂ. ವಿಮೆ ಸೌಕರ್ಯ ಸಿಗಲಿದೆ. 1,500 ಕುಸ್ತಿಪಟುಗಳ ವಿಮೆಯಾಗಿದ್ದು, ಸ್ಥಳದಲ್ಲೇ ನೋಂದಣಿ ಮಾಡುವವರಿಗೂ ವಿಸ್ತರಿಸಲಾಗುವುದು. | ಶಾಕೀರ್ಅಹ್ಮದ್ ತೊಂಡಿಖಾನ್, ಸಹಾಯಕ ನಿರ್ದೇಶಕ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜೀವಹಾನಿಗೆ 10 ಲಕ್ಷ ರೂ. ಪರಿಹಾರ ಎಂದಿದ್ದ ಜಿಲ್ಲಾಡಳಿತ ಕೇವಲ ಚಿಕಿತ್ಸಾ ವೆಚ್ಚಕ್ಕಷ್ಟೆ ವಿಮೆ ಮಾಡಿಸಿತ್ತು. ನಿವೇಶನ, ಆಶ್ರಯ ಮನೆ ಕೇಳಿದರೆ ಗ್ರಾ.ಪಂ.ನಲ್ಲಿ ವಿಚಾರಿಸಿಕೊಳ್ಳಿ ಎನ್ನುತ್ತಿದ್ದಾರೆ. 3 ವರ್ಷದಿಂದ ಕಚೇರಿಗೆ ಅಲೆದು ಸಾಕಾಗಿದೆ. ಈಗಿನ ಜಿಲ್ಲಾಧಿಕಾರಿಗಳು ಪರಿಶೀಲಿಸುವ ಭರವಸೆ ನೀಡಿದ್ದಾರೆ. | ರವಿ ಹೊಸಮನಿ, ಮೃತ ಸಂತೋಷ ಸಹೋದರ